ಮಾರ್ಚ್ 9ರಿಂದ ಏಪ್ರಿಲ್ 15ರವರೆಗೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ: ಬಿ.ಸಿ.ನಾಗೇಶ್

4 years ago

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಮುಖ್ಯ ಘಟ್ಟವಾದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳು ಮಾರ್ಚ್ 9ರಿಂದ ಏಪ್ರಿಲ್ 15ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಪರೀಕ್ಷೆಗೆ ಸಂಬಂಧಿಸಿದಂತೆ ಗೃಹ ಸಚಿವರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. ಸಿಸಿ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆಯ ಅವಧಿಯಲ್ಲಿ ಬಂದ್ ಮಾಡಲಾಗುತ್ತದೆ. ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ ಎಂದು ಹೇಳಿದರು.

ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಮೊಬೈಲ್ಫೋನ್, ಸ್ಮಾರ್ಟ್ವಾಚ್, ಇಯರ್ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗುತ್ತದೆ. ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಗೋಡೆ ಗಡಿಯಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ಕಾರ್ಯ ಮತ್ತು ಪರೀಕ್ಷಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾತ್ರ ಕ್ಯಾಮೆರಾ ಸೌಲಭ್ಯ ಇಲ್ಲದ ಬೆಸಿಕ್ ಮೊಬೈಲ್ಫೋನ್ ಬಳಕೆಗೆ ಅನುಮತಿ ಇರುತ್ತದೆ ಎಂದರು.

Leave a Reply