ಯಾರ್ರೀ ಹೇಳಿದ್ದು ಉರೀಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳು ಅಂತ?

3 years ago

ಈ ಕಾಂಗಿಗಳು, ಕಮ್ಮಿನಿಷ್ಟರು, ಸಿಕ್ಕ್ಯುಲರುಗಳಿಗೆ ಬುದ್ದಿ ಇಲ್ಲ. ಅದಕ್ಕೇ ಉರೀಗೌಡ, ನಂಜೇಗೌಡರನ್ನು ಕಾಲ್ಪನಿಕ ಪಾತ್ರ ಅಂತ ಅಪಪ್ರಚಾರ ಮಾಡ್ತಾ ಅವುರೆ. ಅವರಿಬ್ಬರು ನಿಜವಾಗಿಯೂ ಬದುಕಿದ್ದಕ್ಕೆ ಸಾಕ್ಷಿ ಬೇಕೆ? ಹಾಗಾದ್ರೆ ಕೇಳಿಸ್ಕೊಳಿ….

ಅಂಡಮಾನ್ ಜೈಲಿನಿಂದ ರಾತ್ರಿ ಹೊತ್ತು ನಮ್ಮ ’ಈರ’ ಸಾವರ್ಕರ್‌ರನ್ನು ತನ್ನ ರೆಕ್ಕೆಗಳ ಮೇಲೆ ಕೂರಿಸಿಕೊಂಡು ಭಾರತಕ್ಕೆ ಹೊತ್ತು ತರುತ್ತಿಲ್ಲವಾ, ಬುಲ್‌ಬುಲ್ ಹಕ್ಕಿ, ಆ ಬುಲ್‌ಬುಲ್ ಹಕ್ಕಿಗೆ ನೂರೈವತ್ತು ವರ್ಷಗಳ ಹಿಂದೆ ಕಾಳು ಹಾಕಿ, ನೀರು ಇಟ್ಟು ಸಾಕಿದ್ದೇ ಈ ಉರೀಗೌಡ, ನಂಜೇಗೌಡರು! ಯಾಕಂದ್ರೆ ಅವರಿಗೆ ಗೊತ್ತಿತ್ತು, ತಾವು ಈಗ ಕೊಂದಿರುವ ಟಿಪ್ಪೂವಿನಂತಹುದೇ ದೇಶದ್ರೋಹಿಯೊಬ್ಬ ಮುಂದಿನ ಶತಮಾನದಲ್ಲಿ ಈ ನೆಲದಲ್ಲಿ ಹುಟ್ಟಲಿದ್ದಾನೆ. ಅವನನ್ನು ಜನ ಮಹಾತ್ಮ ಗಾಂಧಿ ಅಂತ ಕರೆಯಲಿದ್ದಾರೆ. ಅವನಿಂದ ಈ ದೇಶವನ್ನು ರಕ್ಷಣೆ ಮಾಡಬೇಕೆಂದರೆ, ಅವನನ್ನೂ ಟಿಪ್ಪೂವನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಿ ಮೇಲಕ್ಕೆ ಕಳಿಸಬೇಕು, ಆ ಕೊಲೆಗೆ ಸಂಚು ರೂಪಿಸಲು ನಮ್ಮಂತೆಯೇ ಒಬ್ಬ ‘ಈರ’ ಹುಟ್ಟಲಿದ್ದಾನೆ, ಅವನನ್ನು ಅಂಡಮಾನಿನ ಜೈಲಿಗೂ ತಳ್ಳಲಿದ್ದಾರೆ, ಆಗ ಅವನಿಗೆ ಸಹಾಯ ಮಾಡಲು ಒಂದು ಬುಲ್‌ಬುಲ್ ಹಕ್ಕಿ ಬೇಕಾಗುತ್ತದೆ ಎಂದು ಮುಂದಾಲೋಚನೆ ಮಾಡಿದ ಅವರು, ಆ ಬುಲ್‌ಬುಲ್ ಹಕ್ಕಿಯನ್ನು ಸಾಕಿದ್ದರು.

ಈಗ ಹೇಳ್ರಿ, ಗಾಂಧಿಯನ್ನು ಕೊಂದವರು ಕೂತಿದ್ದ ಕಟಕಟೆಯಲ್ಲಿ ಈರ ಸಾವರ್ಕರ್ ಕೂತಿದ್ದು ಸುಳ್ಳಾ? ಆತ ಅಂಡಮಾನ್ ಜೈಲಲ್ಲಿದ್ದದ್ದು ಸುಳ್ಳಾ? ದಿನಾ ರಾತ್ರಿ ಬುಲ್‌ಬುಲ್ ಹಕ್ಕಿಯ ರೆಕ್ಕೆಯ ಮೇಲೆ ಕೂತು ಭಾರತಕ್ಕೆ ಬಂದು ಹೋಗುತ್ತಿದ್ದುದು ಸುಳ್ಳಾ? ಅವೆಲ್ಲಾ ಸುಳ್ಳಲ್ಲ ಅಂದ ಮೇಲೆ ಉರೀಗೌಡ, ನಂಜೇಗೌಡ ಅದ್ಯಂಗ್ರೀ ಸುಳ್ಳಾಗ್ತಾರೆ!

ಹುಷಾರು…. ನಾವು ವಾಟ್ಸಪ್ ಯೂನಿವರ್ಸಿಟಿಯ ಶಿಷ್ಯಂದಿರೇ ಇರಬಹುದು. ನಮಗೂ ಇತಿಹಾಸ ಗೊತ್ತು, ಲಾಜಿಕ್ ಗೊತ್ತು….
ಜೈ ಮೋದಿ!!

ಹೀಗಂತ ನನ್ನ ‘ಚೆಡ್ಡಿ’ ದೋಸ್ತನೊಬ್ಬ ಒಂದೇ ಉಸಿರಿಗೆ ಕ್ಯಾಕರಿಸಿ, ನನ್ನ ಮುಖಕ್ಕೆ ಉಗಿದು ಹೋದ ಕಣ್ರೀ. ಈಗಲೂ ಸುಧಾರಿಸಿಕೊಳ್ಳುತ್ತಿದ್ದೇನೆ…

– ಮಾಚಯ್ಯ ಎಂ ಹಿಪ್ಪರಗಿ

Leave a Reply