‘ನಮ್ಮೂರಗೇ ಈ ಇರ ಇರಲಿಲ್ಲ. ನಾನೇ ಲಾಲ್ ಬಾಗ್ ನಿಂದ ಬೆಂಕಿಪೊಟ್ಟಣದಾಗೆ ಹಾಕಿಕೊಂಡು ಬಂದು ಬಿಟ್ಟಿದ್ದು. ಈಗ ನೋಡು ಎಷ್ಟಾಗವೆ!’ ಎಂದರು ಗೌರಮ್ಮ.
ಬರೋಬ್ಬರಿ 30 ವರ್ಷಗಳ ಹಿಂದೆ, ನಾನು ಇಂಜಿನಿಯರಿಂಗ್ ಮುಗಿಸಿ ತಮಿಳುನಾಡಿನ ಥಳಿಯಲ್ಲಿ ಹತ್ತು ವರ್ಷ ಬೀಜ ಸಂರಕ್ಷಣೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬೀಜ ಸಂರಕ್ಷಣೆಯ ಪಟ್ಟುಗಳನ್ನು ಕಲಿಸಿದ್ದು ಗೌರಮ್ಮ, ಹೊಂಬಾಳಮ್ಮ, ಪುಟ್ಟೀರಮ್ಮ ,ನಂಜಮ್ಮನಂಥ ಕಾಡು ಕುಸುಮಗಳು.
ಮುಂದೆ ಸಮುದಾಯ ಬೀಜ ಬ್ಯಾಂಕಿನ ಕಲ್ಪನೆಯೂ ಸಾಕಾರಗೊಂಡು 2004 ರಲ್ಲಿ ವಿಶ್ವಸಂಸ್ಥೆಯ ಈಕ್ವೇಟರ್ ಪ್ರಶಸ್ತಿ ಪಡೆಯುವ ಮೂಲಕ ನಮ್ಮ ಕೆಲಸಕ್ಕೊಂದು ಗೌರವದ ಚೌಕಟ್ಟೂ ಸಿಕ್ಕಿತು.
ಥಳಿ ಪಕ್ಕದ ದಿನ್ನೂರಿನಲ್ಲಿ ಬೀಜ ಬ್ಯಾಂಕ್ ಆರಂಭಿಸಿದ ಗೌರಮ್ಮ ತಮ್ಮ ಹಳ್ಳಿ ಹೆಣ್ಣು ಮಕ್ಕಳನ್ನು ಬೀಜ ಸಂರಕ್ಷಣೆಗೆ ತೊಡಗಿಸಿದರು. ತಹಶೀಲ್ದಾರರನ್ನೇ ಎದುರು ಹಾಕಿಕೊಂಡು ,ಪಂಚಾಯತಿ ಜಾಗದಲ್ಲಿ ಬೀಜ ಬ್ಯಾಂಕ್ ಕಟ್ಟಡ ತಲೆ ಎತ್ತುವಂತೆ ನೋಡಿಕೊಂಡರು. ಮುಂದೆ ಜಿಲ್ಲಾಧಿಕಾರಿ ಖುದ್ದಾಗಿ ಬಂದು ಮಹಿಳಾ ಸಂಘಕ್ಕೆ ಹಕ್ಕು ಪತ್ರ ನೀಡಿದ್ದು ವಿಷೇಷ. Channaraj LC ಈ ಗ್ರಾಮದಲ್ಲಿ ಬೀಜ ಸಂರಕ್ಷಣೆಯ ಕಾರ್ಯ ಆರಂಭಿಸಿದವರು.
ರಾಯಚೂರಿನ ತಾವರೆಗೆರದಲ್ಲಿ ನವಣೆ ವೈವಿಧ್ಯದ ತಾಕು ಮಾಡಿದ್ದೆವು. ಕ್ಷೇತ್ರೋತ್ಸವಕ್ಕೆ ಬಂದ ಗೌರಮ್ಮ ನವಣೆ ತೆನೆಗಳ ಕಿರೀಟದ ತರ ಹಾಕಿಕೊಂಡರು. ಆ ಕ್ಷಣಗಳನ್ನು ನನ್ನ ಕ್ಯಾಮರಾದಲ್ಲಿ ದಾಖಲಿಸಿದೆ.ಮುಂದೆ ಕೀನ್ಯಾದಲ್ಲಿ ನಡೆದ ಜೀವವೈವಿಧ್ಯ ಸಮ್ಮೇಳನದ ಪೋಟೋ ಸ್ಪರ್ಧೆಯಲ್ಲಿ ಇದಕ್ಕೆ ಬಹುಮಾನವೂ ಬಂತು.
ಕೃಷಿ ಕ್ಷೇತ್ರ ರಾಸಾಯನಿಕ ಕೃಷಿ, ಹೈಬ್ರಿಡ್ ಬೀಜಗಳಿಗೆ ಶರಣಾಗಿದ್ದಾಗ, ನಾಟಿ ಬೀಜಗಳನ್ನು ಹುಡುಕಿ, ಬೆಳೆಸಿ, ಹೆಚ್ಚು ಮಾಡಿ ಬೀಜ ಸಂರಕ್ಷಣೆಯ ಕನಸುಗಳನ್ನು ಬಿತ್ತಿದ ಗೌರಮ್ಮನಂಥ ಬೀಜ ಮಾತೆಯರಿಗೆ ಶರಣು.
– ಕೃಷ್ಣ ಪ್ರಸಾದ್ ಗೋವಿಂದಯ್ಯ , ಬೀಜತಳಿ ಸಂಶೋಧಕರು




