ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲದಿರುವಾಗ ಹರಿದು ಹೋಗುವುದು ಎಲ್ಲಿಗೆ: ಬೊಮ್ಮಾಯಿ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ಇದೀಗ ವಾದ- ಪ್ರತಿವಾದದ ರಾಜಕಾರಣ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಮಾಜಿ ಶಾಸಕ ಬಿಜೆಪಿಯ ಹಿರಿಯ ನಾಯಕ ವಿಶ್ವನಾಥ್ ಪಾಟೀಲ್ ಸೇರಿದಂತೆ ಹಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ಎಂಬ ಅಣೆಕಟ್ಟು ಹೊಡೆದಿದ್ದು ಅದರ ನಾಯಕರಲ್ಲ ನೀರಿನಂತೆ ಹೊರ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕಾಂಗ್ರೆಸ್ ಗುಂಡಿಯಲ್ಲೇ ಮೊದಲು ನೀರೇ ಇಲ್ಲ. ಮೊದಲು ಅದನ್ನು ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲದಿರುವಾಗ ಹರಿದು ಹೋಗುವುದು ಎಲ್ಲಿಗೆ ಎಂದು ಪ್ರಶ್ನೆ ಮಾಡಿದರು. ಮೊದಲು ಕಾಂಗ್ರೆಸ್‍ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಳ್ಳಲಿ. ಬಿಜೆಪಿ ಬಗ್ಗೆ ಅವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಹೈಕಮಾಂಡ್ ಬಲಿಷ್ಟವಾಗಿದ್ದು ಏನೇ ಇದ್ದರೂ ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಸೇರಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಗಿಸಲು ಹೊರಟ್ಟಿದ್ದಾರೆ ಎಂಬ ಶಿವಕುಮಾರ್ ಆರೋಪದ ಬಗ್ಗೆ ಕೆಂಡಮಂಡಲರಾದ ಅವರು ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಿದ್ದು ಯಾರು ಎಂಬುದನ್ನು ಜನರೇ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

2013ರಲ್ಲಿ ಇದೇ ಕಾಂಗ್ರೆಸ್ ಪಕ್ಷ ಲಿಂಗಾಯಿತ ಸಮುದಾಯವನ್ನು ವಿಭಜನೆ ಮಾಡಿ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದನ್ನು ಯಾರೊಬ್ಬರು ಮರೆತಿಲ್ಲ. ವೀರಶೈವ ಲಿಂಗಾಯಿತರು ಸಾಕಷ್ಟು ಜಾಗೃತರಾಗಿದ್ದಾರೆ. ಶಿವಕುಮಾರ್ ಅವರ ಮರಳು ಮಾಡುವ ಮಾತುಗಳಿಗೆ ವೀರಶೈವ ಸಮುದಾಯ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.

ಇದಕ್ಕೂ ಮುನ್ನ ಬಿಜೆಪಿ ಹಿರಿಯ ನಾಯಕ ಹಾಗು ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್,ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಶಿವಾನಂದ ಪಾಟೀಲ್, ಅರವಿಂದ ಚೌಹಾಣ್ ಸೇರಿದಂತೆ ಅನೇಕ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಶಿವಕುಮಾರ್ ಬಿಜೆಪಿ ಎಂಬ ಅಣೆಕಟ್ಟು ಒಡೆದು ನೀರಿನಂತೆ ನಾಯಕರು ಹರಿದು ಹೋಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ನಡೆಯುತ್ತಿದೆ. ಚುನಾವಣಾ ಆಯೋಗ ಮುಖ್ಯಮಂತ್ರಿ ಕಚೇರಿಯ ದೂರವಾಣಿ ಕರೆ ಪಟ್ಟಿ ತರಿಸಿಕೊಳ್ಳಬೇಕು. ಸವದತ್ತಿ ಎಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ದೋಷವಿದ್ದರೂ ಅದನ್ನು ತಿದ್ದಲು ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ ಎಂದು ಆಪಾದಿಸಿದರು.

ನನ್ನ ನಾಮಪತ್ರವನ್ನೇ ತಿರಸ್ಕರಿಸಲು ಬಿಜೆಪಿ ತಂಡ ಪ್ರಯತ್ನಿಸಿದ್ದರು. ಚುನಾವಣಾ ಆಯೋಗದ ಈ ಅಧಿಕಾರ ದುರುಪಯೋಗ ಗಮನಿಸಬೇಕು. ಒತ್ತಡಕ್ಕೆ ಮಣಿಯದೇ ಅರ್ಹರಿಗೆ ಸ್ಪರ್ಧೆಗೆ ಅವಕಾಶ ನೀಡಬೇಕು. ಬಿಜೆಪಿ ಅಭ್ಯರ್ಥಿಗಳ ದೋಷಪೂರಿತ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

Leave a Reply