ಬೊಮ್ಮಾಯಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಮಾಡಿಕೊಂಡ ಯಡವಟ್ಟುಗಳು ನೋಡಿ…

3 years ago

ಬೊಮ್ಮಾಯಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಮಾಡಿಕೊಂಡ ಯಡವಟ್ಟುಗಳು ನೋಡಿ…

1. ಒಳಮೀಸಲಾತಿ ಜಾರಿ ಮಾಡುವ ಭರದಲ್ಲಿ ಏಕಕಾಲಕ್ಕೆ ಸ್ಪರ್ಶ್ಯ, ಅಸ್ಪರ್ಶ್ಯ ಸಮುದಾಯಗಳನ್ನು ಎದುರು ಹಾಕಿಕೊಂಡಿದೆ.

*2. ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳು ಒಳಮೀಸಲಾತಿ ಜಾರಿಗೆ ಮೊದಲಿನಿಂದ ವಿರೋಧವಾಗಿದ್ದವು. ಸದಾಶಿವ ಆಯೋಗ ಹೇಳಿದ್ದಕ್ಕಿಂತ 1.5% ಹೆಚ್ಚುವರಿ ಮೀಸಲಾತಿಯಿಂದ ಈ‌ ಸಮುದಾಯಗಳು ಸಂತೃಪ್ತರಾಗಬಹುದೆಂಬ ಬಿಜೆಪಿ ಥಿಂಕ್ ಟ್ಯಾಂಕ್ ನಿರೀಕ್ಷೆ ಸುಳ್ಳಾಗಿದೆ.*

3. ಒಳಮೀಸಲಾತಿ ಜಾರಿಯಿಂದ ಮಾದಿಗ, ಹೊಲೆಯ ಸಮುದಾಯಗಳೂ ಸಮಾಧಾನಗೊಂಡಿಲ್ಲ. ಸದಾಶಿವ ಆಯೋಗದ ವರದಿ ತಿರಸ್ಕೃತಗೊಂಡಿದೆ‌ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕ್ಯಾಬಿನೆಟ್ ಸಬ್ ಕಮಿಟಿಯೇ ಮೀಸಲಾತಿ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಎಸ್ ಸಿ ಮೀಸಲಾತಿಯಲ್ಲಿ ಮಾಡಿದ 2%. ಹೆಚ್ಚಳದಲ್ಲಿ ಮಾದಿಗ ಸಮುದಾಯಕ್ಕೆ ಏನೂ ಸಿಕ್ಕಿಲ್ಲ. ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದ ಆ‌ ಸಮುದಾಯಕ್ಕೆ ಇದು ಮರ್ಮಾಘಾತ. ಒಂದು ವೇಳೆ ಶೇ. 2 ರ ಹೆಚ್ಚಳವನ್ನು ಕೇಂದ್ರ ಸರ್ಕಾರ ಒಪ್ಪದೇ ಇದ್ದರೆ ಅಥವಾ ಕೋರ್ಟು ಮಾನ್ಯ ಮಾಡದೇ ಇದ್ದರೆ ಈಗ ಒಳಮೀಸಲಾತಿ ಅನ್ವಯ ಮಾದಿಗ ಮತ್ತು ಹೊಲೆಯ ಸಮುದಾಯಗಳಿಗೆ ನೀಡಿರುವ ಶೇ 6 ಮತ್ತು ಶೇ 5.5 ಮೀಸಲಾತಿಯಲ್ಲೂ ಕಡಿತವಾಗುತ್ತದೆ.

*4. 12%. ಮೀಸಲಾತಿ ಕೇಳುತ್ತಿದ್ದ ಒಕ್ಕಲಿಗರಿಗೆ ಚಿಲ್ಲರೆ 2%. ಮೀಸಲಾತಿ ಕೊಡಲಾಗಿದೆ. ಅದೇ ರೀತಿ ಲಿಂಗಾಯಿತರಿಗೂ 2% ಮೀಸಲಾತಿ ಬಿಸ್ಕೆಟ್ ಕೊಟ್ಟಂತೆ ಕೊಡಲಾಗಿದೆ. ಹೀಗಾಗಿ ಎರಡೂ ಸಮುದಾಯಗಳು ಕುದಿಯುತ್ತಿವೆ. ಈ ಎರಡೂ ಸಮುದಾಯಗಳಿಗೆ ಕೊಡಲಾದ ಮೀಸಲಾತಿಯನ್ನು ಮುಸ್ಲಿಮರಿಂದ ಕಿತ್ತು ಕೊಡಲಾಗಿದೆ ಎಂದು ಸರ್ಕಾರವೇ ಹೇಳುತ್ತಿದೆ. ಇನ್ನೊಬ್ಬರ ತುತ್ತನ್ನು ಕಿತ್ತು ತಿಂದು ಗೊತ್ತಿಲ್ಲದ ಈ ಎರಡೂ ಸಮುದಾಯಗಳಿಗೆ ಒಂದು ರೀತಿಯಲ್ಲಿ ಅಪಮಾನವೆಸಗಲಾಗಿದೆ. ಈ ಕಳಂಕ ನಮಗೇಕೆ ಎಂದು ಎರಡೂ ಸಮುದಾಯಗಳ ಪ್ರಾಜ್ಞರು ನುಡಿಯುತ್ತಿದ್ದಾರೆ.*

5. ಮುಸ್ಲಿಮರ ಮೀಸಲಾತಿ ಕಿತ್ತುಕೊಂಡರೆ ಮುಸ್ಲಿಮರು ಬೀದಿಗಿಳಿದು ಗಲಾಟೆ ಮಾಡಿ, ಕೋಮುಗಲಭೆ‌ ಶುರುವಾದರೆ ಬೇಳೆ ಬೇಯಿಸಿಕೊಳ್ಳಬಹುದು ಎಂಬ ಆಶಾವಾದ ಇತ್ತೇನೋ? ಆದರೆ ಅಂಥದ್ದೇನೂ ಆಗುತ್ತಿಲ್ಲ. ಮುಸ್ಲಿಮರಿಗೆ ಕೊಡಲಾಗಿದ್ದ ಮೀಸಲಾತಿ ಕಿತ್ತುಕೊಂಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅದೂ ಬಿದ್ದುಹೋಗುವ ಸಾಧ್ಯತೆ ಹೆಚ್ಚು.

*6. ಮುಸ್ಲಿಮರನ್ನು EWS ಗೆ ಸೇರಿಸುವುದಾಗಿ ಬೊಮ್ಮಾಯಿ ಹೇಳಿದರು. ಅಲ್ಲಿರುವ ಬ್ರಾಹ್ಮಣರೂ ಈಗ ರೊಚ್ಚಿಗೇಳುತ್ತಿದ್ದಾರೆ. ಮುಸ್ಲಿಮರು ಶೇ. 15 ಕ್ಕೂ ಹೆಚ್ಚಿದ್ದಾರೆ. EWS ನಲ್ಲಿ ಸುಭಿಕ್ಷವಾಗಿದ್ದ ಬ್ರಾಹ್ಮಣರು ಇನ್ನು ಮುಂದೆ ಮುಸ್ಲಿಮರೊಂದಿಗೆ ಹಂಚಿ ತಿನ್ನಬೇಕು.*

7. ಪಂಚಮಸಾಲಿಗಳು ಅತ್ಯಂತ ನತದೃಷ್ಟರು. ಅವರು ಹೋರಾಟ ಯಾಕೆ ಮಾಡ್ತಾ ಇದ್ದರು ಎಂಬುದನ್ನು ಅವರೇ ಮರೆತುಹೋಗುವಂತೆ ಮಾಡಲಾಗಿದೆ! ಅವರು ಕೇಳಿದ್ದೇನು, ಇವರು ಕೊಟ್ಟಿದ್ದೇನು? ಜಯಮೃತ್ಯುಂಜಯ ಸ್ವಾಮೀಜಿಗಳು ಕಷ್ಟಪಟ್ಟು ಕಟ್ಟಿದ್ದ ಹೋರಾಟವನ್ನು ಅವರ ಎಡಬಲ ನಿಂತ ರಾಜಕಾರಣಿಗಳೇ ಕೊಂದುಹಾಕಿದರು.

ಬಿಜೆಪಿ ಈಗ ತಾನು ಉಗುಳಿದ್ದನ್ನು ತಾನೇ ನುಂಗುವ ಅನಿವಾರ್ಯತೆಗೆ ಸಿಲುಕಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲರ ಪ್ರಶ್ನೆಗಳಿಗೂ ಬಿಜೆಪಿ ಉತ್ತರಿಸಬೇಕಾಗುತ್ತದೆ.

– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು

Leave a Reply