ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ನಿಧನ ಕಸಾಪ ಸಂತಾಪ

3 years ago

ಬೆಂಗಳೂರು: ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳೆತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಅವರ ನಿಧನದ ಸುದ್ದಿ ಅತ್ಯಂತ ಬೇಸರ ತರಿಸಿದೆ. ಕನ್ನಡದ ಹಿರಿಮೆಯೂ ಆಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಅವರ ಅಗಲಿಕೆ ಕನ್ನಡ ಚಿತ್ರರಂಗದ ಹಳೆಯ ತಲೆಮಾರಿನ ಪ್ರಮುಖ ಕೊಂಡಿಯನ್ನು ಕಳಚಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಸಂತಾಪ ಸೂಚಿಸಿದ್ದಾರೆ.

ಭಗವಾನ್ ಹುಟ್ಟಿದ್ದು 1933ರ ಜುಲೈ 3ರಂದು, ಅವರು ಮತ್ತು ದೊರೈ ಇಬ್ಬರೂ ಮೈಸೂರಿನವರೇ. ಭಗವಾನ್ ಮೊದಲಿಂದಲೂ ಅಭಿನಯದತ್ತ ಆಸಕ್ತಿ ಇಟ್ಟುಕೊಂಡವರು. ಶಾಲಾ ದಿನಗಳಲ್ಲಿ ಸ್ತ್ರೀ ಪಾತ್ರಗಳಿಗೆ ಪ್ರಸಿದ್ಧರಾದವರು. ಸಾಹಿತ್ಯದತ್ತ ಮೊದಲಿಂದಲೂ ಅಭಿರುಚಿ. ಪ್ರೊ.ಜಿ.ವೆಂಕಟಸುಬ್ಬಯ್ಯನವರ ನೆಚ್ಚಿನ ಶಿಷ್ಯರು, ನಟನಾಗಬೇಕು ಎಂಬ ಹಂಬಲದಿಂದ ಬಂದ ಅವರಿಗೆ ‘ಮಂಗಳ ಮಹೂರ್ತ’ಚಿತ್ರದಲ್ಲಿ ನಾಯಕರಾಗುವ ಅವಕಾಶ ಸಿಕ್ಕರೂ ಚಿತ್ರ ಯಶಸ್ವಿಯಾಗಲಿಲ್ಲ. ಪ್ರಕಾಶ ಪಿಕ್ಚರ್ಸ್ ನಲ್ಲಿ ಮಾರಾಟ ಪ್ರತಿನಿಧಿಯಾಗಿ ನಾಡನ್ನೆಲ್ಲಾ ಸುತ್ತಿದರು. ಈ ಅನುಭವ ಅವರಿಗೆ ಜನರ ನಾಡಿಮಿಡಿತವನ್ನು ಅರಿಯುವಲ್ಲಿ ನೆರವಾಯಿತು. ಕನಸನ್ನು ಕಟ್ಟಿಕೊಂಡು ಮದ್ರಾಸಿಗೆ ಹೋದ ಅವರಿಗೆ ‘ಜಗಜ್ಯೋತಿ ಬಸವೇಶ್ವರ’ಸೆಟ್ನಲ್ಲಿ ದೊರೈ ಅವರ ಪರಿಚಯವಾಯಗಿತ್ತು. ಟಿ.ವಿ.ಸಿಂಗ್ ಠಾಕೂರ್ ಕನ್ನಡಕ್ಕೆ ಕಾದಂಬರಿಯಾಧಾರಿತ ಸಿನಿಮಾ ಎನ್ನುವ ಕಲ್ಪನೆ ಪರಿಚಯಸಿದ ಪ್ರಮುಖ ನಿರ್ದೇಶಕರು. ಅವರ ಎಡಗೈ ಮತ್ತು ಬಲಗೈ ಎಂದೇ ದೊರೈ-ಭಗವಾನ್ ಪ್ರಸಿದ್ದರು. ಸಿಂಗ್ ಠಾಕೂರರಿಗೆ ತ.ರಾ.ಸು ಅವರ ‘ಚಂದವಳ್ಳಿಯ ತೋಟ’ಕಾದಂಬರಿಯನ್ನು ಪರಿಚಯಿಸಿ ಅದು ಸಿನಿಮಾ ಆಗಲು ಕಾರಣಕರ್ತರೇ ಭಗವಾನ್, ಅಷ್ಟೇ ಅಲ್ಲ ಈ ಚಿತ್ರಕ್ಕೆ ಸಂಭಾಷಣೆ ಬರೆದ ತ.ರಾ.ಸು ಅವರ ಮೋಡಿ ಅಕ್ಷರಗಳನ್ನು ಎಲ್ಲರಿಗೂ ಅರ್ಥವಾಗ ಬಲ್ಲ ಸುಂದರ ಅಕ್ಷರಗಳಿಗೆ ಮಾರ್ಪಾಟು ಮಾಡಿದವರೂ ಅವರೇ! ಭಗವಾನ್ ಅವರ ಹಸ್ತಾಕ್ಷರ ಕೊನೆಯವರೆಗೂ ಬಲು ಸುಂದರವಾಗಿತ್ತು, ಮುತ್ತು ಪೋಣಿಸಿದಂತೆ ಬರೆಯುತ್ತಿದ್ದರು. ತಮ್ಮ ಚಿತ್ರಗಳ ಸ್ಕಿಪ್ಟ್ ಅನ್ನು ಅವರೇ ಸುಂದರ ಅಕ್ಷರಗಳಲ್ಲಿ ಹತ್ತಾರು ಪ್ರತಿ ಮಾಡಿ ಎಲ್ಲರಿಗೂ ನೀಡುತ್ತಿದ್ದರು. ಮೊದಲಿಂದಲೂ ಕನ್ನಡ ಕಾದಂಬರಿಗಳನ್ನು ಓದುತ್ತಿದ್ದ ಭಗವಾನ್ ಅ.ನ.ಕೃ ಅವರ ‘ಸಂಧ್ಯಾರಾಗ’ವನ್ನು ಬೆಳ್ಳಿತೆರೆಗೆ ತಂದು ಎಲ್ಲರ ಗಮನ ಸೆಳೆದಿದ್ದರು ಎಂದಿದ್ದಾರೆ.

ಭಗವಾನ್ ಅವರು ತಮಗೆ ಆತ್ಮೀಯರಾಗಿದ್ದರು. ಅನೇಕ ಬಾರಿ ಅವರನ್ನು ಭೇಟ್ಟಿಯಾದ ಸಂದರ್ಭಗಳಲ್ಲಿ ಏನಾದರೂ ಹೊಸತನವನ್ನು ಮಾಡುತ್ತಲೇ ಇರಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಭಗವಾನ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಚಟುವಟಿಕೆಗಳನ್ನು ಗಮನಿಸಿ ಸಂತಸ ವ್ಯಕ್ತ ಪಡಿಸಿದ್ದರು. 90 ವರ್ಷ ವಯಸ್ಸಿನ ಇವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಕನ್ನಡ ರಂಗಭೂಮಿ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಬೆಳ್ಳಿ ಪರದೆಯನ್ನು ಶ್ರೀಮಂತಗೊಳಿಸಿದ ಭಗವಾನ್ ಅವರು ತಮ್ಮ 65 ವರ್ಷಗಳ ಸುದೀರ್ಘ ಸಿನಿಮಾ ಸಾಹಸಗಳಲ್ಲಿ 28ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಬೆಳ್ಳಿ ಪರದೆಗೆ ತಂದ ಕೀರ್ತಿ ಹೊಂದಿದ್ದರು ಎಂದು ನೆನಸಿಕೊಂಡಿದ್ದಾರೆ.

ಭಗವಾನ್ ನಿರ್ದೇಶನದಲ್ಲಿ ಅರಳಿದ ʻಕಸ್ತೂರಿ ನಿವಾಸʼ, ʻಸಂಧ್ಯಾರಾಗʼ, ʻಬಯಲುದಾರಿʼ, ʻಹೊಸ ಬೆಳಕುʼ, ʻಬೆಂಕಿಯ ಬಲೆʼ ʼಜೀವನ ಚೈತ್ರʼ ಮುಂತಾದ ಹಲವು ಸಿನಿಮಾಗಳು ಈಗಲೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಸದಾ ಹಚ್ಚಹಸಿರಾಗಿ ಇವೆ. ʻಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್ʼನ ಪ್ರಾಂಶುಪಾಲರಾಗಿ ಇವರು ತಮ್ಮ ತಿಳಿವಳಿಕೆ, ಜ್ಞಾನ ಮತ್ತು ಅನುಭವವನ್ನು ಹೊಸ ತಲೆಮಾರಿನ ತಮ್ಮ ಶಿಷ್ಯರಿಗೆ ವರ್ಗಾಯಿಸುವ ಮೂಲಕ ಕನ್ನಡದ ಜ್ಞಾನವನ್ನು ಹೆಚ್ಚಿಸಿದ್ದಾರೆ. ಆ ಮೂಲಕ ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಎಂದಿದ್ದಾರೆ. ತಮ್ಮ ೮೬ನೆಯ ವಯಸ್ಸಿನಲ್ಲಿ ʼಆಡುವ ಗೊಂಬೆʼ ಚಿತ್ರವನ್ನು ನಿರ್ದೇಶಿಸಿ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದರು ಎಂದು ತಿಳಿಸಿದ್ದಾರೆ.

ʻಜೇಡರ ಬಲೆʼ, ʻಗೋವಾದಲ್ಲಿ ಸಿಐಡಿ 999ʼ, ʻಆಪರೇಷನ್ ಜಾಕ್ಪಾಟ್ʼ ರೀತಿಯ ಪತ್ತೆದಾರಿ ಸಿನಿಮಾಗಳು ಸೇರಿದಂತೆ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾಗಳನ್ನು ಕನ್ನಡಕ್ಕೆ ಐವತ್ತು ವರ್ಷಕ್ಕೂ ಹಿಂದೆಯೇ ನೀಡಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದರು. ಇವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಇವರಿಂದ ಇನ್ನಷ್ಟು ಕನ್ನಡದ ಸೇವೆ ನಡೆಯಬೇಕಿತ್ತು ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ಹಾಗೂ ಕನ್ನಡ ನಾಡಿಗೆ ತುಂಬಲಾರದ ನಷ್ಟ. ಇವರ ಅಗಲಿಕೆಯಿಂದ ಉಂಟಾದ ನಿರ್ವಾತ ತುಂಬುವುದು ಕಷ್ಟಸಾಧ್ಯ. ಭಗವಾನ್ ಅವರನ್ನು ಕಳೆದುಕೊಂಡ ಸಮಸ್ತ ಕನ್ನಡ ನಾಡಿಗೆ, ಅವರ ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಜಗತ್ತಿಗೆ ಅಪಾರ ಹಾನಿಯಾಗಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.

Leave a Reply