ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಪಂಚಮಿ ಜಾತ್ರೆಯ ದಿನ ಅನ್ಯಮತೀಯರು ವ್ಯಾಪಾರ ಮಾಡಕೂಡದು ಎಂದು ಬ್ಯಾನರ್ ಅಳವಡಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾರು ಅನ್ಯರು ? ಮೂಲನಿವಾಸಿಗಳಾದ ಮಲೆಕುಡಿಯರು ಮತ್ತು ಮುಸ್ಲೀಮರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ “ಅನ್ಯ”ರೇ ಆಗಿದ್ದಾರೆ.

ಕುಕ್ಕೆ ಲಿಂಗ ದೇವಸ್ಥಾನ ಮೂಲದಲ್ಲಿ ಆದಿವಾಸಿ ಬುಡಕಟ್ಟು ಸಮುದಾಯವಾದ ಮಲೆಕುಡಿಯರದ್ದು.
ಶಂಕರಾಚಾರ್ಯರು ಬಂದ ಮೇಲೆ ಸ್ಥಾನಿಕ ಬ್ರಾಹ್ಮಣರು ಪೂಜಾದಿ ಅರ್ಚನೆ ಶುರು ಮಾಡಿದರು. ಆ ಬಳಿಕ ಬಂದ ಮಧ್ವಾಚಾರ್ಯರು ಸ್ಥಾನಿಕ ಬ್ರಾಹ್ಮಣರನ್ನು ಹೊರಗಟ್ಟಿ ಮಾಧ್ವ ಬ್ರಾಹ್ಮಣರನ್ನು ಪೂಜಾದಿಗಳಿಗೆ ನೇಮಿಸಿ ಸುಬ್ರಹ್ಮಣ್ಯ ಸಂಪುಟ ಮಠಕ್ಕೆ ಪೀಠಾಧಿಪತಿಗಳನ್ನು ನೇಮಿಸಿದರು.
ಶಂಕರಾಚಾರ್ಯರ ಕಾಲಕ್ಕೆ ಮಲೆಕುಡಿಯರು ಅನ್ಯರಾದರು. ಮಧ್ವಾಚಾರ್ಯರ ಕಾಲಕ್ಕೆ ಹವ್ಯಕ/ಸ್ಥಾನಿಕ/ಸ್ಮಾರ್ತ ಬ್ರಾಹ್ಮಣರು ಅನ್ಯರಾದರು. ಈಗಲೂ ಶೈವ ಮತ್ತು ವೈಷ್ಣವ ಗಲಾಟೆ ಮುಗಿದಿಲ್ಲ. ಎರಡೂ ಬ್ರಾಹ್ಮಣ ಪಂಗಡಗಳಿಗೂ ದೇಗುಲದ ಸ್ಥಾಪಕರಾದ ಮಲೆಕುಡಿಯರು ಈಗಲೂ ಅನ್ಯರು.
ಕುಕ್ಕೆ ಅಂದರೆ ಬಿದಿರಿನ ಬುಟ್ಟಿ. ಮಲೆಕುಡಿಯರು ಬಿದಿರ ಬುಟ್ಟಿಯನ್ನಿಟ್ಟು ಮಾಡುತ್ತಿದ್ದ ಪ್ರಕೃತಿ ಪೂಜೆಗೆ ನಾಥ ಪಂಥದ ಶಿವನ ಪ್ರವೇಶವಾಯಿತು. ಬಳಿಕ ಬಂದ ಶಂಕರಾಚಾರ್ಯರು ವೈದಿಕೀರಣಗೊಳಿಸಿ ಕುಕ್ಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈಗಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥೋತ್ಸವ ಆಗಬೇಕಾದರೆ ಮಲೆಕುಡಿಯರು ಬಿದಿರನ್ನು ತಂದು ರಥವನ್ನು ಕಟ್ಟಬೇಕು.
ಹಾಗೆ ನೋಡಿದರೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲೆಕುಡಿಯರು ಮತ್ತು ಮುಸ್ಲೀಮರು ಮಾತ್ರವೇ ಅಧಿಕಾರ ಹೊಂದಿರುವವರು ! ಕುಕ್ಕೆ ಸುಬ್ರಹ್ಮಣ್ಯದ ಸ್ಥಾಪಕರಾದ ಮಲೆಕುಡಿಯರ ಪುರ್ಸಪೂಜೆಯ ಪಾಡ್ದನದ ಪ್ರಕಾರ, ಮಲೆಕುಡಿಯರಿಗೆ ಶಿವನನ್ನು ಪರಿಚಯಿಸಿದ್ದು ಮುಸ್ಲೀಮರು. ನಾಥ ಪಂಥದ ಶಿವ ಕದ್ರಿ ಗುಡ್ಡದಲ್ಲಿ ನಿಂತು ನೋಡುವಾಗ ಮಲೆಕುಡಿಯರು ಕಾಡಂಚಿನಲ್ಲಿ ಕೃಷಿ ಮಾಡಿಕೊಂಡಿದ್ದರಂತೆ. ಮಲೆಕುಡಿಯರಿಗೆ ಕೃಷಿಯೇ ದೇವರು. ಅವರು ದೇವತಾರಾಧನೆ ಮಾಡುವುದಿಲ್ಲ ಎಂದು ತಿಳಿದು ಆಶ್ಚರ್ಯಚಕಿತರಾದ ಶಿವ ಮತ್ತು ಪಾರ್ವತಿ ಕೊರಗ ಕೊರಪಲ್ತಿ ರೂಪದಲ್ಲಿ ಮಲೆಕುಡಿಯರಿರುವ ಕಾಡಿಗೆ ಹೊರಟನಂತೆ. ಹಾಗೆ ಹೋಗುವಾಗ ಶಿವನಿಗೆ ಮಲೆಕುಡಿಯರ ಗ್ರಾಮಗಳ ದಾರಿ ತೋರಿಸಿದ್ದು ಬುಟ್ಟಿಕಲ್ಲು ಸಾಯಿಬ. ಈ ಬೊಟ್ಟಿಕಲ್ಲು ಸಾಯಿಬನಿಗೂ ಮಲೆಕುಡಿಯರಿಗೂ ಸಂಬಂಧವಿದೆ. ಮಲೆಕುಡಿಯರು ಬಿದಿರ ಬುಟ್ಟಿ ತಯಾರಿಸಿದರೆ ಅದನ್ನು ಜನರ ಮಧ್ಯೆ ತೆರಳಿ ಮಾರಾಟ ಮಾಡುತ್ತಿದ್ದವನು ಬೊಟ್ಟಿಕಲ್ಲು(ಬುಟ್ಟಿ ಮಾರಾಟ ಮಾಡಲು ಕೂರುವ ಕಲ್ಲಿನ ಸ್ಥಳ) ಸಾಯಿಬ. ಈ ಸಾಯಿಬ( ಮುಸ್ಲೀಮ್) ನಿಂದಾಗಿಯೇ ಶಿವ ಮಲೆಕುಡಿಯರಿಗೆ ಹತ್ತಿರವಾದ. ಈಗಲೂ ಮಲೆಕುಡಿಯರ ಪುರ್ಸ ಪೂಜೆಯಲ್ಲಿ ಸಾಯಿಬೋ ಸಾಯಿಬೋ ಎಂದು ಕರೆಯಲಾಗುತ್ತದೆ.
ಹಾಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯಾಪಾರ ಬಹಿಷ್ಕಾರ ಮಾಡುವುದಾದರೆ ಮಲೆಕುಡಿಯರು ಮತ್ತು ಮುಸ್ಲೀಮರನ್ನು ಹೊರತುಪಡಿಸಿ ಉಳಿದವರಿಗೆಲ್ಲರಿಗೂ ವ್ಯಾಪಾರಕ್ಕೆ ನಿರ್ಬಂಧ ವಿಧಿಸಬೇಕು. ಕುಕ್ಕೆ ಸುಬ್ರಹ್ಮಣ್ಯದ ಪೂಜೆಯ ಹಕ್ಕನ್ನು ಮಲೆಕುಡಿಯರಿಗೂ, ವ್ಯಾಪಾರದ ಹಕ್ಕನ್ನು ಶಿವನನ್ನು ಪರಿಚಯಿಸಿದ (ಸಾಯಿಬೊ) ಬ್ಯಾರಿ ಮುಸ್ಲೀಮರಿಗೂ ನೀಡಬೇಕು.
– ನವೀನ್ ಸೂರಿಂಜೆ, ಪತ್ರಕರ್ತರು



