ಹುಬ್ಬಳ್ಳಿ: ಹಕ್ಕು ಪತ್ರ ವಿತರಣೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ರಾಜಗೋಪಾಲ್ ನಗರ ಕಾಲನಿಯಲ್ಲಿದ್ದು ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಸ್ಡಿಪಿಐ ವತಿಯಿಂದ ರಾಜ್ಯ ಮಟ್ಟದ ಹೋರಾಟ ಸಂಘಟಿಸಲಾಗುವುದು ಎಂದು ಎಸ್ಡಿಪಿಐ ನಾಯಕರು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ ನಗರದ ರೈಲ್ವೆ ಸ್ಟೇಷನ್ ಹತ್ತಿರ ಇರುವ ರಾಜಗೋಪಾಲ್ ನಗರದ ದಲಿತ ಸಮಾಜದ (ಮಾದಿಗ) ಕಾಲೋನಿಗೆ SDPI ಪಕ್ಷದ ನಿಯೋಗ ಭೇಟಿ ನೀಡಿತು. ಸುಮಾರು 120 ವರ್ಷಗಳಿಂದ ಇಲ್ಲಿ ನಲೆಸಿರುವ ಈ ಕುಟುಂಬಗಳಿಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸರಿಂದ ಕೀರುಕುಳವಾಗುತ್ತಿದೆ. ಮತ್ತು ಅಲ್ಲಿ ಇರುವ ಶಾಲೆಯ ಬಗ್ಗೆ ಕಾಳಜಿಯ ಕೊರತೆ ಹಾಗು ಮೂಲಭೂತ ಸೌಲಭ್ಯಗಳ ನಿರಾಕರಣೆ ಆಗಿದೆ ಎಂದು ನಿಯೋಗ ಆಪಾದಿಸಿತು.
ಹುಬ್ಬಳ್ಳಿ ನಗರ ರೈಲ್ವೆ ನಿಲ್ದಾಣದ ಪಕ್ಕದ ರಾಜಗೋಪಾಲನಗರ ಮಾದಿಗರ ಕಾಲೋನಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ 90 ಜನ ವಿದ್ಯಾರ್ಥಿಗಳಿಗೆ ಕೇವಲ ಒಬ್ಬೇ ಒಬ್ಬ ಮಾಸ್ಟರ್ ಇದ್ದಾರೆ. 1932ನೇ ಇಸವಿಯಿಂದ ಇಲ್ಲಿ ವಾಸವಾಗಿರುವ 41 ಮಾದಿಗರ ಕುಟುಂಬಗಳನ್ನ ಒಕ್ಕಲಿಬ್ಬಿಸಲು ರೈಲ್ವೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. 1932ನೇ ಇಸವಿಯಿಂದಲು ಇಲ್ಲಿ ಇವರು ವಾಸವಾಗಿರುವುದಕ್ಕೆ ಎಲ್ಲ ದಾಖಲೆಗಳು ಲಭ್ಯವಿವೆ .1959ನೇ ಇಸವಿಯಲ್ಲಿ ಇಲ್ಲಿ ಪ್ರಾರಂಭವಾಗಿರುವ ಶಾಲೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಿವೆ ಎಂದರು.
ಸ್ಥಳೀಯ ಕಾರ್ಪೊರೇಷನ್ ನಿಂದ ನೀಡಲಾಗಿರುವ ದಾಖಲೆಗಳಲ್ಲಿ ಈ ಪ್ರದೇಶವು ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ ಎಂದು ದೃಡಪಡಿಸುವ ದಾಖಲೆಗಳು ಲಭ್ಯವಿದೆ. ಆದರೂ ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಭೂ ಮಾಫಿಯಾದವರೊಂದಿಗೆ ಕೈಜೋಡಿಸಿರುವ ಮಾಜಿ ಪೊಲೀಸ್ ಮತ್ತು ರೈಲ್ವೆ ಇಲಾಖೆಯ ಕೆಲವು ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ ಸರ್ಕಾರ ಕಣ್ಣುಮುಚ್ಚಿದೆ ಎಂದು ಎಸ್.ಡಿ.ಪಿ.ಐ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್, ಅಪ್ಸರ್ ಕೊಡ್ಲಿಪೇಟೆ, ಯಮುನಪ್ಪ ಗುಣದಾಳ ಹಾಗೂ ಜಿಲ್ಲಾ ಉಪಾಧ್ಯಕ್ಷ ಡಾ. ವಿಜಯ್ ಗುಂಟ್ರಾಳ ಇದ್ದರು.




