ವಿಶ್ವ ರಂಗಭೂಮಿ ದಿನಾಚರಣೆ

3 years ago

1962 ರಿಂದ ವಿಶ್ವ ರಂಗಭೂಮಿ ದಿನವನ್ನು ಅಂತರಾಷ್ಟ್ರೀಯ ರಂಗ ಸಂಸ್ಥೆಗಳು, ರಂಗಕೇಂದ್ರಗಳು, ಅಂತರಾಷ್ಟ್ರೀಯ ರಂಗ ಸಂಸ್ಥೆಗಳ ಸದಸ್ಯರು, ರಂಗಭೂಮಿ ವೃತ್ತಿಪರರು, ನಾಟಕ ಸಂಸ್ಥೆಗಳು, ನಾಟಕ ವಿಶ್ವವಿದ್ಯಾಲಯಗಳು ಮತ್ತು ರಂಗ ಪ್ರೇಮಿಗಳು ಮಾರ್ಚ್ 27 ರಂದು ವಿಶ್ವದಾದ್ಯಂತ ಆಚರಿಸುತ್ತಾರೆ.

ಈ ದಿನವು “ರಂಗಭೂಮಿ” ಎಂಬ ಕಲಾ ಪ್ರಕಾರದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಮಾನ್ಯ ಮಾಡುವ ಹಾಗೂ ಆಚರಣೆಯ ದಿನವಾಗಿರುತ್ತದೆ. ರಂಗಭೂಮಿಯ ಮೌಲ್ಯವನ್ನು ಇನ್ನೂ ಗುರುತಿಸದ ಸರ್ಕಾರಗಳಿಗೆ ರಾಜಕಾರಣಿಗಳಿಗೆ ಮತ್ತು ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ.
ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಗೆ “ರಂಗಭೂಮಿ” ಯ ಸಾಮರ್ಥ್ಯದ ಅರಿವನ್ನು ಉಂಟುಮಾಡುವ ಜಾಗೃತ ದಿನವಾಗಿರುತ್ತದೆ.ಪ್ರತಿ ವರುಷವೂ ವಿವಿಧ ದೇಶಗಳ ಕಲಾವಿದರನ್ನು ಗುರುತಿಸಿ, ಅವರಿಂದ ಸಂದೇಶವನ್ನು ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲಾಗುತ್ತದೆ. ಸಾಮೂಹಿಕವಾಗಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸುವ ರಂಗ ತಂಡಗಳು, ಸಂಸ್ಥೆಗಳು ಆ ಸಂದೇಶವನ್ನು ಸಮಾರಂಭದಲ್ಲಿ ಓದುವ ಮುಖಾಂತರ ಸಾವಿರಾರು ಜನರ ಗಮನಕ್ಕೆ ತರುವ ಮುಖಾಂತರ, ಸಮಾರಂಭವನ್ನು ಪ್ರಾರಂಭಿಸಲಾಗುತ್ತದೆ. ಸಂದೇಶದ ಸಾಮಾಜಿಕ ಅಂಶಗಳ ಕುರಿತು ವಿಮರ್ಶೆ ಮಾಡಲಾಗುತ್ತದೆ. ವಿವಿಧ ಕಲಾಪ್ರಕಾರಗಳ ಕಲಾವಿದರಿಗೆ ಗೌರವ ಸನ್ಮಾನವನ್ನು ಮಾಡಲಾಗುತ್ತದೆ. ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಯ ಸಮ್ಮೇಳನ ಹೆಲ್ಸಿಂಕಿಯಲ್ಲಿ ಮೊದಲಿಗೆ ಮತ್ತು ನಂತರದಲ್ಲಿ ವಿಯೆನ್ನಾದಲ್ಲಿ ನಡೆಯಿತು. 1961 ರ ಜೂನ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಫಿನ್ನಿಶ್ ರಂಗಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಆರ್ವಿ ಕಿವಿಮಾ ಅವರು ಪ್ರತಿ ವರುಷವೂ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸಬೇಕು ಎನ್ನುವ ಇಂಗಿತವನ್ನು ಸಭೆಯಲ್ಲಿ ಮಂಡಿಸಿದರು.
1962, ಮಾರ್ಚ್ 27 ರಂದು ಪ್ಯಾರೀಸ್ ನಲ್ಲಿ ನಡೆದ ಅಂತರಾಷ್ಟ್ರೀಯ ರಂಗಸಂಸ್ಥೆಯ ಸಮಾರಂಭದಿಂದ ವಿಶ್ವ ರಂಗಭೂಮಿ ದಿನಾಚರಣೆ ಆಚರಣೆಗೆ ಬಂದಿದೆ. ಇಂದಿಗೆ ನೂರಕ್ಕೂ ಹೆಚ್ಚಿನ ದೇಶಗಳಲ್ಲಿ ಮಾರ್ಚ್ 27 ಕ್ಕೆ ವಿಶ್ವರಂಗಭೂಮಿ ದಿನಾಚರಣೆ ನಡೆಯುತ್ತಲಿದೆ.

ಫ್ರಾನ್ಸ್ ದೇಶದ ಕವಿ, ನಾಟಕಕಾರ, ಕಥೆಗಾರ, ವಿನ್ಯಾಸಕ, ಚಲನಚಿತ್ರ ನಿರ್ದೇಶಕ, ಅಮೂರ್ತ ಚಿತ್ರಕಲಾವಿದ ಝಾನ್ ಕೊಕ್ಟೇಯುವಿಯಾ 1962 ರಲ್ಲಿ ಮೊದಲ ವಿಶ್ವರಂಗಭೂಮಿ ದಿನಾಚರಣೆಯ ಸಂದೇಶವನ್ನು ನೀಡಿದವರು. ಆಗ ಅವರಿಗೆ 73 ವರುಷ ವಯಸ್ಸಸಾಗಿತ್ತು. 2002ರಲ್ಲಿ ಭಾರತ ದೇಶದಿಂದ ಸಂದೇಶವನ್ನು ಪ್ರಸಿದ್ದ ಕನ್ನಡ ನಾಟಕಕಾರ ಗಿರೀಶ ಕಾರ್ನಾಡ್ ಅವರು ನೀಡಿದರು. ಈ ವರುಷ ಈಜಿಪ್ಟ್ ನ ರಂಗನಟಿ ಸಮೀಹಾ ಅಯೂಬ್ ಅವರು ಸಂದೇಶ ನೀಡಿರುತ್ತಾರೆ. ಈಗ ಸಮೀಹಾ ಅವರ ವಯಸ್ಸು 93 ವರುಷ.(ವಿಶ್ವರಂಗಭೂಮಿ ಬಗ್ಗೆ ಅರಿಯುವ ಮನಸ್ಸುಳ್ಳ ಕಿರಿಯ ರಂಗಾಸಕ್ತರಿಗಾಗಿ ಈ ಮಾಹಿತಿ ಮತ್ತು ಇತಿಹಾಸ).

-ಗುಂಡಣ್ಣ ಚಿಕ್ಕಮಗಳೂರು, ರಂಗ ಚಿಂತಕರು

Leave a Reply