ಈಶ್ವರ ಖಂಡ್ರೆ ವಿರುದ್ಧ ಕಿಡಿಕಾರಿದ ವಿಶ್ವೇಶ್ವರ ಹೆಗಡೆ ಕಾಗೇರಿ

3 years ago

ಬೆಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ‌ಕಾಗೇರಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿ,ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಲಾಯಿತು.

ಶೂನ್ಯವೇಳೆಯ ಕಲಾಪದಲ್ಲಿ ಸಭಾದ್ಯಕ್ಷರು ಸೂಚನೆ ನೀಡಿದ ನಂತರವೂ ಏರು ದನಿಯಲ್ಲಿ ಖಂಡ್ರೆ ಮಾತನಾಡುವುದನ್ನು ಖಂಡಿಸಿದ ಸಭಾದ್ಯಕ್ಷರು ನಿಮ್ಮಂಥವರು ಆಯ್ಕೆಯಾಗಿ ಬರುವುದು ಈ ಸದನಕ್ಕೆ ಅವಮಾನ ಎಂದು ಹೇಳಿದರು.

ಸಭಾಧ್ಯಕ್ಷರ ಮಾತಿಗೆ ತೀವ್ರ ಆಕ್ಷೇಪಿಸಿದ ಕಾಂಗ್ರೆಸ್ ಬಾಲ್ಕಿ ಜನರಿಗೆ ಮಾಡಿದ ಅವಮಾನವಿದು ಎಂದು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸಭಾಧ್ಯಕ್ಷರು ಸದನದ ಕಾರ್ಯಕಲಾಪವನ್ನು ಕೆಲಕಾಲ ಕಾಲ ಮುಂದೂಡಿದರು.

ಆಗಿದ್ದೇನು..?

ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರು, ರಾಜ್ಯದಲ್ಲಿ ಇತ್ತೀಚಿಗೆ ಕೇಳಿಬರುತ್ತಿರುವ ದ್ವೇಷಭಾಷಣ ಕುರಿತಂತೆ ಪ್ರಸ್ತಾಪಿಸಿ,ಸಚಿವರು ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಅಶಾಂತಿಗೆ ಕಾರಣವಾಗುತ್ತಿವೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಾನು ಯಾರನ್ನು ವೈಯಕ್ತಿಕವಾಗಿ ಅಗೌರವಿಸುವ ಹಾಗೂ ಟೀಕೆ ಮಾಡುವ ಉದ್ದೇಶವಿಲ್ಲ. ಕೇವಲ ರಾಜಕೀಯ ಭಾಷಣ ಮಾಡಿದ್ದೇನೆಂದು ಸ್ಪಷ್ಟಪಡಿಸಿದರು.

ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯು.ಟಿ.ಖಾದರ್, ಕೃಷ್ಣಬೈರೇಗೌಡ, ತನ್ವೀರ್ ಸೇಠ್, ಪ್ರಿಯಾಂಕ ಖರ್ಗೆ, ಈಶ್ವರಖಂಡ್ರೆ ಮತ್ತಿತರರು, ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು

ಸಚಿವರ ಉತ್ತರ ಹಾರಿಕೆಯಾಗಿದೆ. ಆರೋಪಿ ಸ್ಥಾನದಲ್ಲಿ ಇರುವವರಿಂದ ಇನ್ನೇನು ಉತ್ತರ ನಿರೀಕ್ಷಿಸಲು ಸಾಧ್ಯ ಎಂದು ವಾಗ್ದಾಳಿ ಆರಂಭಿಸಿದರು. ಆಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ಗದ್ದಲದ ನಡುವೆಯೇ ಅಶ್ವತ್ಥನಾರಾಯಣ ತಮ್ಮ ನಿಲುವು ಸಮರ್ಥಿಸುತ್ತಾ ಉತ್ತರಿಸುತ್ತಿದ್ದಾಗ ಈಶ್ವರ ಖಂಡ್ರೆ ಏರಿದ ದ್ವನಿಯಲ್ಲಿ ಮಾತನಾಡಿದರು. ಇದು ಸಭಾಧ್ಯಕ್ಷರನ್ನು ಕೆರಳಿಸಿತು. ಮಾತು ನಿಲ್ಲಿಸಿ ಕೂರುವಂತೆ ಅವರಿಗೆ ತಾಕೀತು ಮಾಡಿದರು. ಪದೇ ಪದೇ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದ ಹೊರತಾಗಿಯೂ, ಖಂಡ್ರೆ ಮಾತನಾಡುವುದನ್ನು ನಿಲ್ಲಿಸಲಿಲ್ಲ.

ಇದರಿಂದ ಸಹನೆ ಕಳೆದುಕೊಂಡ ಕಾಗೇರಿ ಅವರು, ನೀವು ಹಿರಿಯರು, ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಸಭಾಧ್ಯಕ್ಷರು ಹೇಳಿದ ಮೇಲೂ ನೀವು ಪೀಠಕ್ಕೆ ಗೌರವ ಕೊಡದೆ ಮಾತನಾಡುತ್ತಿದ್ದೀರಿ. ಇದೇನಾ ನೀವು ಸಭಾಧ್ಯಕ್ಷರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು.

ನಾನು ಇದುವರೆಗೆ ಸಹನೆ ಕಳೆದುಕೊಳ್ಳದೇ ಮಾತನಾಡಿದ್ದೇನೆ. ಪೂರ್ಣ ಅಧಿಕಾರ ಚಲಾಯಿಸುವ ಅವಕಾಶ ಮಾಡಿಕೊಡಬೇಡಿ. ನನ್ನನ್ನು ಅನಗತ್ಯವಾಗಿ ಎಳೆದು ಮಾತನಾಡಿಸುತ್ತೀರಿ. ಕೇಳುವ ಸೌಜನ್ಯವಿಲ್ಲವೆ? ಪದೇ ಪದೇ ಇದೇ ರೀತಿ ಮುಂದುವರೆದರೆ, ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.

Leave a Reply