ಬೆಂಗಳೂರು: ಗುಜರಾತ್ ನ ಅಮೂಲ್ ಜೊತೆ ಕರ್ನಾಟಕದ ಕೆಎಂಎಫ್ ಅನ್ನು ವಿಲೀನಗೊಳಿಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಲಹೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಅಮುಲ್ ನೇರವಾಗಿ ಹಾಲು ಮತ್ತು ಮೊಸರು ಮಾರಾಟಕ್ಕೆ ರಾಜ್ಯದಲ್ಲಿ ಯೋಜನೆಯ ರೂಪಿಸಿದೆ. ಇದಕ್ಕೆ ಇದೀಗ ಕರ್ನಾಟಕದ ಹಾಲು ಉತ್ಪಾದಕರು ಮತ್ತು ಕೆಎಂಎಫ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯದ ಹಾಲು ಮಾರುಕಟ್ಟೆಯಲ್ಲಿ ಕೆಎಂಎಫ್ ಸಂಪೂರ್ಣ ಸಾರ್ವಭೌಮತೆ ಸಾಧಿಸಿದೆ. ಈ ಕೋಟೆಯನ್ನು ಭೇದಿಸಬೇಕೆಂದು ಅಮೂಲ್ ಕಾರ್ಯತಂತ್ರ ರೂಪಿಸಿದೆ.
ಕರ್ನಾಟಕದ ಬದಲಿಗೆ ನೆರೆಯ ತೆಲಂಗಾಣ ಮತ್ತು ಆಂಧ್ರದ ರೈತರಿಂದ ಹಾಲು ಖರೀದಿ ಮಾಡಿ ಅದನ್ನು ಕರ್ನಾಟಕ ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಅಮೂಲ್ ಮುಂದಾಗಿದೆ. ಇದಕ್ಕೆ ಅದು ನೀಡುತ್ತಿರುವ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಉತ್ತರ ಭಾರತದ ಅದರಲ್ಲೂ ಗುಜರಾತ್ ನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಅಮೂಲ್ ಅತ್ಯಂತ ಪ್ರೀತಿ ಪಾತ್ರವಾದ ಬ್ರಾಂಡ್ ಆಗಿದೆ. ಇವರನ್ನು ಅಮೂಲ್ ಹಾಲನ್ನು ಖರೀದಿಸಬೇಕೆಂದು ಬಯಸುತ್ತಿದ್ದಾರೆ. ಅವರ ಬಯಕೆಗೆ ಅನುಗುಣವಾಗಿ ಅಮೂಲ್ ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರನ್ನು ಮಾರಾಟ ಮಾಡಲಿದೆ ಎಂದು ಹೇಳಿದೆ. ಆನ್ಲೈನ್ ಮೂಲಕ ಗ್ರಾಹಕರಿಗೆ ಹಾಲು ಮತ್ತು ಮೊಸರನ್ನು ತಲುಪಿಸಲಾಗುವುದು ಎಂದು ಅಮೂಲ್ ತಿಳಿಸಿದೆ.
ಅಮೂಲ್ ನ ಈ ಪ್ರಸ್ತಾಪ ರಾಜ್ಯದ ಹಾಲು ಉತ್ಪಾದಕರನ್ನು ಕೆರಳುವಂತೆ ಮಾಡಿದೆ. ಕೇಂದ್ರ ಸರ್ಕಾರ ಅಮೂಲ್ ನ ಮೂಲಕ ಕರ್ನಾಟಕದ ಹೆಮ್ಮೆಯ ಕೆಎಂಎಫ್ ಅನ್ನು ಮುಗಿಸಲು ಹೊರಟಿದೆ. ಯಾವುದೇ ಕಾರಣಕ್ಕೂ ಕರ್ನಾಟಕದ ಜನತೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರೆ, ಹಾಲು ಮತ್ತು ಮೊಸರಿನ ಬೆಲೆ ಕೆಎಂಎಫ್ ಗೆ ಹೋಲಿಕೆ ಮಾಡಿದರೆ ಅತ್ಯಂತ ದುಬಾರಿಯಾಗಿದೆ. ಹೀಗಾಗಿ ಇದನ್ನು ಯಾರು ಖರೀದಿಸುವುದಿಲ್ಲ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ಹಲವು ಸಂಸ್ಥೆಗಳ ಹಾಲು ಮತ್ತು ಮೊಸರು ಮಾರಾಟ ಮಾಡಲಾಗುತ್ತಿದೆ. ಆದರೆ ರಾಜ್ಯದ ಜನತೆ ಇವುಗಳನ್ನು ಖರೀದಿಸುತ್ತಿಲ್ಲ. ಇದೇ ಉತ್ತರ ಅಮೂಲ್ ಉತ್ಪನ್ನಗಳಿಗೂ ಸಿಗಲಿದೆ. ಹೀಗಾಗಿ ಯಾರು ಆತಂಕ ಪಡುವುದು ಬೇಕಿಲ್ಲ ಎಂದು ಕೆಎಂಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ನಡುವೆ ಅಮೂಲ್ ಹಾಲು ಮಾರಾಟದ ಪ್ರಸ್ತಾಪ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿಯ ವಿರುದ್ಧ ಪ್ರಹಾರ ನಡೆಸಿದ್ದಾರೆ.
ರಾಜ್ಯ ಬಿಜೆಪಿಯ ದುರ್ಬಲ ನಾಯಕತ್ವದಿಂದಾಗಿ ನಾಡಿನ ಲಕ್ಷಾಂತರ ಹೈನುಗಾರಿಕೆ ಕುಟುಂಬಗಳ ಜೀವನಾಧಾರವಾಗಿರುವ ಕೆಎಂಎಫ್ ಅನ್ನು ಬಲಿಪಡೆಯುವ ಎಲ್ಲಾ ರೀತಿಯ ಪ್ರಯತ್ನಗಳು ಆರಂಭವಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನೇರ ಕಾರಣ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಇದೀಗ ಕೆಎಂಎಫ್ ಅನ್ನು ಮುಗಿಸಲು ಹೊರಟಿದ್ದಾರೆ ಎಂದು ಆಪಾದಿಸಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ. ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ.



