ಬೆಂಗಳೂರು: ಗುತ್ತಿಗೆದಾರರ ಬಿಲ್ ಬಾಕಿ ಸಂಬಂಧ BJPಯವರು ಬೀದಿ ನಾಟಕ ಮಾಡುತ್ತಿದ್ದಾರೆ. ಆದರೆ BJPಯವರು ತಮ್ಮ ಅವಧಿಯಲ್ಲೇ ನಡೆದಿದ್ದ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ಯಾಕೆ ಎಂದು ಉತ್ತರಿಸುತ್ತಿಲ್ಲ. ಅಂದು 40% ಕಮೀಷನ್‌ಗಾಗಿ ಬಿಲ್ ತಡೆ ಹಿಡಿದಿದ್ದರೆ? ಹಿಂದಿನ BJP ಸರ್ಕಾರ ಯಾವ ಕಾರಣಕ್ಕಾಗಿ ಗುತ್ತಿಗೆದಾರರ ಬಿಲ್ ತಡೆ ಹಿಡಿದಿತ್ತು? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಯಾವುದೇ ಸಚಿವರು ಕಮೀಷನ್ ಕೇಳಿಲ್ಲ ಎಂದು ಗುತ್ತಿಗೆದಾರ ಕೆಂಪಣ್ಣ ಅವರ ವರದಿ ಇರುವ ಪತ್ರಿಕೆಯ ಪುಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರತಿಕ್ರಿಯೆ ನೀಡಿರುವ ಅವರು, ಹಿಂದಿನ BJP ಸರ್ಕಾರ ಖಜಾನೆ ಲೂಟಿ ಮಾಡಿದ ಕಾರಣಕ್ಕಾಗಿಯೇ ಅಲ್ಲವೇ ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದು? ಈಗ ಶುದ್ಧ ಸಚ್ಛಾರಿತ್ರ್ಯರಂತೆ ಪೋಸ್ ಕೊಡುವ BJPಯವರಿಗೆ ಗುತ್ತಿಗೆದಾರರ ಪರ ನಿಲ್ಲುವ ಯಾವ ನೈತಿಕತೆಯಿದೆ? BJPಯವರು ತಮ್ಮ ಅವಧಿಯಲ್ಲೇ ಗುತ್ತಿಗೆದಾರರ ಬಾಕಿ ಪಾವತಿಸಿದ್ದರೆ ಗುತ್ತಿಗೆದಾರರಿಗೆ ಈ ಕಷ್ಟ ಬರುತ್ತಿತ್ತೆ? ಎಂದಿದ್ದಾರೆ.
ನಾವು BJPಯವರಂತೆ ಗುತ್ತಿಗೆದಾರರ ಬಳಿ ಒಂದೇ ಒಂದು ಪರ್ಸೆಂಟ್ ಕಮೀಷನ್ ಕೇಳಿಲ್ಲ. ಕಾಂಟ್ರ್ಯಾಕ್ಟರ್ ಅಸೋಸಿಯೇಶನ್ ಕೂಡ ನಮ್ಮ ಮೇಲೆ ಕಮೀಷನ್ ಆರೋಪ ಹೊರಿಸಿಲ್ಲ. ಹಿಂದಿನ BJP ಸರ್ಕಾರದಲ್ಲಿ ಕಾಮಗಾರಿ ನಡೆಸದೆ ಬಿಲ್ ಪಡೆದ ಆರೋಪವಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಇದರ ತನಿಖಾ ವರದಿ ಬಂದ ಬಳಿಕ ಬಿಲ್ ಪಾವತಿಸುತ್ತೇವೆ ಎಂದು ಹೇಳಿದ್ದಾರೆ.
ಗುತ್ತಿಗೆ ಹಗರಣದ ನ್ಯಾಯಾಂಗ ತನಿಖೆಯಾಗಿ ಅದರ ವರದಿ ಬರುವವರೆಗೂ ಬಿಲ್ ಹಣ ತಡೆ ಹಿಡಿಯುವುದು ಅನಿವಾರ್ಯ. ನಿಯಮಾನುಸಾರ ಕಾಮಗಾರಿ ಮಾಡಿದ ಯಾವ ಗುತ್ತಿಗೆದಾರರು ಭಯ ಬೀಳುವ ಅವಶ್ಯಕತೆಯಿಲ್ಲ. ಅವರ ಹಣ ಬಿಡುಗಡೆಯಾಗಲಿದೆ. ಆದರೆ ಯಾರು ಅಕ್ರಮವೆಸಗಿದ್ದಾರೋ ಅಂತಹವರ ವಿರುದ್ಧವಷ್ಟೇ ನಮ್ಮ ಕ್ರಮ. ಈ ತನಿಖೆಯಿಂದ BJPಯವರ ಕರ್ಮಕಾಂಡವೂ ಬಯಲಾಗಲಿದೆ ಎಂದು ಹೇಳಿದ್ದಾರೆ.



