ದಾವಣಗೆರೆ: ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಒಡೆತನದ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ವನ್ಯಜೀವಿಗಳು ಪತ್ತೆಯಾಗಿವೆ.
ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ವನ್ಯಜೀವಿಗಳನ್ನು ಈಗಾಗಲೇ ಇಲಾಖೆಯ ವಶಕ್ಕೆ ಪಡೆಯಲಾಗಿದ್ದು, ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ನ್ಯಾಯಾಲಯವನ್ನು ಕೋರಲಾಗಿದೆ ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ ಹೇಳಿದ್ದಾರೆ.
ಕೋರ್ಟ್ ಆದೇಶದ ಪ್ರತಿ ಸಿಗುತ್ತಿದ್ದಂತೆಯೇ ತನಿಖಾಧಿಕಾರಿಯನ್ನು ನೇಮಿಸಿ ಪ್ರಕರಣದ ತನಿಖೆ ಆರಂಭಿಸಿ ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ನ್ಯಾಯಾಲಯದ ಅನುಮತಿ ಪಡೆದು ವನ್ಯಜೀವಿಗಳನ್ನು ಅರಣ್ಯಕ್ಕೆ ಬಿಡಬೇಕೇ ಅಥವಾ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಬೇಕೇ ಎಂಬ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ನಂಟು: ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆಗೆ ಒಳಪಡಿಸಿದ್ದರು. ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ.
ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ್ ಪರವಾನಗಿ ಪಡೆದೆ ಪ್ರಾಣಿಗಳನ್ನು ಸಾಕಲಾಗಿತ್ತು. ಕೆಲಸ ಮಾಡುವವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇತ್ತೀಚೆಗೆ ಜಿಂಕೆಗಳು ಮರಿ ಹಾಕಿದ್ದರಿಂದ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.



