ಬೆಂಗಳೂರು ನಗರದ ನಾಗರಿಕರ ಶ್ವಾಸಕೋಶ ಸಮಸ್ಯೆಗೆ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ

3 years ago

ಬೆಂಗಳೂರು ನಗರದ ನಾಗರಿಕರನ್ನು ಸೇರಿದಂತೆ ಇಡೀ ರಾಜ್ಯದ ಲಕ್ಷಾಂತರ ನಾಗರಿಕರಲ್ಲಿ ಶ್ವಾಸಕೋಶದ ಸಂಬಂಧಿತ ಕಾಯಿಲೆಗಳು ಮತ್ತು ಕೆಮ್ಮು ಕಳೆದ 3-4 ತಿಂಗಳ ಅವಧಿಯಲ್ಲಿ ಅತಿ ಹೆಚ್ಚಾಗಿದೆ.

ಬೆಂಗಳೂರು ನಗರದಲ್ಲಂತೂ ಜನ ಉಸಿರಾಟದ ಸಮಸ್ಯೆಯಿಂದ ಮತ್ತು ಕೆಮ್ಮಿನ ಕಾರಣಕ್ಕಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದೆಲ್ಲವೂ ಯಾವುದೇ ವೈರಸ್‌ಗಳಿಂದ ಬಂದಿರುವಂತಹ ಅಪಾಯವಲ್ಲ. ಇದೆಲ್ಲವೂ ಬಿ.ಬಿ.ಎಂ.ಪಿ. ಮತ್ತು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಅನೇಕ ನಗರಗಳಲ್ಲಿ ನಡೆಸುತ್ತಿರುವ ಅವೈಜ್ಞಾನಿಕವಾದ ಕಾಮಗಾರಿಗಳಿಂದ ಆಗುತ್ತಿರುವ ತೊಂದರೆ. ಎಲ್ಲಾ ಕಡೆಯಲ್ಲೂ ಪಾದಚಾರಿ ಮಾರ್ಗಗಳನ್ನು ಅಗೆದಿದ್ದಾರೆ. ಚರಂಡಿ ನೀರಿನ ಮಾರ್ಗಗಳನ್ನು ರಿಪೇರಿಯ ನೆಪದಲ್ಲಿ ಕಿತ್ತು ಹಾಕಿದ್ದಾರೆ.

ಜೊತೆಗೆ ಜಿಯೋ ಮತ್ತು ಇತರೆ ಕಂಪನಿಗಳ ಕೇಬಲ್‌ಗಳ ಅಳವಡಿಕೆಗಾಗಿ ಭೂಮಿಯನ್ನು ಅಗೆದಿದ್ದಾರೆ. ವೈಟ್ಯಾಪಿಂಗ್ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳಿಗೆ ಬಳಸುತ್ತಿರುವ ಜಲ್ಲಿ ಪುಡಿಯ ಧೂಳು ಸಾವಿರಾರು ಜನ ನಾಗರಿಕರ ಶ್ವಾಸಕೋಶಕ್ಕೆ ಅಪಾಯವನ್ನುಂಟು ಮಾಡಿದೆ.

ಮಳೆಗಾಲದ ಸಮಯದಲ್ಲಿ ಮಳೆ ಬಂದ ಕಾರಣದಿಂದ ಧೂಳು ಏಳುತ್ತಿರಲಿಲ್ಲ. ಈಗ ಮಳೆಯಿಲ್ಲದ ಕಾರಣದಿಂದ ಧೂಳಿನ ಸಮಸ್ಯೆಯಿಂದ ನಾಗರಿಕರು ತತ್ತರಿಸಿ ಹೋಗಿದ್ದಾರೆ. ವಾತಾವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಬಿಸಿಲಿನ ತಾಪ, ಧೂಳಿನ ಸಮಸ್ಯೆ ಇವುಗಳಿಂದ ನಾಗರಿಕರು ಸಂಚರಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಈ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡುವುದರಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನುದಾನವನ್ನು ಬಳಸಿಕೊಳ್ಳಬೇಕು ಎನ್ನುವ ಕಾತುರದಲ್ಲಿ ಅವೈಜ್ಞಾನಿಕವಾದ ಗುಣಮಟ್ಟವಿಲ್ಲದ, ದೂರದೃಷ್ಟಿತ್ವವಿಲ್ಲದ, ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಕಾಣದ ಕೈಗಳು ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ಇವರ ದುರಾಸೆ ಪ್ರಚಾರದ ಹುಚ್ಚಿನಿಂದಾಗಿ ನಾಗರಿಕರು ಆಸ್ಪತ್ರೆಗಳನ್ನು ಸೇರಿ ತಮ್ಮ ಜೇಬಿನ ಹಣವನ್ನು ಕಳೆದುಕೊಳ್ಳತ್ತಿದ್ದಾರೆ. ಬಿ.ಬಿ.ಎಂ.ಪಿ. ಮತ್ತು ರಾಜ್ಯ ಸರ್ಕಾರ ಜನರ ಮೇಲೆ ಕಾಳಜಿ ಇದ್ದರೆ ಕನಿಷ್ಠ ಪಕ್ಷ ಸಂಜೆಯ ವೇಳೆಯಲ್ಲಿ ರಸ್ತೆಗಳಿಗೆ ನೀರು ಚಿಮುಕಿಸುವ ಕೆಲಸವನ್ನು ಮಾಡಿದರೆ ಕನಿಷ್ಠ ಧೂಳು ಏಳುವುದನ್ನು ಉಸಿರಾಟದ ಸಮಸ್ಯೆಯೂ ಕನಿಷ್ಠ ಮಟ್ಟಕ್ಕಾದರು ತಪ್ಪಿಸಬಹುದು. ನಾಗರಿಕರ ಉಸಿರಾಟದ ಸಮಸ್ಯೆಯಿಂದ ಹೊರಬರಬಹುದು.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply