ಡಯಾಬಿಟಿಸ್ ಬಂತು ಎಂದರೆ ಜೀವನವೇ ಮುಗೀತು ಎಂದು ಡಿಪ್ರೆಶನ್ ಗೆ ಹೋಗುವವರು ಓದಿ

3 years ago

ಸೋಫಿ ಡಿವೈನ್

ಈ ಹುಡುಗಿ ನಿನ್ನೆ ಆಡುವಾಗ ಚೆಂಡು ದೀಪಾವಳಿಯ ರಾಕೆಟ್ ಗಳಂತೆ ಹಾರಿ ಮೈದಾನದಿಂದ ಆಚೆ ಹೋಗಿ ಬೀಳುತ್ತಿದ್ದವು. ಹೆಸರೇ ಸೋಫಿ ಡಿವೈನ್. ಆಟವೂ ನಿಜಕ್ಕೂ ಡಿವೈನ್. ಚೆಂಡು ಎಲ್ಲೇ ಬಿದ್ದರೂ ಬೌಂಡರಿ ದಾಟಿಸುತ್ತೇನೆ ಎಂಬಂತೆ ಆಡಿದಳು ಡಿವೈನ್. ಬೌಲರ್ ಗಳು ಬೆದರಿ ವೈಡ್ ಎಸೆಯುತ್ತಿದ್ದರು. 36 ನೇ ಎಸೆತವನ್ನು ನಿಧಾನವಾಗಿ ತಳ್ಳಿ ಒಂದು ರನ್ ಗಳಿಸಿ ಸೆಂಚುರಿ ಹೊಡೆದುಬಿಡಬಹುದಿತ್ತು. ಸೋಫಿ ಹಾಗೆ ಮಾಡಲಿಲ್ಲ, ಮತ್ತೆ ಸಿಕ್ಸರ್ ಹೊಡೆಯಲು ಹೋಗಿ ಕ್ಯಾಚ್ ಕೊಟ್ಟು ಔಟಾದಳು. ಅಷ್ಟು ಹೊತ್ತಿಗಾಗಲೇ ಆಕೆ ಎಂಟು ಸಿಕ್ಸರ್, ಒಂಭತ್ತು ಬೌಂಡರಿ ಚಚ್ಚಿ ಹಾಕಿದ್ದಳು. ಗುಜರಾತ್ ಜೈಂಟ್ಸ್ ನ ಎಡಗೈ ಸ್ಪಿನ್ನರ್ ತನುಜಾ ಕನ್ವರ್ ಗೆ ಮಿಡ್ ವಿಕೆಟ್ ನಲ್ಲಿ ಎತ್ತಿದ ಸಿಕ್ಸರ್ 94 ಮೀಟರ್ ದೂರ ಹೋಗಿ ಎರಡನೇ ಸ್ಟಾಂಡ್ ನಲ್ಲಿ ಬಿದ್ದಿತ್ತು! ಆರ್ ಸಿಬಿ ಗೆಲ್ಲಲು ಇನ್ನೇನು ಬೇಕಿತ್ತು.

ನಿಮಗೆ ಟೈಪ್-1 ಡಯಾಬಿಟಿಸ್ ಗೊತ್ತಿರುತ್ತದೆ. ಚಿಕ್ಕವಯಸ್ಸಿನಲ್ಲೇ ಬರುವ ಸಕ್ಕರೆ ಕಾಯಿಲೆ. ಸೋಫಿಗೆ ಹದಿನೈದು ವರ್ಷ ಇದ್ದಾಗಲೇ ಡಯಾಬಿಟಿಸ್ ಶುರು ಆಗಿತ್ತು. ಆಕೆಯ ಪ್ಯಾನ್ಕ್ರಿಯಾಸ್ ಇನ್ಸುಲಿಲ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸಿತ್ತು. ಆದರೆ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನವಳಾದ ಸೋಫಿ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಶಾಲೆಯಲ್ಲಿ ಹುಡುಗರ ಜೊತೆ ಹಾಕಿ, ಕ್ರಿಕೆಟ್ ಆಡುತ್ತಿದ್ದಳು‌. ಹಾಕಿಯಲ್ಲಿ ಹಂತಹಂತವಾಗಿ ಆಡಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೂ ಆಡಿದಳು. ಹಾಕಿ ಆಡುತ್ತಿದ್ದರೂ ಕ್ರಿಕೆಟ್ ಸೆಳೆತ ಹೋಗಲಿಲ್ಲ. ಕೊನೆಗೆ ಹಾಕಿ ಬಿಟ್ಟು ಕ್ರಿಕೆಟ್ ನಲ್ಲೇ ಉಳಿದುಕೊಂಡಳು. ಕ್ರಿಕೆಟ್ ನಲ್ಲೂ ರಾಷ್ಟ್ರೀಯ ತಂಡಕ್ಕೆ ಆಡಿದಳು.

ಸೋಫಿ ಲಯದಲ್ಲಿ ಇದ್ದಾಗ ಮೈಮೇಲೆ ದೆವ್ವ ಬಂದಂತೆ ಆಡಿಬಿಡುತ್ತಾಳೆ. ಭಾರತ ವಿರುದ್ಧದ ಪಂದ್ಯವೊಂದರಲ್ಲಿ ಒಂದೇ ಓವರ್ ನಲ್ಲಿ ಮೂವತ್ತೆರಡು ರನ್ ದೋಚಿದ್ದಳು ಸೋಫಿ. ಟಿ-20ಯಲ್ಲಿ ಕೇವಲ ಹದಿನೆಂಟು ಎಸೆತಗಳಲ್ಲಿ ಐವತ್ತು ಹೊಡೆದ ದಾಖಲೆ ಇವಳದು. ಲೀಗ್ ಪಂದ್ಯವೊಂದರಲ್ಲಿ 36 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಳು. ನಿನ್ನೆ ತನ್ನ ದಾಖಲೆ ತಾನೇ ಸರಿಗಟ್ಟುವ ಸಾಧ್ಯತೆ ಇತ್ತು, ಆದರೆ ಔಟಾದಳು. ಔಟ್ ಮಾಡಿದ ಗುಜರಾತ್ ಆಟಗಾರರು ಸಂಭ್ರಮಿಸೋದಕ್ಕೆ ಏನೂ ಉಳಿದಿರಲಿಲ್ಲ‌. ಪಂದ್ಯವನ್ನು ಅಕ್ಷರಶಃ ಸೋಫಿ ಕಿತ್ತುಕೊಂಡಾಗಿತ್ತು.

ಸೋಫಿ ಎಷ್ಟು ಬಲವಾಗಿ ಬ್ಯಾಟ್ ಬೀಸುತ್ತಾಳೆಂದರೆ ಬೌಂಡರಿ ಲೈನ್ ಮೇಲೆ ಫೀಲ್ಡರ್ ಇದ್ದರೂ ಅವರು ತಿರುಗಿನೋಡುವಷ್ಟರಲ್ಲಿ ಚೆಂಡು ಅವರ ಪಕ್ಕದಲ್ಲೇ ಬುಲೆಟ್ ನಂತೆ ಹೋಗಿರುತ್ತದೆ. ಸ್ಟ್ರೈಟ್ ಬ್ಯಾಟ್ ನಲ್ಲೇ ಆಡುವ ಸ್ಕ್ವೇರ್ ಆಫ್ ದಿ ವಿಕೆಟ್ ಗಿಂತ ನೇರವಾಗಿ ಆಡುವುದೇ ಹೆಚ್ಚು. ಮಿಡಾನ್, ಮಿಡ್ ವಿಕೆಟ್, ಲಾಂಗ್ ಆನ್, ಲಾಂಗ್ ಆಫ್ ಅವಳ ಫೇವರಿಟ್ ಜಾಗಗಳು.

ಡಯಾಬಿಟಿಸ್ ಬಂತು ಎಂದರೆ ಜೀವನವೇ ಮುಗೀತು ಎಂದು ಡಿಪ್ರೆಶನ್ ಗೆ ಹೋಗುವವರು ನಮ್ಮ ನಡುವೆ ಇದ್ದಾರೆ. ಈ ಹುಡುಗಿ ನೋಡಿ, ಹದಿನೈದು ವರ್ಷಕ್ಕೇ ಡಯಾಬಿಟಿಸ್ ಅಂಟಿಸಿಕೊಂಡು ಅದು ಏನೂ ಅಲ್ಲ ಎಂಬಂತೆ ಹಾಕಿ, ಕ್ರಿಕೆಟ್ ಎಲ್ಲದರಲ್ಲೂ ಎತ್ತರಕ್ಕೆ ಏರಿದಳು. ಇಂಥವರು ನಮಗೆ ಸ್ಫೂರ್ತಿ ಆಗಬೇಕಲ್ಲವೇ?

– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು

Leave a Reply