ಸಹಾಯಕ ಪ್ರಾಧ್ಯಾಪಕ ನೇಮಕ ಹುದ್ದೆ ಕುರಿತು ಸದನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದೇನು?

2 years ago

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿಯಿರುವ 1242 ಮಂದಿ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದ್ದು ನ್ಯಾಯಾಲಯದ ತಡೆಯಾಜ್ಞೆಯಿಂದ ಪ್ರಕ್ರಿಯೆಯು ವಿಳಂಬವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಬಿಜೆಪಿಯ ಚಿದಾನಂದ ಗೌಡ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ಅವರು, ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಅಡ್ವೋಕೇಟ್ ಜನರಲ್ ಅವರು ಪ್ರಯತ್ನ ನಡೆಸಿದ್ದಾರೆ. ಅದರ ಬೆನ್ನಲ್ಲೇ ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಬಂದಿದ್ದು, ಇದಾದ ನಂತರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈಗಾಗಲೇ ನೇಮಕಾತಿ ಹೊಂದಿದವರಿಗೆ ಸ್ಥಳ‌ ನಿಯೋಜನೆ ಕೂಡ ಮಾಡಲಾಗಲಾಗುವುದು ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂದು ಜಾರಿಯಲ್ಲಿದ್ದ ಸರ್ಕಾರದ ನೇಮಕಾತಿ ಹಾಗೂ ಮೀಸಲಾತಿ ನಿಯಮಗಳನ್ವಯ ಕಳೆದ 2021ರ ಸೆಪ್ಟೆಂಬರ್ 30 ರಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ, ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು ಎಂದರು.

ಸಹಾಯಕ ಪ್ರಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅಧಿಸೂಚನೆಯನ್ವಯ ಆಯ್ಕೆಯಾದ 1208 ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ನೇಮಕಾತಿ ನಿಯಮಗಳಂತೆ ನೈಜತೆ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆಯುವುದು ಬಾಕಿ ಇರುತ್ತದೆ ಎಂದು ಹೇಳಿದರು.

ಪ್ರಸ್ತುತ ‘ಡಿ’ ಮತ್ತು ‘ಇ’ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಧ್ಯಾಪಕರುಗಳನ್ನು ಬೋಧಕರ ವರ್ಗಾವಣೆ ನಿಯಂತ್ರಣ ನಿಯಮಗಳು 2021 ರನ್ವಯ ವರ್ಗಾವಣೆಗೊಳಿಸಿ, ಹುದ್ದೆಗಳನ್ನು ಖಾಲಿಗೊಳಿಸಿದ ನಂತರ ಕೌನ್ಸಿಲಿಂಗ್‌ ಮುಖಾಂತರ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ ಎಂದರು.

ಸದರಿ ನೇಮಕಾತಿ ಕುರಿತಂತೆ ಮಾನ್ಯ ಕೆ.ಎ.ಟಿ. ನ್ಯಾಯಮಂಡಳಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣ/ ಅರ್ಜಿಗಳಲ್ಲಿ ತಡೆಯಾಜ್ಞೆ ತೆರವಾದ ನಂತರ ಮತ್ತು ಅಂತಿಮ ತೀರ್ಪು ಬಂದ ನಂತರ ಹಾಗೂ ಪ್ರಸ್ತುತ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಕ್ಕೆ ಚುನಾವಣಾ ನೀತೆ ಸಂಹಿತೆ ಜಾರಿಯಲ್ಲಿದ್ದು, ಮುಕ್ತಾಯಗೊಂಡ ನಂತರ ಹಾಗೂ ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಗಮನದಲ್ಲಿರಿಸಿಕೊಂಡು ಅಂತಿಮವಾಗಿ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿವಿಧಾನಗಳ ಬಗ್ಗೆ, ತಿಳಿಸಲಾಗಿರುತ್ತದೆ. ಸದರಿ ಸುತ್ತೋಲೆಯಲ್ಲಿ ಒಂದೇ ಅಧಿಸೂಚನೆ ಮೂಲಕ ಸ್ಥಳಿಯ ಮತ್ತು ಮಿಕ್ಕುಳಿದ ವೃಂದದ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಹೊರಡಿಸುವ ನೇಮಕಾತಿ ಅಧಿಸೂಚನೆಯಲ್ಲಿ ಈ ಕೆಳಕಂಡ ವಿಶೇಷ ಸೂಚನೆಗಳನ್ನು ಸದರಿ ಅಧಿಸೂಚನೆಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದೆಂದು ತಿಳಿಸಲಾಗಿದೆ ಎಂದು ಹೇಳಿದರು.

ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ಸ್ಥಳೀಯ ವೃಂದದ ಹುದ್ದೆ ಹಾಗೂ ಮಿಕ್ಕುಳಿದ ವೃಂದದ ಹುದ್ದೆ ಈ ಎರಡೂ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಒಂದು ವೇಳೆ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಯು ಪ್ರಸ್ತುತ ನೇಮಕಾತಿಗೆ ಸಂಬಂಧಿಸಿದಂತೆ, ಮಿಕ್ಕುಳಿದ ವೃಂದದ ಹುದ್ದೆಯನ್ನು ಆಯ್ಕೆಮಾಡಿಕೊಂಡು ನೇಮಕಾತಿ ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಯು ಜಾರಿಯಲ್ಲಿರುವ ನಿಯಮದಂತೆ ತನ್ನಸೇವಾ ಅವಧಿಯಲ್ಲಿ ಅನುಚ್ಛೇದ 371ಜೆ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟಿಕರಿಸಲಾಗಿದೆ ಎಂದರು.

ಸುತ್ತೊಲೆಯಲ್ಲಿ ತಿಳಿಸಿರುವ ಅಂಶಗಳ ಮೇರೆಗೆ ಅದರಂತೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು ಎಂದರು.

Leave a Reply