ಬೆಂಗಳೂರು: ಸರ್ಕಾರದ ಕಾಮಗಾರಿ ಟೆಂಡರ್ ನಲ್ಲಿ ಗೋಲ್ ಮಾಲ್ ನಡೆಯುತ್ತಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ತಲೆ ತಿರುಕರು ಮತ್ತು ತಲೆ ಸರಿ ಇಲ್ಲದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಲೆ ಸರಿ ಇದ್ದವರು ಹೀಗೆಲ್ಲ ಮಾತನಾಡಲು ಸಾಧ್ಯವಿಲ್ಲ. ತಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಇವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ತಾವು ಅಧಿವೇಶನಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವಿರೋಧಪಕ್ಷದ ನಾಯಕರಿಗೆ ಈ ಮಾತು ಶೋಭೆ ತರುವುದಿಲ್ಲ ಎಂದು ಹೇಳಿದರು.
ಹಿಂದೆ ಶೇ 40 ಲಂಚದ ಆರೋಪ ಮಾಡಿದರು. ಅದಕ್ಕೆ ಒಂದೇ ಒಂದು ದಾಖಲೆ ಕೊಡಲಿಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಆರೋಪ ಸಾಬೀತು ಮಾಡಲಿಲ್ಲ. ನೀರಾವರಿ ಟೆಂಡರ್ ನಲ್ಲಿ ಅಕ್ರಮ ಆಗಿದ್ದರೆ ದಾಖಲೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವುದು ಸರಿಯಲ್ಲ. ಗೂಳಿಹಟ್ಟಿ ಶೇಖರ್ ಅವರಲ್ಲೂ ದಾಖಲೆ ಕೇಳಿದ್ದೇವೆ ಎಂದರು.
ಅಧಿಕಾರಕ್ಕೆ ಬಂದರೆ ಜೈಲಿಗೆ ಕಲಿಸುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೊದಲು ಅವರು ಜೈಲಿಗೆ ಹೋಗುವುದನ್ನು ತಡೆದುಕೊಳ್ಳಲು ಜಾಮೀನಿಗೆ ವ್ಯವಸ್ಥೆ ಮಾಡಿಕೊಳ್ಳಲಿ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ನವರು ಏನೆಲ್ಲ ಕರ್ಮಕಾಂಡ ಮಾಡಿದರು ಎನ್ನುವುದು ನೆನಪು ಮಾಡಿಕೊಳ್ಳಲಿ. ಅವರು ಮುಂದೆ ಸುಲಿಗೆ ಮಾಡಲು ಅಧಿಕಾರಕ್ಕೆ ಬರಲು ತಯಾರಿ ನಡೆಸುತ್ತಿದ್ದಾರೆ ಎಂದರು.




