ಬಿಜೆಪಿ ಭ್ರಷ್ಟಾಚಾರ ವಿರೋಧಿಸಿ ಮಾ. 9ರಂದು ಬೆ. 9-11ರವರೆಗೆ ಬಂದ್ ಗೆ ಕೆಪಿಸಿಸಿ ಕರೆ

3 years ago

ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಚಾರ ವಿರೋಧಿಸಿ ಮಾರ್ಚ್ 9ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಕಾಂಗ್ರೆಸ್ ಇದೀಗ ತನ್ನ ಕರೆಯಲ್ಲಿ ಬದಲಾವಣೆ ಮಾಡಿದ್ದು ಉದ್ದೇಶಿತ ಬಂದ್ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಮಾತ್ರ ಇರಲಿದೆ ಎಂದು ತಿಳಿಸಿದೆ.

ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಬಂದ್ ಕರೆಗೆ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಯಾರೊಂದಿಗೂ ಚರ್ಚೆ ಮಾಡದೆ ಬಂದ್ ಕರೆ ನೀಡಿದ್ದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಬಂದ್ ಕರೆ ನೀಡಲಾಗಿದ್ದರೂ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯ ನೇರವಾಗಿ ಕಾಣುವುದಿಲ್ಲ. ಬದಲಾಗಿ ಈ ಬಂದ್ ಸಂಪೂರ್ಣ ರಾಜಕೀಯ ಉದ್ದೇಶದಿಂದ ಕೂಡಿದೆ ಇದಕ್ಕೆ ಜನ ಸ್ಪಂದನ ಸಿಗುವುದು ಕಷ್ಟ ಎಂದು ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.

ಇದು ಒಂದು ಕಡೆಯಾದರೆ ದ್ವಿತೀಯ ಪಿಯುಸಿ ಸೇರಿದಂತೆ ಹಲವು ಪರೀಕ್ಷೆಗಳು ನಡೆಯುತ್ತಿವೆ ಪರೀಕ್ಷಾ ಸಮಯದ ಈ ಬಂದ್ ಜನ ಬೆಂಬಲಕ್ಕೆ ಬದಲಾಗಿ ಜನಾಕ್ರೋಶಕ್ಕೆ ಕಾರಣವಾಗಲಿದೆ. ಬಂದ್ ವೇಳೆ ವಾಹನ ಸಂಚಾರ ಸೇರಿದಂತೆ ಕೆಲವು ಅಗತ್ಯ ಸೇವೆ ವ್ಯತ್ಯಯವಾಗುವುದಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಅಂಗಡಿಗಳು ಮುಚ್ಚುವುದು ಬಿಟ್ಟರೆ ಉಳಿದಂತೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇದನ್ನು ಬಳಸಿಕೊಳ್ಳುವ ಬಿಜೆಪಿ ಮಾಧ್ಯಮಗಳ ಮೂಲಕ ಬಂದ್ ಕರೆ ವಿಫಲ ಎಂಬಂತೆ ಸುದ್ದಿಬರುವಂತೆ ಮಾಡಿ ಅನಂತರ ಕಾಂಗ್ರೆಸ್ ನ ಬಂದ್ ಕರೆಗೆ ಸ್ಪಂದಿಸದ ಜನತೆ ಎಂದು ಬಿಂಬಿಸುತ್ತದೆ. ಇದರಿಂದ ಬಂದ್ ಕರೆ ಕೈ ಬಿಡುವುದು ಒಳಿತು ಎಂದು ಹೇಳಿದರೆನ್ನಲಾಗಿದೆ.

ಪಕ್ಷದ ಹಲವಾರು ಮುಖಂಡರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಪಕ್ಷ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿದೆ. ಬದಲಾವಣೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಕಾಂಗ್ರೆಸ್ ನಡೆಸುತ್ತಿರುವ ಕರ್ನಾಟಕ ಬಂದ್ ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಹೀಗಾಗಿ ಬಂದ್ ಕೆಲವೇ ಗಂಟೆಗಳಿಗೆ ಸೀಮಿತವಾಗಲಿದೆ ಎಂದು ಹೇಳಿದರು.

ಈ ಅವಧಿಯಲ್ಲಿ ಅಂಗಡಿಗಳನ್ನು ಮುಚ್ಚಿ ಸಾಂಕೇತಿಕವಾಗಿ ಬಂದ್ಗೆ ಸಹಕರಿಸುವಂತೆ ಮಾರುಕಟ್ಟೆ ಭಾದ್ಯಸ್ಥರಿಗೆ ಮನವಿ ಮಾಡಿರುವ ಅವರು, ರಸ್ತೆ, ರೈಲು ಸಂಚಾರ, ಶೈಕ್ಷಣಿಕ ಚಟುವಟಿಕೆಗಳು, ಆಸ್ಪತ್ರೆ, ಅಗತ್ಯ ಸೇವೆಗಳು, ಪರೀಕ್ಷೆಗಳು ಬಂದ್ ಹೊರತಾಗಿರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply