ಕನ್ನಡದಲ್ಲಿ ಲಿಟರರಿ ಫೆಸ್ಟುಗಳ ಪರಂಪರೆ…

3 years ago

ಜೈಪುರ ಲಿಟರರಿ ಫೆಸ್ಟ್ ನಿಂದ ಪ್ರಭಾವಿತರಾಗಿ ಧಾರವಾಡದಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ’ ದ ಹೆಸರಲ್ಲಿ 2013 ರಂದು ಮೊದಲ ಸಂಭ್ರಮ ಆಚರಿಸಲಾಯ್ತು. ಅದು ಜೈಪುರ ಲಿಟರರಿ ಫೆಸ್ಟ್ ನ ಪ್ರತಿರೂಪವೆ. ಆದರೆ ಕನ್ನಡ ಜಾಯಮಾನಕ್ಕೆ ಒಗ್ಗುವ ಹಾಗೆ ‘ಧಾರವಾಡ ಸಾಹಿತ್ಯ ಸಂಭ್ರಮ’ ಎಂದು ಹೆಸರಿಸಲಾಗಿತ್ತಷ್ಟೆ. ಜೈಪುರ ಫೆಸ್ಟ್ ನ ನಿಯಮಗಳನ್ನೆ ಗೂಗಲ್ ಟ್ರಾನ್ಸಲೇಟ್ ಮಾಡಿ ಚಾಕು/ಚೂರಿ/ ಬಂದೂದು ತರಬಾರದು ಇತ್ಯಾದಿ ಕಂಡೀಷನ್ನುಗಳು ಮತ್ತು ಪ್ರವೇಶಕ್ಕೆ 1000/- ಪ್ರವೇಶ ಧನ ಕುರಿತು ಚರ್ಚೆಯಾಯಿತು.
ಹಾಗಾಗಿ ಕನ್ನಡ ಸಾಹಿತ್ಯ ಕ್ಷೇತ್ರದ ಹಲವರು ವಿರೋಧ ವ್ಯಕ್ತಪಡಿಸಿ, ಪರ್ಯಾಯವಾಗಿ ‘ಜನಸಾಹಿತ್ಯ ಸಮಾವೇಶ’ ಎನ್ನುವ ಪರ್ಯಾಯ ಸಮಾವೇಶವನ್ನೆ ಮಾಡಿದರು. ಈ ಪ್ರತಿರೋಧವನ್ನು ವಿಮರ್ಶಕರಾದ ಗಿರಡ್ಡಿ ಗೋವಿಂದರಾಜ ಅವರು ಲಘುವಾಗಿ ಟೀಕಿಸಿದ್ದರು ಕೂಡ.

ಧಾರವಾಡದ ಸಾಹಿತ್ಯ ಸಂಭ್ರಮ 2019 ರ ತನಕ ಅಂದರೆ 7 ಆವೃತ್ತಿಗಳಲ್ಲಿ ಸಾಹಿತ್ಯ ಸಂಭ್ರಮವನ್ನು ಆಯೋಜಿಸಲಾಗಿತ್ತು. ಶಿವ ವಿಶ್ವನಾಥನ್ ಅವರು ಸೈನಿಕರ ಅತ್ಯಾಚಾರದ ಪ್ರವೃತ್ತಿ ಬಗ್ಗೆ ಆಡಿದ ಮಾತಿಗೆ 2019 ರಲ್ಲಿ ಧಾರ್ಮಿಕ ಮೂಲಭೂತವಾದಿಗಳು ಕುರ್ಚಿ ಎಸೆದಾಡಿ ಗಲಬೆ ಎಬ್ಬಿಸಿದ್ದರು. ಇದು ಕೊನೆಯ ಸಾಹಿತ್ಯ ಸಂಭ್ರಮ ಅನ್ನಿಸುತ್ತೆ. ಆಯೋಜಕರಲ್ಲಿ ಒಬ್ಬರಾದ ಗಿರಡ್ಡಿ ಗೋವಿಂದರಾಜ, ಎಂ.ಎಂ.ಕಲಬುರಗಿ ಅವರ ನಿರ್ಗಮನ ಕೂಡ ಸಾಹಿತ್ಯ ಸಂಭ್ರಮವನ್ನು ಕಳೆಗುಂದಿಸಿತು.

ಈಗ್ಗೆ 11 ವರ್ಷಗಳಿಂದಲೂ ಬೆಂಗಳೂರು ಲಿಟರರಿ ಫೆಸ್ಟ್ ಕೂಡ ನಡೆಯುತ್ತಿದೆ. ಇದಕ್ಕೂ ಜಗತ್ತಿನಾಧ್ಯಾಂತ ಸಾಹಿತಿಗಳು ಬರುತ್ತಿದ್ದಾರೆ. ಕನ್ನಡದ ಕೆಲವು ಸಾಹಿತಿಗಳೂ ಪಾಲ್ಗೊಳ್ಳುತ್ತಿದ್ದಾರೆ. 2022 ರ ಲಿಟರರಿ ಫೆಸ್ಟ್ ಲ್ಲಿ ನಾನೂ ಭಾಗವಹಿಸಿದ್ದೆ. ಇದೂ ಕೂಡ ಜೈಪುರ ಲಿಟರರಿ ಫೆಸ್ಟ್ ನಷ್ಟೇ ಎತ್ತರದಲ್ಲಿ ನಡೆಯುತ್ತದೆ. 2017 ರಿಂದ ಮೈಸೂರು ಲಿಟರರಿ ಫೆಸ್ಟ್ ನಡೆಯುತ್ತಿದೆ, 2019 ರಿಂದ ಮಂಗಳೂರು ಲಿಟರರಿ ಫೆಸ್ಟ್ ನಡೆಯುತ್ತಿದೆ.

ಈ ‘ಫೆಸ್ಟ್’ ಪದವನ್ನು ಕನ್ನಡದಲ್ಲಿ ‘ಹಬ್ಬ’ ‘ಜಾತ್ರೆ’ ಎಂದು ಕರೆಯುವುದಾದರೆ. ಬಹುಪಾಲು ಯಥಾಸ್ಥಿತಿಯ ಪುನರಾವರ್ತನೆ ಮಾಡುವಲ್ಲಿ ಈ ಹಬ್ಬ ಜಾತ್ರೆಗಳ ಪಾತ್ರ ದೊಡ್ಡದು. ‘ಫೆಸ್ಟ್’ ಕಾರ್ಪೋರೇಟ್ ಕಾಲದ ನುಡಿಗಟ್ಟು. ಇದು ಸಂಭ್ರಮದಲ್ಲಿ ಪ್ರಶ್ನಿಸುವುದನ್ನೆ ಮರೆಸುವ ನಡೆಯ ಸಂಕೇತ. ಇವು ಮಧ್ಯಮ-ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಹೊಸ ತಲೆಮಾರಿನ ಸಾಹಿತ್ಯದ ಫ್ಯಾಷನ್ ನ ಫೆಸ್ಟ್ ಗಳಿವು. ನನಗೆ ಇಷ್ಟವಾಗಿದ್ದು ಇವುಗಳು ಇನ್ನೂ ಅಷ್ಟರ ಮಟ್ಟಿಗೆ ಜೀವ ವಿರೋಧಿ ಆಗಿಲ್ಲ ಎನ್ನುವುದು. ಇವುಗಳು ಬಹುಪಾಲು ಕಾರ್ಪೋರೇಟ್ ಆಯೋಜನೆಯ ಆವೃತ್ತಿಗಳಾದ ಕಾರಣ ಈ ಜೀವಪರತೆ ಕೂಡ ಒಂದು Business ನ ಭಾಗವಾಗಿ ಹೊಸ ರೂಪ ತಾಳಿವೆ. ಆದರೆ ಇವು ಯಾವಾಗ ಬೇಕಾದರೂ ಜೀವ ವಿರೋಧಿಯಾಗಿ ರೂಪಾಂತರ ಹೊಂದುವುದನ್ನು ಅಲ್ಲಗಳೆಯುವಂತಿಲ್ಲ.

ಬದಲಾವಣೆ ಜಗದ ನಿಯಮ. ಹೊಸ ಕಾಲ/ಹೊಸ ತಲೆಮಾರು ಹೊಸ ಮಾದರಿಗಳನ್ನು ಶೋಧಿಸುತ್ತಿರುತ್ತದೆ. ಆರಂಭಕ್ಕೆ ಈ ಶೋಧದ ಬಗ್ಗೆ ಸಾಂಪ್ರದಾಯಿಕರಲ್ಲಿ ವಿರೋಧ ಬರಬಹುದು. ಬರುವುದು ಸಹಜ ಕೂಡ. ನಂತರ ಇದು ಸಹಜವಾಗುತ್ತಾ ಸಾಗುತ್ತದೆ. ಹಾಗಾಗಿ 2013 ರಲ್ಲಿ ಜೈಪುರ ಲಿಟರರಿ ಫೆಸ್ಟ್ ಗೆ ಕನ್ನಡದಲ್ಲಿ ಬಂದ ವಿರೋಧ ಈಗ ಸೌಮ್ಯವಾಗಿದೆ. ಧಾರವಾಡದ ಸಾಹಿತ್ಯ ಸಂಭ್ರಮವನ್ನು ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೆ ಬದಲಾದ ಕಾಲದಲ್ಲಿ ಬೆಂಗಳೂರು ಲಿಟರರಿ ಫೆಸ್ಟ್ ಲ್ಲಿ ಭಾಗವಹಿಸಿದೆ. ಟ್ರಾನ್ಸ್ ಜೆಂಡರ್ ಸಮುದಾಯದ ಬಗ್ಗೆ ಬದಲಾಗಬೇಕಾದ ಸಮಾಜದ ನಿಲುವುಗಳ ಕುರಿತು ಮಂಜಮ್ಮ ಜೋಗತಿಯ ಜತೆ ಚರ್ಚಿಸಿದೆ.

ಕನ್ನಡದ ಕೆಲ‌ ಸಾಹಿತಿಗಳಿಗೆ ಮರೆವು ಬೇಗ ಆವರಿಸಿಬಿಡುತ್ತದೆ. ವೀರಕಪುತ್ರ ಶ್ರೀನಿವಾಸ ಅವರು ಆಯೋಜಿಸುತ್ತಿರುವ ಕರ್ನಾಟಕ ಲಿಟ್ ಫೆಸ್ಟ್ ಕನ್ನಡದಲ್ಲಿ ಮೊಟ್ಟ ಮೊದಲ ಪ್ರಯತ್ನ ಎನ್ನುವ ಚರ್ಚೆಗಳನ್ನು ನೋಡಿ ಇಷ್ಟು ಬರೆಯಬೇಕಾಯಿತು. ಶ್ರೀನಿವಾಸ ಅವರ ಪ್ರಯೋಗವನ್ನು ಗೌರವಿಸೋಣ. ಆದರೆ ಕನ್ನಡದಲ್ಲಿ ದಶಕಗಳ ಹಿಂದೆಯೇ ನಡೆದ ಲಿಟರರಿ ಫೆಸ್ಟ್ ಗಳ ಪ್ರಯೋಗಗಳನ್ನು ಮರೆಯದಿರೋಣ. ಆರಂಭಕ್ಕೆ ಜೈಪುರ ಫೆಸ್ಟಿವೆಲ್ ನ ಕಾರ್ಪೋರೇಟ್ ಆಯೋಜನೆಯ ಮಾದರಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿರೋಧ ವ್ಯಕ್ತವಾಗಿದ್ದ ಚರಿತ್ರೆಯನ್ನೂ ನೆನಪಿಸಿಕೊಳ್ಳಬೇಕು.

ಹಿಂದಕ್ಕೆ ನೋಡಿದರೆ 2003 ರಿಂದ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಮತ್ತು ನಾವು ನಮ್ಮಲ್ಲಿ ಬಳಗ ‘ನಾವುನಮ್ಮಲ್ಲಿ’ ಎನ್ನುವ ಕಾರ್ಯಕ್ರಮವನ್ನು 2019 ರ ತನಕ 20 ವರ್ಷಗಳ ಕಾಲ ಆಯೋಜಿಸಿದೆ. ಏಳೆಂಟು ವರ್ಷದಿಂದ ಮೇ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ. ಹೊನ್ನಾವರದಲ್ಲಿ ಸಹಯಾನ ಸಂಸ್ಥೆ ಸಾಹಿತ್ಯದ ಗಂಭೀರ ಚರ್ಚೆಗಳನ್ನು ಆಯೋಜಿಸುತ್ತಿದೆ. ಮಂಗಳೂರಿನಲ್ಲಿ ಜನನುಡಿ ಸಾಹಿತ್ಯದ ಚರ್ಚೆಯನ್ನು ಹುಟ್ಟುಹಾಕಿದೆ. ತಕ್ಷಣಕ್ಕೆ ನೆನಪಿಗೆ ಬಾರದ ಹೀಗೆ ಮತ್ತಷ್ಟನ್ನು ಹೆಸರಿಸಬಹುದು. ಇವೆಲ್ಲಾ ಸಾಹಿತ್ಯ ಪರಿಷತ್ತಿನ ಜಡವಾದ ಚರ್ಚೆಗಳಿಗಿಂತ ಭಿನ್ನವಾದ ಹೊಸ ಚರ್ಚೆಗಳನ್ನು ಹುಟ್ಟುಹಾಕಿವೆ.

ಕರ್ನಾಟಕದ ಸಾಹಿತ್ಯ ಚಟುವಟಿಕೆ ಎಂದರೆ ‘ಬೆಂಗಳೂರು ಕೇಂದ್ರಿತ’ ಚಟುವಟಿಕೆ ಎಂತಲೇ ಪ್ರಧಾನವಾಗಿ ಬಿಂಬಿತವಾಗುತ್ತದೆ. ಕರ್ನಾಟಕ ಅಂದರೆ 30 ಜಿಲ್ಲೆಗಳಿವೆ ಎನ್ನುವ ನೆನಪೆ ಇರುವುದಿಲ್ಲ. ಇನ್ನೊಂದು ಸೋಷಿಯಲ್ ಮೀಡಿಯಾದಲ್ಲಿ ಬಹುಪಾಲು ಹೂ ಹಗುರ ಬರೆವ ಸೆಲೆಬ್ರೆಟಿ ಬರಹ ಮಾಡುವವರನ್ನು ಮಾತ್ರ ಬರಹಗಾರ/ಗಾರ್ತಿಯರೆಂದು ಭಾವಿಸುವಿಕೆ ಇದೆ. ಈ ಸೋಷಿಯಲ್ ಮೀಡಿಯ ವ್ಯಾಪ್ತಿ ಪ್ರದೇಶದ ಹೊರಗೆ ತುಂಬಾ ಗಂಭೀರ ಬರಹಗಾರರು/ಗಾರ್ತಿಯರೂ ಇದ್ದಾರೆ, ಇವರನ್ನೂ ಗುರುತಿಸಬೇಕು.
ಎರಡನೆಯದಾಗಿ ಕರ್ನಾಟಕದ ಸಾಹಿತ್ಯಕ ಚಟುವಟಿಕೆಗಳು ಅಂದರೆ ‘ಕನ್ನಡ’ ಸಾಹಿತ್ಯವೊಂದೇ ಎನ್ನುವ ನೆಲೆಯೂ ಇದೆ. ಇದೇ ನಾಡಿನ ಬಹುಬಾಷೆಯ ಅಭಿವ್ಯಕ್ತಿಯನ್ನು ಕಡೆಗಣಿಸಲಾಗುತ್ತದೆ. ಮತ್ತೊಂದು ಕನ್ನಡ ಸಾಹಿತ್ಯವೆಂದರೆ ‘ಬ್ರಾಹ್ಮಣ’ ಬರಹಗಾರ/ಗಾರ್ತಿಯರ ಗೋಷ್ಟಿ ಎನ್ನುವಂತೆ ಆಯೋಜನೆಗೊಳ್ಳುತ್ತವೆ.ಇಂದು ಕರ್ನಾಟಕದಲ್ಲಿ ಎಲ್ಲಾ ಅಬ್ರಾಹ್ಮಣ ಬರಹಗಾರರೇ ಸಶಕ್ತವಾಗಿ ಕನ್ನಡ ಸಾಹಿತ್ಯದ ಸಾಂಪ್ರದಾಯಿಕ‌ ಎಲ್ಲೆಗಳನ್ನು ಮೀರುತ್ತಿದ್ದಾರೆ. ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕದ ಹೊಸ ತಲೆಮಾರು‌ ಸಶಕ್ತವಾಗಿ ಬರೆಯುತ್ತಿದೆ. ಇನ್ನು ಕನ್ನಡ ಸಾಹಿತ್ಯವೆಂದರೆ ಕತೆ/ಕಾದಂಬರಿ/ಕಾವ್ಯ/ಲಲಿತ ಪ್ರಬಂಧ ಇಷ್ಟಕ್ಕೇ ಸೀಮಿತವಾಗುತ್ತಾರೆ. ಸರಕಾರದ ಪಾಲಸಿಗಳನ್ನು ಪ್ರಭಾವಿಸುವ ಎಷ್ಟೋ ಸಮುದಾಯ ಕೇಂದ್ರಿತ ಸಂಶೋಧನೆಗಳು ಈ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಸಮಾಜ ವಿಜ್ಞಾನ/ಹುಮ್ಯಾನಿಟಿ/ಜೈವಿಕ ವಿಜ್ಞಾನ ಕ್ಷೇತ್ರಗಳಲ್ಲಿ ವರ್ಷಗಟ್ಟಲೆ ಸಂಶೋಧನೆ ಮಾಡಿ ಬರೆದ ವಿಜ್ಞಾನ/ ಪರಿಸರ/ಅಭಿವೃದ್ದಿ/ಅಲಕ್ಷಿತ/ ಲಿಂಗದ ನೆಲೆಯ/ಸಿನೆಮಾ-ರಂಗಭೂಮಿ/ಜನಪದ/ಆದಿವಾಸಿ/ಚರಿತ್ರೆ/ಸಮಾಜಶಾಸ್ತ್ರ ಕ್ಷೇತ್ರದ ಸಂಶೋಧನ ಕೃತಿಗಳು/ವೈಚಾರಿಕ ಕೃತಿಗಳು ಚರ್ಚೆ ಆಗುವುದೇ ಇಲ್ಲ. ಕನ್ನಡದ ವೈಚಾರಿಕ ಪ್ರಜ್ಞೆಯನ್ನು ಅನುವಾದಗಳು ದೊಡ್ಡ ಮಟ್ಟದಲ್ಲಿ ಪ್ರಭಾವಿಸುತ್ತಿವೆ. ಈಗಂತೂ ಅನುವಾದಗಳ ಪ್ರವಾಹವೇ ಹರಿಯುತ್ತಿದೆ. ಈ ಎಲ್ಲಾ ಅನುವಾದಗಳು ಪ್ರಧಾನವಾಗಿ ಪ್ರತಿರೋಧವನ್ನೆ ಭಿತ್ತಿಯಾಗಿಸಿಕೊಂಡಿವೆ. ಇನ್ನು ಸಾಹಿತ್ಯ ರಚನೆಯೆಂದರೆ ಗಂಡು-ಹೆಣ್ಣು ಅಂದಷ್ಟೇ ಭಾವಿಸುತ್ತಿದ್ದೇವೆ. ಟ್ರಾನ್ಸ್ ಕಮುನಿಟಿ ಕೂಡ ಅಭಿವ್ಯಕ್ತಿಸುತ್ತಿದ್ದಾರೆ. ಬರೆಯುತ್ತಿದ್ದಾರೆ/ಮಾತನಾಡುತ್ತಿದ್ದಾರೆ. ಸಾಹಿತ್ಯವೆಂದರೆ ಕೇವಲ ‘ಅಕ್ಷರ’ ಕೇಂದ್ರಿತ ಅಭಿವ್ಯಕ್ತಿ ಮಾತ್ರವಲ್ಲ. ನವ ಮೌಖಿಕ ಆಕರಗಳು ಸೃಷ್ಟಿಯಾಗುತ್ತಿವೆ. ಕವಿಗಳೆಂದರೆ ಶಿಷ್ಟಕವಿಗಳು ಮಾತ್ರವಲ್ಲ ಸಾವಿರಾರು ಜನಪದ ಕವಿಗಳು ಪದ ಕಟ್ಟುತ್ತಿದ್ದಾರೆ.
ಹೀಗೆ ಇಂದು ಲಿಟರರಿ ಫೆಸ್ಟ್ ನ್ನು ಯಾರೇ ಆಯೋಜಿಸಲಿ ಇಷ್ಟು ಸಂಗತಿಗಳನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.

– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply