ಚಾಮರಾಜನಗರ: ಭಾರತ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ ನಾ ಸು ಹರ್ಡಿಕರ್ ಅವರಲ್ಲಿದ್ದ
ದೇಶ ಪ್ರೇಮದ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಡಿ ಎಸ್ ಶೇಷಾಚಲ ಹೇಳಿದರು.
ಅವರು ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ
ಭಾರತ ಸೇವಾದಳ ಸಂಸ್ಥಾಪಕರಾದ ಡಾ ನಾ.ಸು
ಹರ್ಡಿಕರ್ ಅವರ134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ನಾ ಸು ಹರ್ಡಿಕರ್ ಪ್ರಮುಖರು. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯುವಕರಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾ ಮನೋಭಾವನೆ ಮೂಡಿಸಲು ಭಾರತ ಸೇವಾದಳವನ್ನು ಸ್ಥಾಪಿಸಿದರೆಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಚಾಮರಾಜನಗರ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಸರ್ವಧರ್ಮ ಪ್ರಾರ್ಥನೆ ಹಾಗೂ ಗೀತೆಗಳ ಮೂಲಕ ನಾ.ಸು. ಹರ್ಡಿಕರ್ ಯುವಜನರಲ್ಲಿ ಭಾವೈಕ್ಯತೆಯನ್ನು ಮೂಡಿಸಿ, ದೇಶದ ಒಗ್ಗಟ್ಟನ್ನು ಕಾಪಾಡಲು ಶ್ರಮಿಸಿದರು. ನಾ.ಸು ಹರ್ಡಿಕರ್ ಅವರ ದೇಶಪ್ರೇಮ ಅನನ್ಯವಾದುದು. ಅವರ ಜನ್ಮದಿನ ಆಚರಣೆಯ ಮೂಲಕ ಅವರ ಆದರ್ಶಗಳನ್ನು ಯುವಜನರಿಗೆ ತಲುಪಿಸಬೇಕು ಎಂದರು.
ಭಾರತ ಸೇವಾದಳದ ಕಾರ್ಯದರ್ಶಿ ಮಹದೇವಯ್ಯ, ಜಿಲ್ಲಾ ಸಂಘಟಕ ಅರುಣ್, ಗೃಹರಕ್ಷಕ ದಳದ ಚಿಕ್ಕಣ್ಣ ಮತ್ತು ಇತರರು ಭಾಗವಹಿಸಿದ್ದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.




