ಅಬಕಾರಿ ಸೇರಿ 1,96,525 ಕೋಟಿ ರೂ. ಆದಾಯ ನಿರೀಕ್ಷೆ

2 years ago

ಬೆಂಗಳೂರು: ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಅಬಕಾರಿ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಸೇರಿ ಸಂಪನ್ಮೂಲ ಸಂಗ್ರಹ ಇಲಾಖೆಗಳಿಂದ ಒಟ್ಟು 1,96,525 ಕೋಟಿ ರೂ.ಗಳ ಆದಾಯ ನಿರೀಕ್ಷಿಸಿದ್ದಾರೆ.

ಮದ್ಯದ ಘೋಷಿತ ಸ್ಲ್ಯಾಬ್ ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆರಾಜ್ಯದ ಮದ್ಯದ ಬೆಳವಣಿಗೆಗನುಗುಣವಾಗಿ ದೇಶೀಯವಾಗಿ ತಯಾರಾಗುವ ಮದ್ಯ (ಐಎಂಎಲ್) ಮತ್ತು ಬಿಯರ್ಸ್ ಸ್ಲ್ಯಾಬ್ಗಳನ್ನು ಪರಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ನೆರೆರಾಜ್ಯಗಳಲ್ಲಿ ಕೆಲವು ಮದ್ಯ ಮಾರಾಟ ದರ ರಾಜ್ಯಕ್ಕಿಂತಲೂ ದುಬಾರಿಯಾಗಿದೆ. ಪರಿಷ್ಕರಣೆಗೊಂಡರೆ ಸಹಜವಾಗಿಯೇ ಮತ್ತೊಮ್ಮೆ ಏರಿಕೆಯಾಗಲಿದೆ.

ಪ್ರಸಕ್ತ ವರ್ಷ ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನಗಳ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಈ ಬಜೆಟ್ನಲ್ಲಿ ಅಬಕಾರಿ ಹೊರತುಪಡಿಸಿ ಬೇರೆ ತೆರಿಗೆ ಹೊರೆ ಕಂಡುಬಂದಿಲ್ಲ. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ತಿಳಿಸಿದ್ದು, ಇಲಾಖೆ ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸುವುದು, ಸ್ವಯಂಚಾಲಿತ ಅನುಮೋದನೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.

2024 ರ ಜನವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯಿಂದ 28,181 ಕೋಟಿ ರೂ.ಗಳು ಆದಾಯ ಸಂಗ್ರಹವಾಗಿದ್ದು, ಮುಂದಿನ ವರ್ಷ 38,225 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ಆದಾಯದ ಪ್ರಮುಖ ಮೂಲವಾಗಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ 2024-25 ನೇ ಸಾಲಿಗೆ 1.10 ಲಕ್ಷ ಕೋಟಿ ರೂ.ಗಳ ಸಂಗ್ರಹದ ಗುರಿ ನಿಗದಿ ಮಾಡಲಾಗಿದೆ. ಜನವರಿ ಅಂತ್ಯದವರೆಗೂ 58,180 ಕೋಟಿ ರೂ.ಗಳ ಎಸ್ಜಿಎಸ್ಟಿ ಸ್ವೀಕೃತವಾಗಿದ್ದು, ಕಳೆದ ವರ್ಷಕ್ಕಿಂತಲೂ ಶೇ.14ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ವರ್ಷ ಜಿಎಸ್ಟಿ ಮೇಲ್ಮನವಿ ನ್ಯಾಯ ಮಂಡಳಿಯ 2 ರಾಜ್ಯಪೀಠಗಳನ್ನು ರಚಿಸಿ ಕಾರ್ಯಗತಗೊಳಿಸುವ ಮೂಲಕ ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಆದ್ಯತೆ ನೀಡಲಾಗಿದೆ.

ಗ್ರಾಹಕ ಸಂವೇದಿ ಜಿಎಸ್ಟಿ ಡೇಟಾ ಬೇಸ್ ಮ್ಯಾನೇಜ್ಮೆಂಟ್ ಮತ್ತು ಕೃತಕ ಬುದ್ದಿಮತ್ತೆ ಚಾಲಿತ ವಿಶ್ಲೇಷಣಾತ್ಮಕ ವ್ಯವಸ್ಥೆ ಅಭಿವೃದ್ಧಿಪಡಿಸಿ ನಿಖರ ಮಾಹಿತಿ ಮುನ್ಸೂಚಕ ವಿಶ್ಲೇಷಣೆ ಮೂಲಕ ರಾಜಸ್ವ ಕೃಢೀಕರಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಪರಿಣಿತಿ ಹೆಚ್ಚಿಸಲು ಇ ತರಬೇತಿ ನೀಡಿ ಮೋಸದ ನೋಂದಣಿಗಳನ್ನು ಪತ್ತೆ ಹಚ್ಚುವುದು ಹಾಗೂ ರಾಜಸ್ವ ಸೃಜನೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಒತ್ತು ನೀಡುವುದಾಗಿ ಘೋಷಿಸಿದ್ದಾರೆ.

ಕಂದಾಯ ಇಲಾಖೆ ಅಧೀನದ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 26 ಸಾವಿರ ಕೋಟಿ ರೂ.ಗಳ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಜನವರಿ ಅಂತ್ಯದವರೆಗೆ 15,692 ಕೋಟಿ ರೂ. ರಾಜಸ್ವ ಸಂಗ್ರಹಣೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಬೆಳವಣಿಗೆಯಾಗಿದೆ.

2023-24 ನೇ ಸಾಲಿನಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಜನವರಿ ಅಂತ್ಯದವರೆಗೆ 9,333 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಹಿಂದಿನ ಸಾಲಿಗಿಂತಲೂ ಶೇ.19 ರಷ್ಟು ಬೆಳವಣಿಗೆಯಾಗಿದೆ. ಮುಂದಿನ ವರ್ಷಕ್ಕೆ 13 ಸಾವಿರ ಕೋಟಿ ರೂ.ಗಳ ಆದಾಯದ ಗುರಿ ನಿಗದಿ ಮಾಡಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಶೇ.22 ರಷ್ಟು ಆದಾಯ ಹೆಚ್ಚಳವಾಗಿದೆ. ಜನವರಿ ಅಂತ್ಯಕ್ಕೆ 5,658 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 9 ಸಾವಿರ ಕೋಟಿ ರೂ.ಗಳನ್ನು ನಿಗದಿಗೊಳಿಸಿದ್ದಾರೆ.

Leave a Reply