ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದತ್ತ ಎಳೆಯರ ಚಿತ್ತ
ಹಾಸನ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ನೇತೃತ್ವದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಸ್ಮರಣಾರ್ಥ ಪ್ರತಿ ವರ್ಷ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ೧೫, ೧೬ ರಂದು ಏರ್ಪಡಿಸಲಾಗುತ್ತಿದೆ.

ಹದಿನೇಳು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅವರ ಪರಿಶ್ರಮದಲ್ಲಿ ಮಕ್ಕಳ ಸಮ್ಮೇಳನ ಆರಂಭವಾಯಿತು.
ಮುಂದೆ ನಿರಂತರವಾಗಿ ನಡೆಯುತ್ತಬಂದಿದೆ. ಶಿವಮೊಗ್ಗ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಸಮ್ಮೇಳನ ಶಾಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟಕ್ಕೆ ವಿಸ್ತಾರವಾಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮ್ಮೇಳನ ವ್ಯವಸ್ಥಿತವಾಗಿ ರೂಪಗೊಂಡಿತು.
ಕರೋನ ಸಂದರ್ಭದಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದ ಸಮ್ಮೇಳನಗಳು ಆನ್ ಲೈನ್ ಮೂಲಕ ನಡೆಸಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಶಿವಮೊಗ್ಗ ಇವರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.
ಜನವರಿ ೧೫ ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಶ್ರೀ ಆದಿಚುಂಚನಗಿರಿ, ನಾಗಮಂಗಲ ತಾಲ್ಲೂಕು ಇಲ್ಲಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ದಾವಣಗೆರೆ ಸರ್. ಎಂ. ವಿ. ಕಾಲೇಜು ವಿದ್ಯಾರ್ಥಿನಿ ನಿಶ್ಚತಾ ಎಂ. ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ನಿಶ್ಚಿತಾ ಎಂ. ಶೆಟ್ಟಿ ಅವರ ಮನೆಮಾತು ತಮಿಳು. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು. ದಾವಣಗೆರೆಯಲ್ಲಿ ದ್ವಿತೀಯ ಪಿ.ಯು. ಓದುತ್ತಿರುವ ಇವರು ಚಂದ್ರಮತಿ ಕಥಾ ಸಂಕಲನ ಪ್ರಕಟಿಸಿದ್ದಾರೆ. ಕವನ, ಪ್ರಬಂಧ, ಚಿತ್ರಕಲೆ, ನೃತ್ಯ ಸೇರಿದಂತೆ ಹಲವು ಪ್ರತಿಭೆಯನ್ನು ಹೊಂದಿರುವರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಿಸರಾಣಿ ಪ್ರೌಢಶಾಲಾ ೧೦ ನೆಯ ತರಗತಿ ವಿದ್ಯಾರ್ಥಿನಿ ಕು. ಮಾನ್ಯ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ೧೭ ನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕವಿ, ಕಥೆ, ಭಾಷಣಕಾರ್ತಿಯಾದ ವಿದ್ಯಾರ್ಥಿನಿ ಮಾನ್ವಿ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.
ಪ್ರಬಂಧ ಗೋಷ್ಠಿಯಲ್ಲಿ ಉಡುಪಿ ತಾ. ಗಂಗೊಳ್ಳಿಯ ಪವಿತ್ರ ಉಡುಪಿ ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ತುಮಕೂರು ಜೈನ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅಭಯ್ ಪಿ. ನಾಡಿಗ್ ಗೋಷ್ಠಿ ಉದ್ಘಾಟಿಸಲಿದ್ದಾರೆ.
ಕಥಾ ಗೋಷ್ಠಿ ಅಧ್ಯಕ್ಷತೆ ಯನ್ನು ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಕು. ಅಚಿಂತ್ಯ ವಹಿಸಲಿದ್ದಾರೆ. ದಿಗಂತಪ್ರಸಾದ್ ಉದ್ಘಾಟಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದ ಅಪೇಕ್ಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸನದ ಮಾವಿನಕೆರೆ ನವೋದಯ ವಿದ್ಯಾರ್ಥಿ ಚಿಂತನ ಎಚ್. ಟಿ. ಭಾಗವಹಿಸಲಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಯ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮಕ್ಕಳು ಈಗಾಗಲೇ ಹೆಸರು ನೋಂದಣಿ ಮಾಡಿದ್ದು ಅವರು ಜನವರಿ ೧೫ ರಂದು ಬೆಳಿಗ್ಗೆ ೯-೩೦ ಕ್ಕೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತಮ್ಮ ಹೆಸರು ದಾಖಲಿಸಲು ಕೋರುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯ್ಕೆಯಾದ ಮಕ್ಕಳು ಜನವರಿ ೧೪ ರಂದು ಮಧ್ಯಾಹ್ನ ೧೨ ಕ್ಕೆ ಶಿವಮೊಗ್ಗ ಶರಾವತಿ ನಗರ ಬಡಾವಣೆಯ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಿದ್ದಾರೆ. ಮಧ್ಯಾಹ್ನ ಊಟದ ನಂತರ ಮಂಡ್ಯಾ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಶ್ರೀ ಕ್ಷೇತ್ರಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.




