ವರುಣಾ ಕ್ಷೇತ್ರವನ್ನು ನಿನ್ನೆ ಮೂರನೇ ಬಾರಿ ಸುತ್ತಿದೆ.
ನನ್ನನ್ನು ಬಲ್ಲವರಿಗೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಬೇರೆ ರಾಜ್ಯಗಳಲ್ಲಿಯೂ ನಾನು ಚುನಾವಣಾ ಸಂದರ್ಭಗಳಲ್ಲಿ ಸುತ್ತಾಡಿ ವರದಿ ಮಾಡಿದ್ದೇನೆ.
ಈ ಅನುಭವದ ಆಧಾರದಲ್ಲಿ ಹೇಳುವುದಾದರೆ ಇದೊಂದು ಅಪರೂಪದ ಕ್ಷೇತ್ರ.
ವರುಣಾ ಕ್ಷೇತ್ರದ ಯಾವುದೇ ಮೂಲೆಗೆ ಹೋಗಿ, ಯಾರ ಜೊತೆಯಲ್ಲಿಯಾದರೂ ಮಾತನಾಡಿದರೂ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಹತ್ತರಲ್ಲಿ ಒಬ್ಬರೋ ಇಬ್ಬರೋ ಹೊರತುಪಡಿಸಿ ಉಳಿದ 8-9 ಮಂದಿಯಲ್ಲಿ ಸಣ್ಣ ಅಸಮಾಧಾನ-ದೂರುಗಳಿಲ್ಲ.
ವಿಚಿತ್ರವೆಂದರೆ ಬಿಜೆಪಿಯನ್ನು ಬೆಂಬಲಿಸುವ ಜನ ಕೂಡಾ ಸಿದ್ದರಾಮಯ್ಯ ಇಲ್ಲವೇ ಯತೀಂದ್ರರನ್ನು ದೂರುವುದಿಲ್ಲ. ‘ಬದಲಾವಣೆ ಬೇಕು ಸಾರ್’ ಎಂದೋ ‘ನಮ್ಮವರೂ ಒಬ್ಬರಿಗೆ ಅವಕಾಶ ಸಿಗಲಿ’ ಎಂದೋ ಹೇಳುತ್ತಾರೆ ವಿನಃ ಅಭಿವೃದ್ದಿ ಆಗಿಲ್ಲ, ಹಾಲಿ ಶಾಸಕರು ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳುವುದಿಲ್ಲ.
ಇದು ನನ್ನ ಅನುಭವ ಮಾತ್ರವಲ್ಲ, ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿರುವ ದೆಹಲಿಯಿಂದ ಬಂದ ಬಹಳಷ್ಟು ಪತ್ರಕರ್ತರು ಕೂಡಾ ನನ್ನೊಡನೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಚುನಾವಣೆಗಾಗಿ ಓಡಾಡಿದ ಅವರಿಗೆಲ್ಲ ಇದೊಂದು ಭಿನ್ನ ಅನುಭವ.
ನಿಜ ಹೇಳಬೇಕೆಂದರೆ ವೈಯಕ್ತಿಕವಾಗಿ ನನಗೂ ವರುಣಾ ಬಗ್ಗೆ ಇಷ್ಟೆಲ್ಲ ಗೊತ್ತಿರಲಿಲ್ಲ.
ಶಾಸಕರ ಸಾಧನೆ ಮತ್ತು ಕ್ಷೇತ್ರದ ಅಭಿವೃದ್ದಿಯನ್ನಷ್ಟೇ ಮಾನದಂಡವನ್ನಾಗಿ ಇಟ್ಟುಕೊಂಡು ಮತದಾರರು ಚಲಾಯಿಸಿದರೆ ಶೇಕಡಾ ೯೦ರಷ್ಟು ಮತಗಳು ಸಿದ್ದರಾಮಯ್ಯನವರಿಗೆ ಬೀಳಲೇಬೇಕು.
ಆದರೆ ಹಾಗಾಗುವುದಿಲ್ಲ. ಯಾಕೆಂದು ಗೊತ್ತಲ್ಲ?
ಬಿಡಿಸಿ ಹೇಳುವ ಅಗತ್ಯ ಇದೆಯೇ?
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು




