ಬೆಂಗಳೂರು: ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಿದ್ದ ಉಗ್ರರು ರಾಜ್ಯದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಸೇರಿದಂತೆ ಸುಮಾರು 25 ಕಡೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ.
ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದು, ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಉಗ್ರ ಶಾರಿಕ್, ಮಾಜ್ ಮುನೀರ್, ಸಯ್ಯದ್ ಯಾಸಿನ್ ಇದರಲ್ಲಿ ಭಾಗಿಯಾಗಿದ್ದರು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಶಿವಮೊಗ್ಗದ ತುಂಗಾ ತೀರದ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಹಾಗೂ ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಈಗ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಈ ವಿಷಯ ತಿಳಿಸಲಾಗಿದೆ.
ಬಂಧಿತ ಶಂಕಿತ ಉಗ್ರರು ವಿದೇಶಿ ಉಗ್ರರ ನೆರವು ಹಾಗೂ ಸಲಹೆಯಂತೆ ಈ ಕೃತ್ಯ ನಡೆಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಶಂಕಿತ ಉಗ್ರರಿಗೆ ಕ್ರಿಪ್ಟೋ ಕರೆನ್ಸಿಯ ಮೂಲಕ ಹಣ ರವಾನೆಯಾಗುತ್ತಿತ್ತು. ಮಾಜ್ ಸುಮಾರು 1.5 ಲಕ್ಷ ಹಣ ಪಡೆದಿದ್ದರೇ, ಸಯ್ಯದ್ ಯಾಸಿನ್ 62 ಸಾವಿರ ರೂ ಹಣ ಪಡೆದಿದ್ದಾನೆ ಎಂದು ತಿಳಿಸಲಾಗಿದೆ.




