ಪೌರ ಕಾರ್ಮಿಕರ ಬೇಡಿಕೆ ಈಡೇರದಿದ್ದರೆ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ: ಬಿ.ಕೆ.ಇಮ್ತಿಯಾಜ್

3 years ago

ಮಂಗಳೂರು: ಕಳೆದ 9 ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು, ಮುನ್ಸಿಪಲ್ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ, ಡಬ್ಬಲ್ ಇಂಜಿನ್ ಸರಕಾರವೆಂದು ಬೀಗುತ್ತಿರುವ BJP ಸರಕಾರವು ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ ಎಂದು DYFI ದ. ಕ.ಜಿಲ್ಲಾಧ್ಯಕ್ಷರ ಬಿ ಕೆ ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದರು.

ನಗರ ಪಟ್ಟಣ ಪ್ರದೇಶದ ಸುಂದರೀಕರಣ ಹಾಗೂ ಸ್ವಚ್ಛತೆಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟ ಪೌರ ಕಾರ್ಮಿಕರ ಉತ್ತಮ ಬದುಕಿಗಾಗಿ ಎಳ್ಳಷ್ಟೂ ಕಾಳಜಿ ವಹಿಸದ ರಾಜ್ಯ ಸರಕಾರ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸುತ್ತಿದೆ. ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದ ಶಾಸಕ ವೇದವ್ಯಾಸ ಕಾಮತ್ ರವರು ಬೂಟಾಟಿಕೆಯ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ. ಕೂಡಲೇ ಕಾರ್ಮಿಕರ ಇತ್ಯರ್ಥಗೊಳ್ಳದಿದ್ದಲ್ಲಿ ಶಾಸಕ ವೇದವ್ಯಾಸ ಕಾಮತ್ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದರು.

ಮಂಗಳೂರು ನಗರ ಪಾಲಿಕೆ ಗುತ್ತಿಗೆ ಹೆಸರಿನಲ್ಲಿ ಬಡ ಕಾರ್ಮಿಕರ ಹೊಟ್ಟೆಗೆ ಹೊಡೆಯುತ್ತಿದೆ ಬಡ ನೌಕರರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಕಮಿಷನ್ ರೂಪದಲ್ಲಿ ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿಂದು(21-03-2023) ಮನಪಾ ಕಚೇರಿಯೆದುರು ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಅವರು ಈ ಮಾತುಗಳನ್ನು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ಅತ್ಯಂತ ದೀರ್ಘ ಅವಧಿಯಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಪೌರ ಹಾಗೂ ಮುನ್ಸಿಪಲ್ ಕಾರ್ಮಿಕರ ಬದುಕು ತೀರಾ ಶೋಚನೀಯವಾಗಿದೆ. ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು ಇಲ್ಲಿಯವರೆಗೂ ಕಿಂಚಿತ್ತೂ ಗಮನ ನೀಡಿಲ್ಲ.ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.

ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ಸಂಘದ ಜಿಲ್ಲಾ ನಾಯಕ ಯಾದವ ಶೆಟ್ಟಿ, ಮಾಜಿ ಮೇಯರ್ ಅಶ್ರಫ್ ಕೆ ಮಾತನಾಡುತ್ತಾ, ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಬದುಕು ಸಾಗಿಸುವ ಪೌರ ಕಾರ್ಮಿಕರು ತಾವು ಒಂಟಿಯಲ್ಲ ಒಬ್ಬಂಟಿಯಲ್ಲ, ನಿಮ್ಮ ಜೊತೆ ಜಿಲ್ಲೆಯ ಸಮಸ್ತ ಜನಸಮುದಾಯವಿದೆ. ಹೋರಾಟ ಖಂಡಿತಾ ಯಶಸ್ವಿಯಾಗಲಿದೆ ಎಂದು ಸ್ಪೂರ್ತಿ ನೀಡಿದರು.

ಪ್ರತಿಭಟನೆಯಲ್ಲಿ DYFI ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಮಹಮ್ಮದ್ ಆಸಿಫ್, ಹರೀಶ್ ಪೂಜಾರಿ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ಯುವ ವಕೀಲರಾದ ನಿತಿನ್ ಕುತ್ತಾರ್, ಸುನಂದಾ ಕೊಂಚಾಡಿ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಮುಖಂಡರಾದ ರಾಜೇಶ್, ಪದ್ಮನಾಭ, ಸಂತೋಷ್, ಅಶ್ವಿನ್ ಮುಂತಾದವರು ಉಪಸ್ಥಿತರಿದ್ದರು.

Leave a Reply