ಬೆಂಗಳೂರು: ರಾಜ್ಯದಲ್ಲಿ ಸುಸ್ಥಿರ ಮೂಲಸೌಕರ್ಯಗಳನ್ನು ಒಳಗೊಂಡು ಉದ್ಯೋಗಾವಕಾಶಗಳನ್ನು ಸೃಜಿಸುವ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸಿ ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದರು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದರು.
ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ, ಕೆ.ಜಿ.ಎಫ್, ತುಮಕೂರಿನ ವಸಂತನರಸಾಪುರ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರದ ಹೊರವಲಯದಲ್ಲಿರುವ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್ಶಿಪ್ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು 4,615 ಕೋಟಿ ರೂ. ಗಳಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕಾಗಿ ನಾವು 320 ಕೋಟಿ ರೂ. ಅನುದಾನ ಒದಗಿಸಿದ್ದು, ಈ ವರ್ಷ 200 ಕೋಟಿ ರೂ. ಒದಗಿಸಿ, 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದೇವೆ ಎಂದರು.
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ದ್ರವ ಹಾಗೂ ಘನ ತ್ಯಾಜ್ಯ ಸಂಸ್ಕರಣೆಗೆ ಕೇಂದ್ರ ಸರ್ಕಾರದ ಪಾಲು 2,185 ಕೋಟಿ ರೂ.ಗಳನ್ನು ಒಳಗೊಂಡಂತೆ 5,072 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಜಲ ಮೂಲಗಳನ್ನು ಮಲಿನಗೊಳಿಸುವ ದ್ರವ ತ್ಯಾಜ್ಯಗಳ ಸಂಸ್ಕರಣೆ, ಲೆಗೆಸಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡುವ ಮೂಲಕ ನಗರಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಲು ಒತ್ತು ನೀಡಲಾಗುವುದು ಎಂದರು.
ಸ್ಥಳೀಯ ಸಂಸ್ಥೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಸಹಭಾಗಿತ್ವದ ಯೋಜನೆಯಾದ ಅಮೃತ್ 2.0 ಅಡಿಯಲ್ಲಿ, 539 ಕೋಟಿ ರೂ. ಮೊತ್ತದಲ್ಲಿ ಕೆರೆ ಹಾಗೂ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗುವುದು ಎಂದರು.
ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು, ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದರು.




