ಸಭಾಧ್ಯಕ್ಷರ ಕುರ್ಚಿಗೆ ಬರೋಬ್ಬರಿ 45 ಲಕ್ಷ ರೂಪಾಯಿ

2 years ago

ಬೆಳಗಾವಿ: ಇದು ಅಂತಿಂಥ ಕುರ್ಚಿಯಲ್ಲ. ಬರೋಬ್ಬರಿ 45 ಲಕ್ಷ ರೂಪಾಯಿ. ಹಾಗಾದರೆ ಇದೇನು ಬೆಳ್ಳಿ ಅಥವಾ ಚಿನ್ನದ ಕುರ್ಚಿಯೇ‌ ಎಂದು ಕೇಳಬೇಡಿ. ಇದು ರೋಸ್ ವುಡ್ ನಲ್ಲಿ ತಯಾರಿಸಿರುವ ಕುರ್ಚಿ.

ಬೆಳಗಾವಿ ಸುವರ್ಣ ವಿಧಾನಸೌಧದ ಸೌಧ ವಿಧಾನಸಭೆ ಸಭಾಂಗಣದಲ್ಲಿ ಸಭಾಧ್ಯಕ್ಷರಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿ ಅಳವಡಿಸಲಾಗಿರುವ ಈ ಕುರ್ಚಿಯ ಮೌಲ್ಯ 45 ಲಕ್ಷ ರೂಪಾಯಿ.

ಇಂತಹ ದುಬಾರಿ ಮೌಲ್ಯ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಾದ ಸಭಾಧ್ಯಕ್ಷರಿಗಾಗಿ ಇದನ್ನು ತಯಾರಿಸಲಾಗಿದೆ. ಈ ಪೀಠದಲ್ಲಿ ಸ್ವೀಕರ್ ಯು.ಟಿ.ಖಾದರ್ ಅವರು ಕುಳಿತು ಕಲಾಪ ನಡೆಸಿದರು.

ಬೆಂಗಳೂರು ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಸುವರ್ಣಸೌಧದಲ್ಲಿ ಸಭಾಧ್ಯಕ್ಷರ ಪೀಠವನ್ನು ಸಿದ್ಧಪಡಿಸಲಾಗಿದೆ. ಪೀಠವನ್ನು ರೋಸ್ ವುಡ್ನಲ್ಲಿ ಮಾಡಲಾಗಿದೆ. ಈ ವಿಲಾಸಿ ಪೀಠಕ್ಕೆ ಸುಮಾರು 45 ಲಕ್ಷ ರೂ‌. ವೆಚ್ಚವಾಗಿದೆ‌. ಈ ಮುಂಚೆ ಸಾಮಾನ್ಯ ಮರದಿಂದ ಸರಳವಾಗಿ ಪೀಠವನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಇದೀಗ ಬದಲಾಯಿಸಿ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಧ್ಯಕ್ಷರ ಕುರ್ಚಿಯ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ

ಪೀಠದಲ್ಲಿ ಗಂಡ ಬೇರುಂಡ, ಉಳುವ ರೈತ, ಚರಕ ಸೇರಿ ವಿವಿಧ ಕುಸುರಿ ಕಲಾಕೃತಿಗಳೊಂದಿಗೆ ಈ ಕುರ್ಚಿ ಗಮನಸೆಳೆಯುತ್ತದೆ. ಈ ಬಗ್ಗೆ ಸದನದಲ್ಲಿ ವಿವರಣೆ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಸೌಧವನ್ನು ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರು ಸಭಾಧ್ಯಕ್ಷ ಪೀಠದ ಬಗ್ಗೆ ಒಂದು ಮಹೋನ್ನತ ಪರಿಕಲ್ಪನೆ ಹೊಂದಿದ್ದರು. ಈ ಪೀಠವನ್ನು ವಿಶಿಷ್ಟವಾಗಿ ರೂಪಿಸಬೇಕೆಂದು ಅವರು ಯೋಜಿಸಿದ್ದರು ಎಂದರು.

ಅದರಂತೆ ಅವರು ನಮ್ಮ ಇತಿಹಾಸದಲ್ಲಿ ರಾಜ್ಯವನ್ನು ಬಹಳ ಕಾಲ ಉತ್ತಮವಾಗಿ ಆಡಳಿತ ನಡೆಸಿದ ರಾಷ್ಟ್ರಕೂಟರು ಹಾಗೂ ಹೊಯ್ಸಳರು ಹೊಂದಿದ್ದ ರಾಷ್ಟ್ರ ಲಾಂಛನಗಳನ್ನು ಅದರಲ್ಲಿ ಅಳವಡಿಸಿಕೊಳ್ಳಬೇಕೆಂಬ ಚಿಂತನೆ ನಡೆಸಿದ್ದರು. ಈ ಉದ್ದೇಶಕ್ಕಾಗಿಯೇ ಶಿವಮೊಗ್ಗದಲ್ಲಿ ಲಭ್ಯವಿದ್ದ ಉತ್ತಮ ಗುಣಮಟ್ಟದ ಬೀಟೆ ಮರ ಆಯ್ಕೆ ಮಾಡಿ, ಅಲ್ಲಿನ ಗುಡಿಗಾರರಿಗೆ ತಮ್ಮ ಕನಸಿನ ಚಿಂತನೆಗಳನ್ನು ವಿವರಿಸಿ ಅದೇ ರೀತಿಯಲ್ಲಿಯೇ ಪೀಠ ಮೂಡಿಬರುವಂತೆ ಮುತುವರ್ಜಿ ವಹಿಸಿದ್ದರು ಎಂದರು.

ರಾಷ್ಟ್ರಕೂಟರು ಹೊಂದಿದ್ದ ಗಂಡಭೇರುಂಡ ಚಿಹ್ನೆಯನ್ನು ಪೀಠದಲ್ಲಿ ಅಳವಡಿಸಿದ್ದರು. ಗಂಡಭೇರುಂಡ ಚಿಹ್ನೆಯನ್ನು ರಾಷ್ಟ್ರಕೂಟರು ತಮ್ಮ ಅಧಿಕಾರ ಹಾಗೂ ಶಕ್ತಿ ಸಾಮರ್ಥ್ಯದ ಪ್ರತೀಕವಾಗಿ ಹಾಗೂ ದೈವಿಕ ರಕ್ಷಣೆ ಹೊಂದಿರುವ ಪ್ರತೀಕವಾಗಿ ಉಪಯೋಗಿಸಿದ್ದರು. ಅದೇ ಲಾಂಛನವನ್ನು ಈ ಪೀಠದಲ್ಲಿ ಅದರ ಪ್ರತಿರೂಪವಾಗಿ ಕೆತ್ತಲಾಗಿದೆ ಎಂದರು.

ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದ ಹಾಗೂ ಬಹುಕಾಲ ಉತ್ತಮವಾಗಿ ಆಳಿದ ಹೊಯ್ಸಳರು ಸಹ ಶರಭ ಅಂದರೆ ಸಿಂಹದ ಲಾಂಛನ ಹೊಂದಿದ್ದರು. ಸಿಂಹವು ಶೌರ್ಯದ ಪ್ರತೀಕವಾಗಿದ್ದು, ಅದನ್ನೂ ಸಹ ಪೀಠದ ಎರಡೂ ಬದಿಗಳಲ್ಲಿ ಕೆತ್ತಲಾಗಿದೆ. ಅದೇ ರೀತಿ ಪೀಠದ ಮೇಲ್ಭಾಗದಲ್ಲಿ ಸೂರ್ಯಕಾಂತಿ ಹೂವಿನ ಚಿತ್ತಾರವನ್ನು ಕೆತ್ತಲಾಗಿದ್ದು, ಇದು ಸಭಾಧ್ಯಕ್ಷರಿಗೆ ಒಂದು ರೀತಿಯ ಮೇಲ್ಛಾವಣಿಯಂತೆ ರೂಪಿಸಲಾಗಿದೆ. ಪೀಠದ ಮುಂಭಾಗದ ಮೇಲೆ ಸೂರ್ಯ ಮತ್ತು ಚಂದ್ರರ ಚಿಹ್ನೆಗಳನ್ನು ಕೆತ್ತಲಾಗಿದ್ದು, ಸೂರ್ಯ ಮತ್ತು ಚಂದ್ರರ ಚಿಹ್ನೆಯ ಅಮರತ್ವವನ್ನು ಪ್ರತಿರೂಪಿಸುವಂತಹ ಚಿಹ್ನೆಯನ್ನು ಕೆತ್ತಲಾಗಿದೆ. ಪೀಠದ ಮೇಲ್ಭಾಗದ ಎರಡೂ ಬದಿಗಳಲ್ಲಿ ಮಾವಿನ ಕಾಯಿ ರೂಪವನ್ನು ಕೆತ್ತಲಾಗಿದೆ. ನಮ್ಮ ದೇಶದಲ್ಲಿ ಮಾವಿನ ಕಾಯಿಗೆ ವೈಜ್ಞಾನಿಕ ಹಾಗೂ ಧಾರ್ಮಿಕವಾಗಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮಾವಿನ ಕಾಯಿ ಬೆಳವಣಿಗೆಯ ದ್ಯೋತಕವಾಗಿದ್ದು, ಈ ಹಿನ್ನೆಲೆಯಲ್ಲಿ ಮಾವಿನ ಕಾಯಿ ಪ್ರತಿರೂಪವನ್ನು ಕೆತ್ತಲಾಗಿದೆ ಎಂದು ಮಾಹಿತಿ ನೀಡಿದರು.

ಹೀಗೆ ನಮ್ಮ ದೇಶದ ಇತಿಹಾಸ ಹಾಗೂ ಧಾರ್ಮಿಕತೆಯ ಚಿಹ್ನೆಗಳ ಮಿಶ್ರಣ ರೂಪದಲ್ಲಿರುವ ಈ ಕೆತ್ತನೆಗಳನ್ನು ಬೀಟೆ ಮರದಲ್ಲಿ ಬೆಂಗಳೂರಿನ ವಿಧಾನಸೌಧದ ಪೀಠವನ್ನು ತಯಾರಿಸಿ ಅಳವಡಿಸಲಾಗಿದೆ. ಇದೇ ಉದ್ದೇಶದಿಂದ ಬೆಳಗಾವಿಯಲ್ಲಿಯ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ನೂತನವಾಗಿ ಅಳವಡಿಸಲಾಗಿದೆ ಎಂದರು.

Leave a Reply