ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರದಲ್ಲಿ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ 20ನೆ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಜಾತಿ ವ್ಯವಸ್ಥೆಯ ಕಾರಣಕ್ಕೆ ಬಹು ಸಂಖ್ಯಾತರು ಅಕ್ಷರ ವಂಚಿತರಾದರು. ಸಾಮಾಜಿಕ, ಆರ್ಥಿಕ ಅಸಮಾನತೆ ಸೃಷ್ಟಿಯಾಗಿದೆ. ಇದನ್ನು ತೊಡೆದುಹಾಕಲು ಬರಹಗಾರರು ಯತ್ನಿಸುತ್ತಿದ್ದಾರೆ ಎಂದರು.
ನಾನು ಸಾಹಿತಿಯಲ್ಲ, ಆದರೆ ಸಾಹಿತಿಗಳ ಒಡನಾಟ ಹೆಚ್ಚಾಗಿದೆ. ಮಲ್ಲಿಕಾಘಂಟಿ ಅವರು ಸಮಾಜಮುಖಿ ಲೇಖಕಿ. ಲೇಖಕರು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಅನೇಕ ನ್ಯೂನ್ಯತೆ ಹಾಗೂ ಅಸಮಾನತೆ ತೊಡೆದುಹಾಕಲು ಸಾಧ್ಯ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯಲ್ಲಿ ಭಾಷಣ ಮಾಡಿ ಒಬ್ಬ ವ್ಯಕ್ತಿ ಒಂದು ಮತ ಒಂದೇ ಮೌಲ್ಯಮಾಡಿದ್ದಾರೆ. ಸಾಮಾನ್ಯನೇ ಇರಲಿ, ರಾಷ್ಟ್ರಪತಿ ಇರಲಿ ಮತಕ್ಕೆ ಒಂದೇ ಮೌಲ್ಯ ಇದೆ. ಆದರೆ, ಸಾಮಾಜಿಕವಾಗಿ ಈ ಸಮಾನತೆ ಇಲ್ಲ. ಇದು ಸಾಕಾರವಾಗದಿದ್ದರೆ ಸಮಾನತೆ ವಿರೋಧಿಗಳಿಂದ ಸ್ವಾತಂತ್ರ್ಯದ ಸೌಧ ಧ್ವಂಸಗೊಳ್ಳಲಿದೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು ಎಂದರು.
ಪ್ರತಿಯೊಬ್ಬರೂ ಕಲಿಯುತ್ತಲೇ ಇರಬೇಕು. ಜ್ಞಾನ ಕಲಿಯುತ್ತಾ ಹೆಚ್ಚಾಗಲಿದೆ. ಬರಹಗಾರರು ಮತ್ತು ಪ್ರಕಾಶಕರ ಸಂಘದ ಬೇಡಿಕೆಯಂತೆ ಪುಸ್ತಕಗಳ ಖರೀದಿಗೆ ಹಣ ನೀಡಲು ಪ್ರಯತ್ನಿಸುತ್ತೇವೆ ಎಂದರು
ತಲೆ ಕೆಡಿಸಿಕೊಳ್ಳಬೇಡಿ: ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, ಸರ್ಕಾರ ಹಸಿದವರ ಕೂಗು ಮತ್ತು ತಿಂದವರ ತೇಗನ್ನು ಕೇಳಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಿದೆ. ಇದರಿಂದಾಗಿ ದಾರಿ ತಪ್ಪಿಸುವವರ ಬಗ್ಗೆ ಮುಖ್ಯಮಂತ್ರಿ ತಲೆ ಕೆಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ಅನ್ನ ಭಾಗ್ಯ ಯೋಜನೆ ಅವಕಾಶಹೀನರ ಆಶಾಕಿರಣವಾಗಿದೆ. ಬಡವರಿಗೆ ನೀಡುವ ಇಂತಹ ಯೋಜನೆಗಳನ್ನು ನೀಡಲು ಸುಲಭಕ್ಕೆ ಬಿಡಲ್ಲ. ಟೀಕೆ ಮಾಡುತ್ತಾರೆ. ಅದರತ್ತ ಗಮನ ಕೊಡಬೇಡಿ ಎಂದು ಸಲಹೆ ನೀಡಿದರು. ನಿನ್ನ ತಲೆಯಲ್ಲಿ ಸಗಣಿ ಇತ್ತಾ ಎಂದು ಮಾಜಿ ಮಂತ್ರಿಯೊಬ್ಬರು ಸಿದ್ದರಾಮಯ್ಯ ಅವರನ್ನು ಕೇಳುತ್ತಾರೆ. ಇಂತಹ ಟೀಕೆಗಳು ಶೋಭೆಯಲ್ಲ ಎಂದು ಬಿಜೆಪಿ ನಾಯಕರ ಟೀಕೆಗೆ ಆಕ್ಷೇಪಿಸಿದರು
ವಿಶ್ರಾಂತ ಕುಲಪತಿ ಡಾ.ಮಲ್ಲಿಕಾಘಂಟಿ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ವಾತಾವರಣ ಇತ್ತು. ನಾನು ಮಾತನಾಡುವುದು ವಿವಾದಕ್ಕೀಡಾಗಿ ಸಾಕಷ್ಟು ಪ್ರಕರಣಗಳನ್ನು ಎದರಿಸಿದ್ದೇನೆ. ಅದಕ್ಕಾಗಿಯೇ ಕೆಲ ಪ್ರಕರಣಗಳನ್ನು ಎದರಿಸುತ್ತಿದ್ದೇನೆ. ನಾವಾಡಿದ ಮಾತುಗಳಲ್ಲಿ ಒಂದು ವಾಕ್ಯವನ್ನು ಇಟ್ಟುಕೊಂಡು ವಾಟ್ಸ ಅಪ್ ವಿಶ್ವವಿದ್ಯಾಲಗಳಲ್ಲಿ ಸಾಕಷ್ಟು ಘಾಸಿ ಮಾಡುತ್ತವೆ. ನಮ್ಮ ಕಡೆ ಸೀರೆ ಕಳೆದು ಹೊಡೆಯುತ್ತೇವೆ ಎಂದು ಬೆದರಿಸುತ್ತಾರೆ, ಅದೇ ರೀತಿ ನಮ್ಮ ಹೇಳಿಕೆಗಳನ್ನು ವಿವಾದ ಮಾಡುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದರು




