ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆ ಖಂಡಿಸಿ ಸಿಡಿದೆದ್ದ ಜಿಲ್ಲಾ ಕಸಾಪ ಉಪಾಧ್ಯಕ್ಷ!

3 years ago

ಸಾಹಿತ್ಯಾಕ್ತರ ಕೊರತೆಯಲ್ಲಿ ನಡೆದ ತಾಲ್ಲೂಕು ಸಮ್ಮೇಳನ

ಶಾಲಾ ಮಕ್ಕಳನ್ನು ತಂದು ಕೂರಿಸಿದ ಸಂಘಟಕರು: ಡಿಸಿಗೆ ದೂರು

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ಆಯೋಜನೆ ಮಾಡಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆ ವಿರುದ್ದ ಕಸಾಪ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರ ವಿರುದ್ದ ಸಮ್ಮೇಳನ ಆರಂಭವಾಗುತ್ತಿದ್ದಂತೆ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮಾದಾಪುರ ರವಿಕುಮಾರ್ ಆಕ್ರೋಶ ಗೊಂಡು ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡಿದ ಪ್ರಸಂಗ ನಡೆಯಿತು.

ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಆಯೋಜನೆ ಮಾಡಿದ್ದ ಸಮ್ಮೇಳನದಲ್ಲಿ ಬೆರಳಣಿಕೆಯಷ್ಟು ಮಂದಿ ಭಾಗವಹಿಸಿದ್ದರು. ಖಾಲಿ ಕುರ್ಚಿಗಳು ಸ್ವಾಗತ ಮಾಡುತ್ತಿದ್ದವು. ಅಲ್ಲದೇ, ಸಮ್ಮೇಳನದ ಬಗ್ಗೆ ಮಾಹಿತಿ ನೀಡಿಲ್ಲ. ಆಹ್ವಾನ ಪತ್ರಿಕೆಯನ್ನು ಸದಸ್ಯರಿಗೆ ನೀಡಿಲ್ಲ. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳಷ್ಟೇಕ್ಕೆ ಸಿಮೀತವಾದ ಸಮ್ಮೇಳನ ಇದಾಗಿದೆ. ಸಾಹಿತ್ಯಕ್ತರ ಬದಲು ಶಾಲಾ ಹಾಗು ಕಾಲೇಜು ಮಕ್ಕಳನ್ನು ಬಲವಂತವಾಗಿ ತಂದು ಕೂರಿಸಿದ್ದಾರೆ ಎಂದು ಆರೋಪಿಸಿ ರವಿಕುಮಾರ್ ಜಿಲ್ಲಾಧ್ಯಕ್ಷ ಶೈಲಕುಮಾರ್, ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ವಿರುದ್ದ ಹರಿಹಾಯ್ದರು.

ಸಮ್ಮೇಳನವನ್ನು ವಿದ್ವಾಂಸರಾದ ಡಾ. ಪ್ರಧಾನ್ ಗುರುದತ್ತ ಉದ್ಗಾಟನೆ ಮಾಡುತ್ತಿದ್ದಂತೆ ಸಭಿಕರ ಸಾಲಿನ ಮುಂಬದಿ ಕುಳಿತಿದ್ದ ಮಾದಾಪುರ ರವಿಕುಮಾರ್ ಎದ್ದು ನಿಂತು ಏರಿದ ಧ್ವನಿಯಲ್ಲಿ ಅಧ್ಯಕ್ಷರನ್ನು ಪ್ರಶ್ನೆ ಮಾಡಲಾರಂಭಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ಆಯೋಜಕರು ಹಾಗು ಪೊಲೀಸರು ಸಮಾಧಾನ ಪಡಿಸಲು ಮುಂದಾದರು. ಆದರೆ ಇದ್ಯಾವುದನ್ನು ಲೆಕ್ಕಿಸಿದೇ ತಮ್ಮ ಅಸಮಾಧಾನವವನ್ನು ಹೊರ ಹಾಕಿದ ರವಿಕುಮಾರ್, ಜಿಲ್ಲಾಧ್ಯಕ್ಷ ಶೈಲಕುಮಾರ್, ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ವರ್ತನೆಯ ಹಾಗು ಏಕಪಕ್ಷೀಯ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಕಸಾಪ ಜಿಲ್ಲಾ ಉಪಾಧ್ಯಕ್ಷನಾಗಿರುವ ನನ್ನನ್ನೇ ಸಮ್ಮೇಳನಕ್ಕೆ ಕರೆದಿಲ್ಲ. ಪರಿಷತ್ ಇತರೇ ಪದಾಧಿಕಾರಿಗಳಿಗೆ ಅಹ್ವಾನವಿಲ್ಲ. ಇನ್ನು ಸದಸ್ಯರನ್ನು ಇವರು ಆಹ್ವಾನಿಸಿದ್ದಾರಾ ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಕಸಾಪ ಅಧ್ಯಕ್ಷರಾದ ಶೈಲಕುಮಾರ್ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾಗಿದ್ದಾರೆ. ಯಾವುದೇ ಸಭೆಗಳನ್ನು ನಡೆಸದೇ ತಮ್ಮ ಇಷ್ಟಬಂದಂತೆ ಸಮ್ಮೇಳನ ಹಾಗು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ ಕುಟುಂಬ ಹಾಗೂ ಜಾತಿಯ ಪರಿಷತ್ ಆಗಿ ಪರಿವರ್ತನೆಯಾಗುತ್ತಿದೆ. ಜಿಲ್ಲಾ ಹಾಗೂ ತಾಲೂಕು ಪರಿಷತ್‌ಅನ್ನು ಏಕ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದು, ಅನಾನುಭವಿ, ಆಯೋಗ್ಯ ಅಧ್ಯಕ್ಷರ ಲಾಭವನ್ನು ಮಾಜಿ ಅಧ್ಯಕ್ಷರೊಬ್ಬರು ಬಳಸಿಕೊಂಡು ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ರವಿಕುಮಾರ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೊಲೀಸರು ಮತ್ತು ಕೆಲವು ಹಿತೈಷಿಗಳು ಸಮಾಧಾನ ಪಡಿಸಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟರು.

ಸಮ್ಮೇಳನದಲ್ಲಿ ಶಾಲಾ ಮಕ್ಕಳು : ಸಾಹಿತ್ಯಕ್ತರ ಕೊರತೆಯನ್ನು ಗಮನಿಸಿದ ಸಂಘಟಕರು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಮಕ್ಕಳನ್ನು ಬಲವಂತವಾಗಿ ತಂದು ಕೂರಿಸಿದ್ದರು. ಪರೀಕ್ಷೆ ಇದ್ದರು ಸಹ ಶಾಲಾ ಮಕ್ಕಳನ್ನು ಸಮ್ಮೇಳನದಲ್ಲಿ ಭಾಗವಹಿಸಿರುವ ಬಗ್ಗೆ ಪೋಷಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದರು.

Leave a Reply