ಸಿದ್ದರಾಮಯ್ಯ ಅವರನ್ನು ಒಂಟಿಕಾಲಿನಲ್ಲಿ ನಿಲ್ಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ: ವಿಜಯೇಂದ್ರ

1 year ago

ಗದಗ: ಪಕ್ಷದಲ್ಲಿ ಶಿಸ್ತು ಮುಖ್ಯ, ಯಾರನ್ನೋ ಖುಷಿಪಡಿಸಲು ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿಲ್ಲ. ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಬೇಕಾದರೂ ಮುಲಾಜಿಲ್ಲದೇ ತೆಗೆದುಕೊಳ್ಳುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ ಅಬ್ಬರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆ ವಿಚಾರದಲ್ಲಿ ಯಾರನ್ನೂ ಕೇರ್‌ ಮಾಡುವುದಿಲ್ಲ. ಹಿರಿಯರಾದ ಯಡಿಯೂರಪ್ಪ ಅವರು 30 ವರ್ಷಗಳಲ್ಲಿ ಎಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದರೋ ನಾನು ಒಂದು ವರ್ಷದಲ್ಲಿ ಅಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದೇನೆ ಎಂದರು.

ನಾನು ಪಕ್ಷದ ಅಧ್ಯಕ್ಷನಾಗಿ ಒಂದೂಕಾಲು ವರ್ಷವಾಗಿರಬಹುದು. ಆದರೆ, 1998ರಿಂದಲೂ ತಂದೆಯ ಜತೆಗೆ ರಾಜ್ಯದಾದ್ಯಂತ ಓಡಾಡಿರುವೆ. ಯಾವ ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ನನ್ನಲ್ಲಿದೆ. ನಾನು ಹೆಬ್ಬಟ್ಟು ಅಲ್ಲ ಅಥವಾ ಮಾಹಿತಿ ಗೊತ್ತಿಲ್ಲ ಅಂತೇನಿಲ್ಲ ಎಂದರು.

ವಿಜಯೇಂದ್ರ ಅಡ್ಜೆಸ್ಟ್‌ಮೆಂಟ್‌ ರಾಜಕಾರಣಿ ಎಂದು ನಮ್ಮ ಪಕ್ಷದ ಕೆಲವು ನಾಯಕರೇ ಬೊಬ್ಬೆ ಹೊಡೆಯುತ್ತಿದ್ದರು. ಮುಡಾ ವಿಚಾರದಲ್ಲಿ ಪಾದಯಾತ್ರೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರನ್ನು ಒಂಟಿಕಾಲಿನಲ್ಲಿ ನಿಲ್ಲಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.

ಕೇಂದ್ರದ ನಾಯಕರು ನನ್ನನ್ನು ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಸುಮ್ಮನೆ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಸರಿಹೋಗಬೇಕು. ಅಧಿಕಾರಕ್ಕೆ ಬರಬೇಕು ಎಂಬುದರ ಜತೆಗೆ ನಾವು ಕರ್ನಾಟಕದಲ್ಲಿ ಗೆದ್ದರೆ, ಪಕ್ಕದ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನೂ ಗೆಲ್ಲಬಹುದು ಎಂಬುದು ಅವರ ದೃಷ್ಟಿಕೋನವಾಗಿದೆ. ಹಾಗಾಗಿ, ನನ್ನ ಗುರಿ ಸ್ಪಷ್ಟವಾಗಿದೆ. ಸಂಘಟನೆ ವಿಚಾರವಾಗಿ ಖುದ್ದಾಗಿ ನಾನೇ ಅಖಾಡಕ್ಕೆ ಇಳಿಯುವೆ. ಯಾರ ಮುಲಾಜಿಗೂ ಒಳಗಾಗುವುದಿಲ್ಲ ಎಂದರು.

ರಾಜ್ಯ ಮಟ್ಟದಲ್ಲಿರುವಂತೆ ಜಿಲ್ಲಾ ಮಟ್ಟದಲ್ಲೂ ಬಿಜೆಪಿಗೆ ಕೆಲವೊಂದಿಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಜನಾ‌ಕ್ರೋಶ ಯಾತ್ರೆ ಮುಗಿದ ನಂತರ ಪ್ರತಿ ಜಿಲ್ಲೆಗೂ ಭೇಟಿ ನೀಡಿ, ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿದರೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ರೀ-ವರ್ಕ್‌ ಮಾಡಲಾಗುವುದು ಎಂದರು.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಸಲ್ಲದು. ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂಬ ವಿಷಯ ರಾಜ್ಯಾಧ್ಯಕ್ಷನಿಗೆ ಗೊತ್ತಿರಬೇಕು. ಚುನಾವಣೆ ಸಂದರ್ಭದಲ್ಲಿ ಕನಿಷ್ಠ ಮೂರು ತಿಂಗಳು ಮುಂಚೆ ಅಭ್ಯರ್ಥಿ ಘೋಷಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗುವುದು. ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ವಿಶ್ವಾಸ ಬರುವುದಕ್ಕೆ ಮುಂಚೆ; ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸ ಬರಬೇಕು. ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸವನ್ನು ರಾಜ್ಯಾಧ್ಯಕ್ಷನಾಗಿ ಮಾಡುವೆ ಎಂದರು.

ಜಾತಿ ಜನಗಣತಿಯನ್ನು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ವಂತ ಅನುಕೂಲಕ್ಕೆ ಮುನ್ನೆಲೆಗೆ ತಂದಿದ್ದಾರೆ. ನಾವು ಜನಾಕ್ರೋಶ ಯಾತ್ರೆ ಆರಂಭಿಸಿದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿ ಜನಗಣತಿ ವಿಷಯ ಹರಿಬಿಟ್ಟರು. ಅವರ ಪಕ್ಷದ ಆಂತರಿಕ ಒಪ್ಪಂದ ಪ್ರಕಾರ ಸಿಎಂ ಸ್ಥಾನ ಬಿಟ್ಟುಕೊಡಬೇಕಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳನ್ನು ಬೆದರಿಸುವ, ಗೊಂದಲ ಸೃಷ್ಟಿಸುವ ಕೆಲಸಕ್ಕೂ ಜಾತಿ ಜನಗಣತಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಷ್ಟೇ ಅಭಿವೃದ್ಧಿ ಎಂದು ಸಿಎಂ ತಿಳಿದುಕೊಂಡಿದ್ದಾರೆ. ಅದನ್ನು ಹೊರತುಪಡಿಸಿ ಎರಡು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರು ಅನುದಾನ ಕೊಡುವಂತೆ ಕೇಳಿದರೆ ಸಿಎಂ ಉಡಾಫೆಯಿಂದ ಉತ್ತರಿಸುತ್ತಾರೆ ಎಂದರು.

Leave a Reply