ಜಾತಿ ಬಿಡಿ, ಯೋಗ್ಯರಿಗೆ ಮತನೀಡಿ

3 years ago

ಕರ್ನಾಟಕ ರಾಜ್ಯದಲ್ಲಿ ಒಂದೊಂದು ಜಾತಿಯ ನಾಯಕರು ತಮ್ಮ ಜಾತಿಯ ಮತಗಳನ್ನು ತಮ್ಮ ಖಜಾನೆಯಲ್ಲಿ ತುಂಬಿಸಿಕೊಂಡವರಂತೆ ಮಾತನಾಡುತ್ತಿದ್ದಾರೆ.

ಪ್ರತಿಯೊಬ್ಬರು ಜನಸಾಮಾನ್ಯರನ್ನು ಮತ ಕೇಳುವ ಸಂದರ್ಭದಲ್ಲಿ. ನಮ್ಮ ಜಾತಿಯ ಹೆಸರಿನಲ್ಲಿ ಸಂಘಟನೆಯನ್ನು ಮಾಡುತ್ತಾ, ತಮ್ಮ ಜಾತಿಯವರೆಲ್ಲಾ ನಮಗೆ ಮತ ನೀಡಬೇಕೆಂದು ಬಹಿರಂಗವಾಗಿ ನಾಚಿಕೆ ಇಲ್ಲದೆ ಕೇಳುತ್ತಿದ್ದಾರೆ.

ಹೆಸರಿಗೆ ಮಾತ್ರ ಇಲ್ಲಿ ಎಲ್ಲರೂ ಜಾತ್ಯತೀತ ನಾಯಕರೇ, ಪ್ರಗತಿಪರರೇ, ಸಾಮಾಜಿಕ ನ್ಯಾಯದ ಹರಿಕಾರರೇ ಆದರೆ ಎಲ್ಲರ ದೃಷ್ಟಿಯು ತಮ್ಮ ಜಾತಿಯ ಮತಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿದೆ.

ಯಾವ ಜಾತಿಯವರು ಮುಖ್ಯಮಂತ್ರಿಯಾದರೇನು, ಆ ಜಾತಿಯ ಜನೆರಲ್ಲ ಸ್ವರ್ಗದಲ್ಲಿ ತೇಲಾಡುವುದಿಲ್ಲ, ಅವರ ಬಡತನ, ನೋವು ಮಾಯವಾಗುವುದಿಲ್ಲ. ಇವರುಗಳ ಕುಟುಂಬದ ಸದಸ್ಯರು, ಇವರ ಹತ್ತಿರದ ಬಂಧುಗಳು, ಇವರು ಓಲೈಸುವ ಮಠಮಾನ್ಯಗಳು ಆರ್ಥಿಕವಾಗಿ ಸದೃಢವಾಗುತ್ತದೆ. ಇವರ ಬದುಕುಗಳು ಬಂಗಾರವಾಗುತ್ತದೆ. ಈ ಸತ್ಯವನ್ನು ಅರಿಯದೇ ಜನರು ಜಾತಿಯ ಹೆಸರಿನಲ್ಲಿ ಮತವನ್ನು ಚಲಾಯಿಸುವ ಮನಸ್ಥಿತಿಗೆ ಅಲ್ಲಲ್ಲಿ ತಲುಪುತ್ತಿರುವುದು ನೋವಿನ ಸಂಗತಿಯಾಗಿದೆ.

ನಮ್ಮ ನಾಡನ್ನು ಕಟ್ಟಬಲ್ಲ ಮತ್ತು ಎಲ್ಲರನ್ನೂ ಜೊತೆಗೆ ಕೊಂಡೊಯ್ಯಬಲ್ಲ, ಜಾತಿ-ಮತ, ಧರ್ಮದ ಬೇಧವಿಲ್ಲದೆ ಸಮಾನ ದೃಷ್ಟಿಯಿಂದ ಎಲ್ಲರ ಹಿತವನ್ನು ಕಾಯುವವರಷ್ಟೇ ನಮಗೆ ಬೇಕಾಗಿರುವುದು.

ನಮ್ಮ ಕ್ಷೇತ್ರದ ಪ್ರತಿನಿಧಿ ಯಾವ ಜಾತಿಯವರಾದರೇನು, ನಮ್ಮ ಕ್ಷೇತ್ರಕ್ಕೆ ನೀರು ಕೊಟ್ಟರೇ ಸಾಕು, ರಸ್ತೆ ಸರಿ ಮಾಡಿಕೊಟ್ಟರೇ ಸಾಕು, ಶಾಲೆ, ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿಕೊಟ್ಟರೆ ಸಾಕು, ಬಸ್ಸಿನ ಸೌಕರ್ಯವನ್ನು ಕಲ್ಪಿಸಿಕೊಟ್ಟರೇ ಸಾಕು, ಬಡವರಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟರೇ ಸಾಕು, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ ಮುಂತಾದ ಚಟುವಟಿಕೆಗಳಿಗೆ ದೂರವಾದಂತಹ ಸೌಕರ್ಯ, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅಹಂಕಾರವಿಲ್ಲದೇ, ಸ್ವಾರ್ಥವಿಲ್ಲದೇ, ಸ್ವಜನ ಪಕ್ಷಪಾತ ಮಾಡದೇ ಜನರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವವರಾದರೇ ಸಾಕು, ತನ್ನ ಸುತ್ತಲು ತನ್ನ ಜಾತಿಯ, ತನ್ನ ಬಂಧುಬಳಗದವರ ಕೋಟೆಯನ್ನು ಕಟ್ಟಿಕೊಳ್ಳದೇ ಪಾರದರ್ಶಕವಾದ, ಪ್ರಾಮಾಣಿಕವಾದ ಸಾರ್ವಜನಿಕರ ಬದುಕನ್ನು ನಡೆಸುವವರಾದರೇ ಸಾಕು.

ಸಾಕ್ಷರತ ಪ್ರಮಾಣ ಹೆಚ್ಚಾಗುತ್ತಿದ್ದರು ಅನೇಕ ರೀತಿಯ ವೈಜ್ಞಾನಿಕವಾದಂತಹ ಸಂಶೋಧನೆಗಳು ನಡೆಯುತ್ತಿದ್ದರು ಅನೇಕ ರೀತಿಯ ಸಮಸ್ಯೆಗಳನ್ನು ಕರೋನಾ ಸಂದರ್ಭದಲ್ಲಿ ಕಂಡ ಜಾತಿ, ಮತ, ಧರ್ಮ ಎಲ್ಲವೂ ಬೊಗಳೆ, ಸಂಕಷ್ಟದ ಕಾಲದಲ್ಲಿ ಇವುಗಳು ಯಾವುದು ನೆರವಿಗೆ ಬರುವುದಿಲ್ಲ ಎಂಬ ಸತ್ಯದ ಅರಿವಾಗಿದ್ದರೂ ಇನ್ನು ಜಾತಿಯ ಹೆಸರಿನಲ್ಲಿ ಮತವನ್ನು ಯಾಚಿಸುವವರಿಗೆ ಮಂಗಳಾರತಿ ಎತ್ತದೆ ಪುರಸ್ಕರಿಸುವಂತಹ ಸಂಸ್ಕೃತಿ ಜೀವಂತವಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಸಾರ್ವಜನಿಕ ಬದುಕಿನಲ್ಲಿ ಅನೇಕರು ಸಣ್ಣಪುಟ್ಟ ಸಮುದಾಯಗಳಿಗೆ ಸೇರಿದವರು ತಮ್ಮ ಮಾದರಿ ವ್ಯಕ್ತಿತ್ವ ತಮ್ಮ ಶುದ್ಧವಾದ ಬದುಕಿನ ಮೂಲಕವೇ ಜನನಾಯಕರಾಗಿದ್ದಾರೆ. ಜನನಾಯಕರಿಗೆ ಸಾವಿಲ್ಲ, ಜನಾಂಗದ ನಾಯಕರಿಗೆ ಭವಿಷ್ಯವಿರುವುದಿಲ್ಲ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply