ಬೆಂಗಳೂರು: ಪ್ರಾಥಮಿಕ 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಇಂದು ನಡೆದ ಪರೀಕ್ಷೆಗೆ ದಾರಿ ಸುಗಮವಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರಿದ್ದ ಪೀಠ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ಕಲಿಕಾ ಚೇತರಿಕೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಅನ್ವಯ ಆಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಇದರನ್ವಯ ಪ್ರಶ್ನೆಗಳನ್ನು ಉತ್ತರಿಸಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.
ಆದರೆ, ಇದನ್ನು ಪರಿಗಣಿಸದ ನ್ಯಾಯಾಲಯ ಪರೀಕ್ಷೆ ಇಂದು ನಡೆಯುತ್ತಿರುವ ಕಾರಣ, ಈ ಹಂತದಲ್ಲಿ ಮಧ್ಯ ಪ್ರವೇಶ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಪರೀಕ್ಷೆ ಸುಗಮ: ಈ ನಡುವೆ ಇಂದಿನಿಂದ ಆರಂಭಗೊಂಡ ಪರೀಕ್ಷೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಬರೆದರು. ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದು, ಎಲ್ಲ ಶಾಲೆಗಳಿಗೂ ರವಾನಿಸಿತು ಎಲ್ಲ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಡೆದವು.
ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೋರ್ಡ್ ಪರೀಕ್ಷೆ ನಡೆಸುತ್ತಿದೆ. ಆಯಾ ಶಾಲೆಗಳೇ ಪರೀಕ್ಷಾ ಕೇಂದ್ರಗಳಾಗಿದ್ದು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದಾರೆ. ಪ್ರತಿ ವಿಷಯದ ಪರೀಕ್ಷೆ 40 ಅಂಕಗಳಿಗೆ ಇರಲಿದೆ. ಐದನೇ ತರಗತಿ ಮಕ್ಕಳಿಗೆ ಇಂದಿನಿಂದ ಮಾರ್ಚ್ 30ರ ವರೆಗೆ ಪರೀಕ್ಷೆಯಾದರೆ, 8ನೇ ತರಗತಿ ಮಕ್ಕಳಿಗೆ ಇಂದಿನಿಂದ ಏಪ್ರಿಲ್ 1ರವರೆಗೆ ಪರೀಕ್ಷೆ ನಡೆಯಲಿದೆ.
5, 8 ನೇ ತರಗತಿಗೆ ಇಂದಿನಿಂದ ಏಪ್ರಿಲ್ 1 ರವರೆಗೆ ಮೌಲ್ಯಾಂಕನ ನಡೆಯಲಿದ್ದು 5 ಮತ್ತು 8 ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. 5 ಮತ್ತು 8 ನೇ ತರಗತಿಯ ಮೌಲ್ಯಾಂಕನನ್ನು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿದೆ. ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ.
ಈ ಮೌಲ್ಯಾಂಕನದ ಫಲಿತಾಂಶವನ್ನು ಸಂಬಂಧಿಸಿದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಈ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು. ಪಠ್ಯ ಪುಸ್ತಕವನ್ನಾಧರಿಸಿ ಮೌಲ್ಯಾಂಕನಕ್ಕೆ ಪ್ರಶ್ನೆ ಸಿದ್ಧಪಡಿಸಲಾಗಿದೆ.



