ಯಾರಿಗೂ ಹಣ ನೀಡದೇ ಸರ್ಕಾರಿ ಉದ್ಯೋಗ ಪಡೆಯಬಹುದು

1 year ago

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕೆಸೆಟ್ ತರಬೇತಿ ಕಾರ್ಯಾಗಾರ

ಬಳ್ಳಾರಿ: ಸತತ ಅಧ್ಯಯನದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಜ್ಞಾನ ಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣ ಗೌಡ ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಮಾರ್ಗದರ್ಶನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಯಾರಿಗೂ ಹಣ ನೀಡದೇ ಸರ್ಕಾರಿ ಉದ್ಯೋಗ ಪಡೆಯಬಹುದು. ಅದಕ್ಕೋಸ್ಕರ ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ಜ್ಞಾನವಿದ್ದರೆ ಏನನ್ನಾದರೂ ಸಾಧಿಸಬಹುದು. ತರಬೇತಿ ಪಡೆಯಲು ಆಗಮಿಸಿರುವ ವಿದ್ಯಾರ್ಥಿಗಳ ಬದುಕು ಸುಂದರವಾಗಲಿ ಎಂದು ಹಾರೈಸಿದರು.

ಪ್ರೊ.ಎನ್.ಎನ್.ಪ್ರಹ್ಲಾದ್ ಮಾತನಾಡಿ,  ವಿಶ್ವವಿದ್ಯಾಲಯದಲ್ಲಿ ಅಗಾಧ ಜ್ಞಾನ ಅಡಗಿದ್ದು, ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ಮುನಿರಾಜು ಮಾತನಾಡಿ, ಶ್ರೀಮಂತರು ಸಾಧನೆ ಮಾಡಲಾಗಿಲ್ಲ, ಹಲವು ಸಾಧಕರು ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪೋಷಕರ ಆಸೆ ಈಡೇರಿಸಬೇಕು ಎಂದು ಕರೆ ನೀಡಿದರು.

ಓದುವ ಛಲ ಇರಬೇಕು. ನಿಮ್ಮ ಕೆಲಸ ಮಾಡುತ್ತಾ ಮುನ್ನುಗ್ಗಿ ಆಗ ಯಶಸ್ಸು ಕಾಣಲು ಸಾಧ್ಯ. ಚೆನ್ನಾಗಿ ಓದಿ ಉದ್ಯೊಗ ಪಡೆಯಬೇಕು. ಮೂಲಸೌಕರ್ಯ ಬೇಕಾದಲ್ಲಿ ನೇರವಾಗಿ ಸಂಪರ್ಕಿಸಿದರೆ  ಈಡೇರಿಸುವೆ ಎಂದು ಭರವಸೆ ನೀಡಿದರು.

ತರಬೇತಿಯಲ್ಲಿ 100 ಕ್ಕೂ ಅಧಿಕ ಕೆ-ಸೆಟ್ ಪರೀಕ್ಷಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಘಟಕದ ನಿರ್ದೇಶಕ ಪ್ರೊ.ಭೀಮನಗೌಡ, ಸಂಯೋಜಕರಾದ ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

Leave a Reply