ಈಶ್ವರ್ ಖಂಡ್ರೆಯವರಿಗೆ ಒಲಿಯಲಿದೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ?

10 months ago

ಬೆಂಗಳೂರು: ದೆಹಲಿ ಪ್ರವಾಸದ ವೇಳೆ ಪಕ್ಷದ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮತ್ತು ವಿಧಾನ ಪರಿಷತ್ ನಾಮಕರಣ ಸದಸ್ಯರ ನೇಮಕ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮುನ್ನ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ಸಂಘಟನೆಯ ಕಡೆ ಗಮನಹರಿಸಬೇಕಾಗಿದೆ. ಈಗಾಗಲೇ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿ ಅನುಭವವಿರುವ ಈಶ್ವರ ಖಂಡ್ರೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ದರಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಖಂಡ್ರೆ ಅವರು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಇದರೊಂದಿಗೆ ಸಂಪುಟದಲ್ಲಿ ಎರಡು ಹುದ್ದೆಗಳು ಖಾಲಿಯಾಗಲಿದ್ದು, ಅದರ ಭರ್ತಿಗೆ ಅವಕಾಶ ಮಾಡಿಕೊಡಬೇಕು. ಇದರಲ್ಲಿ ಒಂದು ಹುದ್ದೆಯನ್ನು ರಾಜೀನಾಮೆ ನೀಡಿರುವ ನಾಗೇಂದ್ರ ಅವರಿಗೆ, ಮತ್ತೊಂದು ಹುದ್ದೆಯನ್ನು ಹಿರಿಯ ನಾಯಕ ಹರಿಪ್ರಸಾದ್ ಅವರಿಗೆ ನೀಡಲು ಚಿಂತನೆ ನಡೆಸಿದ್ದು, ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನಾಮಕರಣ ಕುರಿತಾಗಿ ಅನಗತ್ಯ ಗೊಂದಲ ಉಂಟಾಗಿದೆ. ಈಗ ಅಂತಿಮಗೊಳಿಸಿರುವ ಪಟ್ಟಿಯನ್ನು ಬದಲಾವಣೆ ಮಾಡಿದರೆ ಮತ್ತಷ್ಟು ಗೊಂದಲ ಸೃಷ್ಟಿಯಾಗಲಿದೆ. ಹೀಗಾಗಿ ಇದಕ್ಕೆ ಅವಕಾಶ ನೀಡಬಾರದು. ನಾಮಕರಣ ಸದಸ್ಯರನ್ನು ನೇಮಿಸುವಾಗ ಪಕ್ಷದ ಕಾರ್ಯಕರ್ತರಿಗಿಂತ ಪಕ್ಷದ ಪರ ಒಲವಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗ ಮಾಡಿರುವ ನಾಲ್ವರಲ್ಲಿ ಇಬ್ಬರು ಪಕ್ಷದ ಕಾರ್ಯಕರ್ತರಾದರೆ, ಇನ್ನಿಬ್ಬರು ಪಕ್ಷದ ಪರ ಒಲವು ಇರುವ ನಾಯಕರಾಗಿದ್ದಾರೆ. ಹೀಗಾಗಿ ಇವರುಗಳನ್ನು ನೇಮಿಸಲು ಅವಕಾಶ ನೀಡಬೇಕು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.

Leave a Reply