Why not betel leaf green tea?
ಇದೊಂದು ಉತ್ತರ ಹೊಳೆಯುವ ಹೊತ್ತಿಗೆ ಸುಮಾರು ಒಂದು ವಾರ ಕಳೆದುಹೋಗಿತ್ತು. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿರುವಾಗ ಮೊಬೈಲ್ನಲ್ಲಿ ಅಚಾನಕ್ಕಾಗಿ ಖ್ಯಾತ ವಿಜ್ಞಾನಿಯೊಬ್ಬರು ಪ್ರಕಟಿಸಿದ್ದ Betel leaf: The neglected green gold of India ಎನ್ನುವ ಒಂದು ದೀರ್ಘ ಸಂಶೋಧನ ಪೇಪರ್ ಓದಿದ ನಂತರ ಸುಮಾರು ಒಂದು ವಾರ ನಾನು ಅದೇ ಗುಂಗಿನಲ್ಲಿದ್ದೆ. ಆಫೀಸಿನಲ್ಲಿ ಎಲ್ಲಾ ಕೆಲಸಗಳ ನಡುವೆಯೂ ಮನಸ್ಸು ಮಾತ್ರ “Why, Betel leaf is neglected in India”ಎನ್ನುವ ಪ್ರಶ್ನೆಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
ಭಾರತದಂತ ಸಾಂಪ್ರದಾಯಿಕ ದೇಶದಲ್ಲಿ ಇಷ್ಟೊಂದು ಔಷಧಿ ಗುಣವಿರುವ ವಿಳ್ಯೆದೆಲೆಯನ್ನು ನಾವು ಹೇಗೆ ಬಳಸುತ್ತಿದ್ದೇವೆ. ಇದನ್ನು ಸಹಜವಾಗಿ ಎಲ್ಲರೂ ಸೇವಿಸುವ ಅವಕಾಶಗಳು ಎಷ್ಟಿವೆ? ವಿಳ್ಯೆದೆಲೆಯನ್ನು ಅಡಿಕೆ, ಸುಣ್ಣ ಹಾಗೂ ಹೊಗೆಸೊಪ್ಪಿನೊಂದಿಗೆ ತಿನ್ನುವವರಿದ್ದಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಕೊಡಗು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ವೈನ್ ತಯಾರಿಸುತ್ತಾರೆ. ಆದರೆ ಇದೊಂದು ಆರ್ಥಿಕ ಸಂಪನ್ಮೂಲವನ್ನು ಹುಟ್ಟುಹಾಕುವಷ್ಟು ದೊಡ್ಡದಾಗಿ ಬೆಳೆಯಲು ಇಂದಿಗೂ ಸಾಧ್ಯವಾಗಿಲ್ಲ. ದಕ್ಷಿಣ ಭಾರತ ಹಾಗೂ ಉತ್ತರದ ಕೆಲವು ಭಾಗಗಳಲ್ಲಿ ಮದುವೆ ಹಾಗೂ ಇನ್ನಾವುದೇ ಸಂಭ್ರಮದ ದಿನಗಳ ಊಟದ ನಂತರ ಗುಲ್ಕನ್ ಹಾಗೂ ಚೂರು ಅಡಿಕೆಯ ಜತೆಗೆ ವಿಳ್ಯೆದೆಲೆಯನ್ನು ಬಳಸುವ ಪದ್ಧತಿಯೂ ಇದೆ. ಆದರೆ ಇದೂ ಕೂಡ ಎಲ್ಲರಿಗೂ ಸಾಧ್ಯವಿಲ್ಲ. ಉಳಿದಂತೆ ವಿಳ್ಯೆದೆಲೆ ಬಳಕೆಯಾಗುವುದು ಹಬ್ಬ, ಪೂಜೆಗಳಲ್ಲೇ ಹೆಚ್ಚು. ಹಾಗಾದರೆ ಇದನ್ನು ಸೇವಿಸುವ ಸರಳ ವಿಧಾನ ಯಾವುದು?
ಒಂದು ಅಧ್ಯಯನದ ಪ್ರಕಾರ ಮನುಷ್ಯನ ಅದೆಷ್ಟೋ ಖಾಯಿಲೆಗಳು ನಮ್ಮ ಜೀರ್ಣಕ್ರಿಯೆಯ ಸಮಸ್ಯೆಯಿಂದಲೇ ಆರಂಭವಾಗುತ್ತವೆ. ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ರೀಲ್ಗಳಲ್ಲಿ ವಿವಿಧ ಬಗೆಯ ಅಡುಗೆ ಮಾಡುವವರನ್ನು ಗಮನಿಸಿದರೂ ಸಾಕು, ಇವತ್ತಿನ ಆಹಾರ ಉದ್ಯಮ ಅದೆಷ್ಟು ವೇಗದಲ್ಲಿ ಬೆಳೆಯುತ್ತಿದೆ ಹಾಗೂ ಎಷ್ಟೆಲ್ಲಾ ಆವಿಷ್ಕಾರಗಳು ನಡೆಯುತ್ತಿವೆ, ಅದರಿಂದ ಉಂಟಾಗುತ್ತಿರುವ ಆರೋಗ್ಯದ ಸಮಸ್ಯೆಗಳು ಯಾವ ಪ್ರಾಮಾಣದಲ್ಲಿವೆ ಎನ್ನುವ ಒಂದು ಸಣ್ಣ ಅಂದಾಜು ನಮ್ಮೆಲ್ಲರಿಗೂ ಸಿಗಬಹುದು.
ಈ ಎಲ್ಲವನ್ನೂ ಯೋಚಿಸುತ್ತಿರುವಾಗಲೇ ಈ ಎಲ್ಲಾ ಸಮಸ್ಯೆಗಳನ್ನು ಒಂದು ಸಣ್ಣ ವಿಳ್ಯೆದೆಲೆಯಿಂದ ಬಗೆಹರಿಸಲು ಸಾಧ್ಯವಿದೆ ಎನ್ನುವ ಆಲೋಚನೆ ರೂಪುಗೊಳ್ಳತೊಡಗಿತು. ಆದರೆ ಇದನ್ನು ಎಲ್ಲರೂ ಸೇವಿಸುವಂತೆ ಮಾಡುವುದು ಹೇಗೆ? ಆಗಲೇ ನನಗೆ Why not betel leaf green tea? ಎನ್ನುವ ಉತ್ತರ ಹೊಳೆದದ್ದು.
ಉತ್ತರ ಹೊಳೆದ ಅದೇ ರಾತ್ರಿ ಧಾರವಾಡದ ಕೃಷಿ ವಿಶ್ವವಿದ್ಯಾಯದಲ್ಲಿ ಅಧ್ಯಯನ ಮಾಡುತ್ತಿದ್ದ ಗೆಳತಿಯೊಬ್ಬಳೊಂದಿಗೆ ಒಂದು ತಾಸು ಮಾತನಾಡಿದೆ. ಅವಳ ಮಾತುಗಳಿಂದ ನನ್ನ ಆಲೋಚನೆಗೆ ಇನ್ನಷ್ಟು ಸ್ಪಷ್ಟವಾಯಿತು. ಅದಾದ ನಂತರ ಆಫೀಸಿಗೆ ಹೊರಡುವ ಮೊದಲು Church streetನ ಬುಕ್ವರ್ಮ್ ಪುಸ್ತಕ ಮಳಿಗೆಯಲ್ಲಿ ಇ.ಜೈವಂತ್ ಪೌಲ್ ಬರೆದ “The Story of Tea” ಎನ್ನುವ ಪುಸ್ತಕ ಖರೀದಿಸಿ ಮಧ್ಯಾಹ್ನದ ಊಟದ ಸಮಯದಲ್ಲಿ ಓದಿದೆ.
ಟೀ ಎನ್ನುವ ಒಂದು ಪಾನೀಯ ತನ್ನ ಆರಂಭದ ದಿನಗಳಿಂದ ಇಂದಿನವರೆಗೂ ಹೇಗೆ ರೂಪಗಳನ್ನು ಬದಲಾಯಿಸಿದೆ. ಎಷ್ಟೆಲ್ಲಾ ದೇಶಗಳ, ಎಷ್ಟೆಲ್ಲಾ ಯಂತ್ರಗಳಿಗೆ ತನ್ನನ್ನು ಒಡ್ಡಿಕೊಂಡಿದೆ, ಜಗತ್ತಿನ ಯಾವ ಯಾವ ದೇಶಗಳು ಟೀ ಮಾರುಕಟ್ಟೆಯನ್ನು ವಿಸ್ತರಿಸುತ್ತಾ ಬಂದಿವೆ. ಫರ್ಮಂಟೆಡ್ ಟೀ, ಟ್ರಡಿಷನಲ್ ಟೀ, ಡಸ್ಟ್ ಟೀ, ಗ್ರೀನ್ ಟೀ, ವೈಟ್ ಟೀ, ಮಾಚಾ, ಐಸ್ ಟೀ, ಬ್ಲೆಂಡಿಂಗ್ಸ್ . . . ಹೀಗೆ ಒಂದೊಂದನ್ನೂ ಓದುತ್ತಾ ಹೋದಂತೆ ಟೀ ಎನ್ನುವ ವಿಸ್ಮಯದ ರಸ್ತೆಯಲ್ಲಿ ಸಾಕಷ್ಟು ದೂರ ನಡೆದುಬಿಟ್ಟಿದ್ದೆ. ಟೀ ಎನ್ನುವುದು ನಾವು ಹೊಟೇಲ್ನಲ್ಲಿ ಕೂತು “ಒಂದು ಛೋಟಾ ಟೀ” ಎಂದು ಆರ್ಡರ್ ಮಾಡುವಷ್ಟು ಸಣ್ಣದಲ್ಲ ಎನಿಸಲು ಸಂಪೂರ್ಣವಾಗಿ ಅರ್ಥವಾಗಿತ್ತು.
ಈ ಎಲ್ಲಾ ಬೆಳವಣಿಗೆಯ ನಂತರ ನಾನು ಅಂದುಕೊಂಡಂತ ವಿಳ್ಯೆದೆಲೆಯಿಂದ ಗ್ರೀನ್ ಟೀ ತಯಾರಿಸಬಹುದಾ? ಕೆಮೆಲಿಯಾ ಸೈನಿಸಿಸ್ ಅಥವಾ ಸಾಂಪ್ರದಾಯಿಕವಾಗಿ ಟೀ ಲೀಫ್ ಎನ್ನುವ ಎಲೆಯಲ್ಲಿ ನಡೆಸಿರುವ ಅಷ್ಟೂ ಪ್ರಯೋಗಳನ್ನು ವಿಳ್ಯೆದೆಲೆಯಲ್ಲಿ ಮಾಡಬಹುದಾ? ವಿಳ್ಯದೆಲೆಯಲ್ಲಿ ಗ್ರೀನ್ ಟೀ ತಯಾರಿಸುವ ಮೂಲಕ ಅದಕ್ಕೊಂದು ಪರ್ಯಾಯ ಮಾರುಕಟ್ಟೆಯನ್ನು ಹುಟ್ಟುಹಾಕಬಹುದಾ? ಎನ್ನುವ ಪ್ರಶ್ನೆಗಳು ಕೆಣಕಲು ಶುರುವಾದವು. ಆಫೀಸಿನಿಂದ ರೂಮಿಗೆ ಬಂದವನು ಸಮಯ ಸಿಕ್ಕಾಗೆಲ್ಲ ಕೂತು ಕೆಮೆಲಿಯಾ ಸೈನೆಸಿಸ್ ಅಂದರೆ ಟೀ ಲೀಫ್ನಲ್ಲಿರುವ ಎಷ್ಟು ಬಗೆಯ ಅಂಶಗಳು ವಿಳ್ಯೆದೆಲೆಯಲ್ಲೂ ಇವೆ ಎನ್ನುವ ಒಂದು ಹೋಲಿಕೆ ಪಟ್ಟಿ ತಯಾರಿಸಿದೆ. ಇದರೊಂದಿಗೆ ಗ್ರೀನ್ ಟೀ ಅಂದಿನ ಮಾರುಕಟ್ಟೆ ಹಾಗೂ ಮುಂದಿನ ಹತ್ತು ವರ್ಷಗಳಲ್ಲಿ ಇದು ಎಷ್ಟು ವಿಸ್ತಾರಗೊಳ್ಳಬಹುದು ಎನ್ನುವ ಒಂದಿಷ್ಟು ಮಾಹಿತಿ ಕಲೆಹಾಕಿದೆ. ಈಗಾಗಲೇ ದೈತ್ಯವಾಗಿ ಬೆಳೆದಿರುವ ಟೀ ಕಂಪನಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದರ ಕುರಿತು ಸಾಧ್ಯವಾದಷ್ಟು ತಿಳಿಯಲು ಪ್ರಯತ್ನಿಸಿದೆ.
ಹೀಗೆ ಇದೇ ಆಲೋಚನೆಯಲ್ಲಿ ಮುಳುಗಿರುವಾಗಲೇ ಬೆಂಗಳೂರು ತೊರೆದು ಮತ್ತೆ ಮೈಸೂರಿಗೆ ಹೊರಡಬೇಕು ಎನಿಸಿತು. ಒಂದು ದೀರ್ಘ ಬಿಡುವು ಬಯಸಿದ್ದ ನಾನು ಎಲ್ಲಾ ಬಗೆಯ ಸೋಶಿಯಲ್ ಮೀಡಿಯಾಗಳಿಂದ ಹೊರಗುಳಿದು ಸಾಧ್ಯವಾದಷ್ಟು ಒಬ್ಬನೇ ಇರುವುದಕ್ಕೆ ಆರಂಭಿಸಿದೆ. ಫೋನ್ ಬಳಸುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಯಿತು. ಅದೇ ಸಮಯಕ್ಕೆ ಕೋವಿಡ್ನಿಂದ ಕೆಲಸದ ಬಿಡುವು ಸಿಕ್ಕಿದ್ದು ಸಾಧ್ಯವಾದಷ್ಟು ಗ್ರೀನ್ ಟೀ ಕುರಿತು ಓದುವುದಕ್ಕೆ ಬಳಸಿಕೊಳ್ಳಲು ಸಹಾಯವಾಯಿತು. ವಿಳ್ಯೆದೆಲೆಯ ಮೇಲೆ ಇದುವರೆಗೂ ನಡೆದಿರುವ ಸಂಶೋಧನೆಗಳ ಬಗ್ಗೆ ಇಂಟರ್ನೆಟ್ನಲ್ಲಿ ಸಾಧ್ಯವಾದಷ್ಟು ಓದವುದರೊಂದಿಗೆ, ವಿಳ್ಯೆದೆಲೆಯ ಕಾಂಪೋನೆಂಟ್ಸ್ ಹಾಗೂ ಕೆಮಿಕಲ್ ಪ್ರಾರ್ಪಟಿಸ್ಗಳ ಕುರಿತು ತಿಳಿದವರ ಜೊತೆಗೆ ಮಾತನಾಡಲು ಆರಂಭಿಸಿದೆ.
ವಿಜ್ಞಾನ ವಿದ್ಯಾರ್ಥಿಯಲ್ಲದ ನನಗೆ ಆ ಕುರಿತು ಓದುವಾಗ ಹಾಗೂ ಕೆಲವರು ಮಾತನಾಡುವಾಗ ಅವರು ಬಳಸುತ್ತಿದ್ದ ಸೈಂಟಿಫಿಕ್ ಪದಗಳು ಅರ್ಥವೇ ಆಗುತ್ತಿರಲಿಲ್ಲ. ಅಂತಹ ಪದಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಗೂಗಲ್ನಲ್ಲಿ ಹುಡುಕಿ ಅರ್ಥೈಸಿಕೊಳ್ಳಲು ಯತ್ನಿಸುವಾಗ ಮೂಲ ಪದಗಳಿಗಿಂತ ಉತ್ತರ ರೂಪದಲ್ಲಿ ದೊರೆಯುತ್ತಿದ್ದ ಪದಗಳೇ ಕಠಿಣ ಎನಿಸಲು ಆರಂಭವಾಗಿ ಅಲ್ಲಿಗೇ ಬಿಟ್ಟುಬಿಡುತ್ತಿದ್ದೆ. ಕೋವಿಡ್ ಸಮಯವಾಗಿದ್ದರಿಂದ ಮಾನಸ ಗಂಗೋತ್ರಿಯ ಲೈಬ್ರರಿಗೆ ಹೋಗಿ ಓದುವುದು ಅಥವಾ ಇನ್ನಷ್ಟು ಅಧ್ಯಯನ ಮಾಡಿದವರನ್ನು ಹುಡುಕಿ ನೇರವಾಗಿ ಕಾಣುವುದು ಸಾಧ್ಯವೇ ಇರಲಿಲ್ಲ.
ಹೀಗೆ ಮುಂದಿನ ವರ್ಷದವರೆಗೂ ಒಬ್ಬನೇ ಒದ್ದಾಡುತ್ತಿರುವಾಗಲೇ ಮಂಗಳೂರು ಮೂಲದ ಆಹಾರ ತಂತ್ರಜ್ಞಾನ ವಿಜ್ಞಾನಿ ಡಾ.ಮಮತಾರ ಪರಿಚಯವಾಯಿತು. ಅದಾಗಲೇ ಹತ್ತಾರು ಹಿರಿಯ ವಿಜ್ಞಾನಿಗಳನ್ನು ಮಾತನಾಡಿಸಿ ಸೋತಿದ್ದ ನನಗೆ ಇವರೊಂದಿಗೆ ಮೊದಲು ಮಾತನಾಡುವಾಗ ಇವರೂ ಉಳಿದವರಂತೆ ಇರಬಹುದು ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ ಅಕ್ಟೋಬರ್ ೮/ ೨೦೨೦ರದ ಸಂಜೆ ಮಮತಾ ಅವರೇ ಫೋನ್ ಮಾಡಿ, ಈಶಾನ್ಯ, Can You please explain me more about your idea ಎಂದರು. ಸಮುದ್ರದ ಬಂಡೆಗಳಿಗೆ ಅಪ್ಪಳಿಸುವ ಅಲೆಯಂತೆ ಎಲ್ಲವನ್ನೂ ಹೇಳುತ್ತಾ ಹೋದೆ. ಊರು, ಹೆಸರು, ಮನೆ, ಮನೆಯವರು, ಇದುವರೆಗೂ ಮಾಡಿದ ಅವಾಂತರಗಳು ಇದೀಗ ಮಾಡಬೇಕು ಎಂದು ಹೊರಟಿರುವ ಹೊಸ ಸಾಹಸ. . . ಹೀಗೆ ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದೆ.
ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಮಮತಾ, Okay Give me some time. I will call you in a week ಎಂದವರು ಮತ್ತೆ ಫೋನ್ ಮಾಡಲೇ ಇಲ್ಲ. ನಾನು ನನ್ನದೇ ರೀತಿಯಲ್ಲಿ ಏನೇನೋ ಮಾಡುತ್ತಾ ಸಮಯ ಕಳೆಯುತ್ತಿದ್ದೆ. ಹೀಗಿರುವಾಗಲೇ ವಾರದ ನಂತರ ಫೋನ್ ಮಾಡಿದ ಮಮತಾ ಈಶಾನ್ಯ, ಇದರಲ್ಲಿ ಖಂಡಿತಾ ಗ್ರೀನ್ ಟೀ ಮಾಡಬಹುದು. ಟೇಸ್ಟ್, ಟೆಕ್ಚರ್ ಎವರಿಥಿಂಗ್ ಇಸ್ ಪಾಸಿಬಲ್, ನೀವು ಪ್ರೋವೈಡ್ ಮಾಡಿದ್ದ ಬೀಟಲ್ ಲೀಫ್ಸ್ ರಿಲೆಟೆಡ್ ಮೇಟಿರಿಯಲ್ಸ್ ತುಂಬಾ ಯೂಸ್ ಆಯ್ತು. ನಾನು ಎಲ್ಲವನ್ನೂ ಓದಿದೆ. They are really good. Will take this project foreword ಎಂದರು. ಆ ಹೊತ್ತಿಗಾಗಲೇ ಫೋನ್ ರಿಸೀವ್ ಮಾಡದ, ಮೇಲ್ಗಳಿಗೆ ಉತ್ತರಿಸದ, ರೀ. . . . ಪ್ರೋಡಾಕ್ಟ್ ಡೆವೆಲಪ್ಮೆಂಟ್ ಎಂದರೆ ಕನಿಷ್ಠ ಹತ್ತು ಲಕ್ಷವಾದರೂ ಬೇಕು! ಇದೆಯಾ? ಎಂದು ಗಟ್ಟಿಯಾಗಿ ಉಢಾಫೆಯಿಂದ ಮಾತನಾಡಿದ ಎಲ್ಲರನ್ನೂ ನೋಡಿದ್ದೆ. ಈ ಎಲ್ಲದರ ನಡುವೆ ಮಮತಾ ಏನನ್ನೂ ಕೇಳದೆ ಕೆಲಸ ಆರಂಭಿಸಿದ್ದು, ಇದನ್ನು ಖಂಡಿತಾ ಮಾಡಬಹುದು ಎನ್ನುವ ಭರವಸೆ ನೀಡಿದ್ದು ನನ್ನನ್ನು ಇನ್ನಷ್ಟು ಮೆದುಗೊಳಿಸಿತು.
ಇದಾದ ಮುಂದಿನ ಆರು ತಿಂಗಳು ನಾನು ಮಾಡಿದ್ದು ಇದೊಂದೇ ಕೆಲಸ. ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುವ ವಿಳ್ಯೆದೆಲೆಗಳನ್ನು ಹುಡುಕುವುದು, ಅವುಗಳನ್ನು ವಿಂಗಡಿಸಿ ಪ್ರತ್ಯೇಕವಾಗಿ ಸಾಫ್ಟ್ ಕವರ್ಗಳಲ್ಲಿ ಮಮತಾರ ಲ್ಯಾಬ್ಗೆ ಕಳಿಸುವುದು. ವಾರದ ನಂತರ ಇಡೀ ವಾರ ನಡೆದ ಪ್ರಯೋಗಗಳು, ಹೊಸದಾಗಿ ಗೋಚರಿಸುತ್ತಿರುವ ಸಾಧ್ಯತೆಗಳನ್ನು ಇಬ್ಬರೂ ಮಾತನಾಡಿಕೊಳ್ಳುವುದು ನಡದೇ ಇತ್ತು. ಹೀಗೆ ಸತತವಾಗಿ ನಡೆದ ಮಂಗಳೂರಿನ ರಾತ್ರಿ ಪ್ರಯಾಣಗಳು, ಲ್ಯಾಬ್ನಲ್ಲಿನ ಪ್ರಯೋಗ, ಟೆಕ್ನಾಲಜಿ ಟ್ರಾನ್ಸ್ಫರ್, ಪೇಟೆಂಟ್ ಹೀಗೆ ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವ ಹೊತ್ತಿಗೆ ನಾನು ಕೆಲಸ ಬಿಟ್ಟು ಒಂದೂವರೆ ವರ್ಷಗಳು ಕಳೆದುಹೋಗಿದ್ದವು.
ಲ್ಯಾಬ್ನಿಂದ ವಿಳ್ಯೆದೆಲೆಯಲ್ಲಿ ಗ್ರೀನ್ ಟೀ ಮಾಡುವ ಪ್ರೋಸೆಂಸಿಂಗ್ ಫಾರ್ಮೂಲ ಹೊರಗೆ ತಂದ ನಂತರ ಆರಂಭವಾಗಿದ್ದು ಮತ್ತೊಂದು ಪ್ರಯಾಣ. ಪ್ರೀ ಆರ್ಡ್ರಿಂಗ್ ಟೆಸ್ಟ್ ಮಾರ್ಕೆಟಿಂಗ್ ಮಾಡಿದ್ದು, ಇನ್ವೆಸ್ಟರ್ ಹುಡುಕಾಟ, ಸರ್ಕಾರದ ಯೋಜನೆಗಳನ್ನು ಹುಡುಕಿ ಅಲೆದಿದ್ದು, ಸೀಡ್ ಫಂಡಿಂಗ್, ಇನ್ವೆಸ್ರ್ಸ್ ಹುಡುಕಾಟ, ಮಾರ್ಕೆಟ್ ರಿಸರ್ಚ್, ವೈಟ್ ಲೇಬಲಿಂಗ್, ಕಡೆ ಘಳಿಗೆಯಲ್ಲಿ ನಂಬಿಸಿ ಇಲ್ಲ ಎಂದವರು. . . ಎಂದಿಗೂ ತಮ್ಮ ವೃತ್ತಿ ಶಿಸ್ತು ಮೀರದವರು ಈ ಹುಡುಗ ಏನೋ ಮಾಡುತ್ತಿದ್ದಾನೆ ಸಾಧ್ಯವಾದಷ್ಟು ಜತೆ ನಿಲ್ಲಬೇಕು ಎಂದು ಗುಟ್ಟಾಗಿ ಸಹಾಯಕ್ಕೆ ನಿಂತವರು. . ಹೀಗೆ ಸಾಕಷ್ಟು ಜನರಿದ್ದಾರೆ. ಈ ಎಲ್ಲದರ ಬಗ್ಗೆ ಮುಂದೊಂದು ದಿನ ಬರೆಯುತ್ತೇನೆ.
ನಾನು ಕಾಲೇಜಿನಲ್ಲಿ ಆರಿಸಿಕೊಂಡ ವಿಷಯ, ಬೆಂಗಳೂರಿನಲ್ಲಿ ಮಾಡಿದ ಕೆಲಸ, ಇದೀಗ ಮಾಡುತ್ತಿರುವ ಉದ್ಯಮ ಯಾವುದೂ ತಾಳೆಯಾಗುವುದಿಲ್ಲ. ಎಲ್ಲವೂ ಒಂದೊಂದು ದಿಕ್ಕಿನಲ್ಲಿ ನಿಂತಿವೆ. ಈ ನನ್ನ ಸಣ್ಣ ಪ್ರಯಾಣದಲ್ಲಿ ಹೇಳುವುದಾದರೆ ಯಾವುದೇ ಉದ್ಯಮ ನಡೆಸುವುದಕ್ಕೆ ಒಂದು ಉದ್ದೇಶ ಎಷ್ಟೋ ಮುಖ್ಯವೋ ಅದನ್ನು ಜನರಿಗೆ ತಲುಪಿಸಲು ಬೇಕಾದ ದಾರಿಯೂ ಅಷ್ಟೇ ಮುಖ್ಯ. ಆದರೆ ಈ ಎರಡೂ ದಾರಿಗಳು ಬಹಳವೇ ಭಿನ್ನ ಮತ್ತು ಈ ಎರಡೂ ಬೇಡುವ ಕೌಶಲ್ಯಗಳೂ ಬೇರೆ ಬೇರೆ. ಆ ದಾರಿಯಲ್ಲಿ ನಾನು ಇನ್ನಷ್ಟು ನಡೆಯಬೇಕಿದೆ.
ಈ ಸಣ್ಣ ಪ್ರಯಾಣದಲ್ಲಿ ನನ್ನ ಅದೆಷ್ಟೋ ನಂಬಿಕೆಗಳು ತಲೆಕೆಳಗಾಗಿವೆ. ಆಲೋಚನೆಗಳು ಸರಳವಾಗಿರುವುದು ಎಷ್ಟು ಮುಖ್ಯ ಎನ್ನುವುದರಿಂದ ತಾಳ್ಮೆ ಎನ್ನುವುದನ್ನು ಪ್ರತಿದಿನವೂ ಪರೀಕ್ಷಿಸುತ್ತಲೇ ಬಂದಿದೆ.
ಬಿಸಿನೆಸ್ ಆರಂಭಿಸುವುದಕ್ಕೆ ನಮಗೆ ಲಕ್ಷಗಟ್ಟಲೆ ಹಣ, ಆಫೀಸು, ಕೆಲಸದವರು, ದೊಡ್ಡವರ ಪರಿಚಯ ಹೀಗೆ ಯಾವುದೂ ಬೇಕಿಲ್ಲ. ಬೇಕಿರುವುದಿಷ್ಟೇ ನಾನು ಏನು ಮಾಡುತ್ತೇನೆ, ನಿಜಕ್ಕೂ ಇದು ಈ ಸಮಾಜಕ್ಕೆ ಅಗತ್ಯವಿದೆಯಾ? ಇದಕ್ಕೆ ಒಂದು ವ್ಯಾಪಾರವಾಗಿ ಬೆಳೆಯುವ ಸಾಧ್ಯತೆ ಇದೆಯಾ ಎನ್ನುವುದರ ಜೊತೆಗೆ ಒಂದಿಷ್ಟು ತಾಳ್ಮೆ ಅಷ್ಟೇ ಎನ್ನುವುದು ಸಂಪೂರ್ಣವಾಗಿ ಅರ್ಥವಾಗಿದೆ.
ನಾನು ಏನೋ ದೊಡ್ಡದು ಮಾಡಿದ್ದೇನೆ ಎಂದು ಈ ಮಾತು ಹೇಳುತ್ತಿಲ್ಲ, ಇಂದಿಗೂ ನನಗೆ ಆಫೀಸು, ಕೆಲಸದವರು, ನನ್ನದೇ ಸ್ವಂತ ಯೂನಿಟ್ ಸೇರಿದಂತೆ ಏನೆಂದರೇ ಏನೂ ಇಲ್ಲ. ಇರುವುದು ಒಂದು ಲ್ಯಾಪ್ಟಾಪ್ ಮಾತ್ರ. ಆದರೂ ನಮ್ಮ ಗ್ರೀನ್ ಟೀ ತಯಾರಾಗಿ ಮಾರುಕಟ್ಟೆ ತಲುಪಿದೆ.
ನಾನು ಏನನ್ನೂ ಹೇಳಲು ಬಯಸುತ್ತಿದ್ದೇನೆ ಎಂದರೆ ಈಗಾಗಲೇ ಇರುವ ಸವಲತ್ತುಗಳನ್ನು ಹುಡುಕಿ ಬಳಸಿಕೊಳ್ಳುವುದನ್ನು ನಾವು ಕಲಿಯಬೇಕು ಎನ್ನುವುದಷ್ಟೇ. ಈ ಎಲ್ಲದರ ಬಗ್ಗೆ ಮುಂದೊಂದು ದಿನ ಬರೆಯುತ್ತೇನೆ. ಈ ಎಲ್ಲದರ ನಡುವೆ ಪ್ರಾಮಾಣಿಕವಾಗಿ ನಾನು ಅಂದುಕೊಂಡಂತೆ ಒಂದು ಒಂದು ಒಳ್ಳೆಯ ಕೆಲಸ ಮಾಡಿದ್ದೇನೆ ಎನ್ನುವ ನಂಬಿಕೆ ಇದೆ.
ಸ್ವಂತಿಕೆಯಿಂದ ಏನನ್ನಾದರೂ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಈ ಕನಸಿನ ಬೆನ್ನು ಹತ್ತಿದೆ. ಎರಡು ವರ್ಷಗಳ ಸತತ ಕೆಲಸದ ನಂತರ ಇದೀಗ ಭಾರತದ ಟೀ ಮಾರುಕಟ್ಟೆಯನ್ನು ತಲುಪಿದ್ದೇವೆ. ಉತ್ತಮ ಸ್ವಂದನೆಯೂ ಜನರಿಂದ ಬರುತ್ತಿದೆ. ಇಂಡಿಯಾ ಅಮೆಜಾನ್ನಲ್ಲೂ ನಮ್ಮ ಟೀ ಲಭ್ಯವಿದೆ. ಇದೆಲ್ಲದರ ಜೊತೆಗೆ ಯುಎಸ್ಎ, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟೆಲಿಯಾ, ಸಿಂಗಾಪೂರ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ ಸೇರಿದಂತೆ ಹತ್ತು ದೇಶಗಳಿಗೆ ನಮ್ಮ ಬೀಟಲ್ ಲೀಫ್ ಟೀ ತಲುಪಿ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ಆ ದೇಶಗಳ ರಿಟೈಲ್ ಮಾರುಕಟ್ಟೆಯನ್ನು ತಲುಪುವ ಕೆಲಸವೂ ನಡೆಯುತ್ತಿದೆ. ಇದು ನನ್ನ ಮೊದಲ ಹೆಜ್ಜೆ ಅಷ್ಟೇ. ಇದನ್ನು ಇನ್ನಷ್ಟು ಉತ್ತಮಗೊಳಿಸುವ, ಇದರಲ್ಲಿ ಇನ್ನಷ್ಟು ಪ್ರಯೋಗ ಮಾಡುವ ಎಲ್ಲಾ ಆಲೋಚನೆಯೂ ಇದೆ. ನನ್ನ ಮುಂದಿನ ದಾರಿ ಇದೇ ಆಗಿದೆ.
ಸದ್ಯಕ್ಕೆ ಇಷ್ಟು ಮುಂದೆ ಗೊತ್ತಿಲ್ಲ. . . ಕೆಲಸ ಮಾಡುತ್ತಿದ್ದೇನೆ ಅಷ್ಟೇ.
www.beteltea.com
– ಸಂದೀಪ್ ಈಶಾನ್ಯ



