ದೆಹಲಿ: ದೇಶದ ವಿವಿಧ ಬ್ಯಾಂಕುಗಳಿಗೆ ಸು. 9000 ಕೋಟಿ ರೂ. ನೀಡದೆ ದೇಶ ತೊರೆದು ಮಾರ್ಚ್ 2016ರಿಂದ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ 4 ತಿಂಗಳ ಸೆರೆವಾಸ ಮತ್ತು 2,000 ದಂಡ ವಿಧಿಸಿದೆ.
2017ರಲ್ಲಿ ಕೋರ್ಟ್ ತೀರ್ಪನ್ನು ಉಲ್ಲಂಘಿಸಿ, 40 ಮಿಲಿಯನ್ ಡಾಲರ್ ಮೊತ್ತವನ್ನು ತಮ್ಮ ಮಕ್ಕಳಿಗೆ ಅವರು ವರ್ಗಾಯಿಸಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದಡಿಯಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, ದಂಡ ಪಾವತಿಸಲು 4 ವಾರಗಳ ಕಾಲಾವಕಾಶವನ್ನು ನೀಡಲಾಗಿದೆ. ವಿಳಂಬವಾದಲ್ಲಿ 2 ತಿಂಗಳ ಸೆರೆವಾಸವನ್ನು ಹೆಚ್ಚುವರಿಯಾಗಿ ವಿಧಿಸುವಂತೆ ತೀರ್ಪು ನೀಡಲಾಗಿದೆ. ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ.ಯು.ಯು.ಲಲಿತ್, ನ್ಯಾ.ಎಸ್.ರವೀಂದ್ರ ಭಟ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರನ್ನೊಳಗೊಂಡ ವಿಭಾಗೀಯ ಪೀಠ, ವಿಜಯ್ ಮಲ್ಯ ಮಕ್ಕಳಿಗೆ ಹಣ ವರ್ಗಾಯಿಸಿರುವ ಕ್ರಿಯೆ ಅನೂರ್ಜಿತ ಎಂದು ಅಭಿಪ್ರಾಯಪಟ್ಟಿದ್ದು, ಹಣ ಸ್ವೀಕರಿಸಿದವರು ಶೇ.8ರಷ್ಟು ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿದೆ. ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ಮಲ್ಯ ಒಡೆತನದ ಆಸ್ತಿಗಳನ್ನು ಮುಟ್ಟುಗೋಲು ಹಾಕೊಳ್ಳುವಂತೆ ಆದೇಶಿಸಿದೆ.
ಎಸ್.ಬಿ.ಐ ನೇತೃತ್ವದ ಬ್ಯಾಂಕ್ ಒಕ್ಕೂಟ ವಿಜಯ್ ಮಲ್ಯ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಗೌಪ್ಯವಾಗಿ ನಡೆಸಲಾಗಿದೆ. ತಮ್ಮ ಮಗ ಸಿದ್ದಾರ್ಥ ಮಲ್ಯ, ಹೆಣ್ಣು ಮಕ್ಕಳಾದ ಲೀನಾ ಮಲ್ಯ, ತಾನ್ಯಾ ಮಲ್ಯ ಅವರಿಗೆ ಹಣ ವರ್ಗಾವಣೆ ಮಾಡಿರುವುದು ಸ್ಪಷ್ಟವಾದ ಕಾನೂನು ಉಲ್ಲಂಘನೆ ಎಂದು ಒಕ್ಕೂಟ ಹೇಳಿತು.



