ಇಸ್ರೇಲಿನ ಸದ್ಯದ ಸ್ಥಿತಿಗತಿ

5 years ago

ನಾಜೀ ಜರ್ಮನಿಯಲ್ಲಿ ಒಂದು ಊರಿನಲ್ಲಿ ಹಿಟ್ಲರ್ ನ ಸೈನಿಕರು ಊರಿನಲ್ಲಿ ಒಂದು ಕಡೆಯಿಂದ ಯಹೂದಿಗಳನ್ನು ಕೊಲ್ಲುತ್ತಾ ಬರುತ್ತಿದ್ದರು. ಇದನ್ನರಿತ ಕೆಲವು ಯಹೂದಿಗಳು ತಲೆಮರೆಸಿಕೊಂಡು ಹೋಗಿ ಜೀವ ಉಳಿಸಿಕೊಳ್ಳಲು ಒಂದು ಚರ್ಚ್ ನ ಒಳಗೆ ಹೊಕ್ಕರು. ಆ ದಿನ ಭಾನುವಾರವಾಗಿದ್ದರಿಂದ ಚರ್ಚ್ ನ ತುಂಬ ಕ್ರಿಶ್ಚಿಯನ್ನರೇ ತುಂಬಿದ್ದರು. ಕೆಲವು ಯಹೂದಿಗಳು ಚರ್ಚ್ ನ ಒಳಗೆ ಅಡಗಿರುವ ಸುದ್ದಿ ಹೇಗೋ ಸೈನಿಕರಿಗೆ ಗೊತ್ತಾಯಿತು. ಅವರು ನೇರವಾಗಿ ಚರ್ಚ್ ಗೆ ಬಂದು “ಪ್ರಾರ್ಥನೆಯನ್ನು ನಿಲ್ಲಿಸಿ”ಎಂದು ಮುಖ್ಯಪಾದ್ರಿಗೆ ಹೇಳಿದರು. ಸೇನಾ ಮುಖ್ಯಸ್ಥ ಚರ್ಚ್ ನ ವೇದಿಕೆಯನ್ನೇರಿ “ನೀವು ನಮ್ಮನ್ನು ಯಾಮಾರಿಸಲಾರಿರಿ. ನೀವಿಲ್ಲಿ ಅಡಗಿರುವುದು ನಮಗೆ ಗೊತ್ತಾಗಿದೆ. ಇಲ್ಲಿ ಯಾರಾದರೂ ಯಹೂದಿಗಳಿದ್ದರೆ ಹೊರಗೆ ಹೋಗಿ ಸಾಲಾಗಿ ನಿಲ್ಲಿರಿ. ನಮ್ಮ ಆಜ್ಞೆ ಪಾಲಿಸಿದರೆ ಕೊನೆಯ ಪಕ್ಷ ನಿಮ್ಮ ಜೀವವಾದರೂ ಉಳಿಯುತ್ತದೆ. ಯಾರಾದರೂ ನಮಗೆ ಮೋಸ ಮಾಡಲು ಪ್ರಯತ್ನಿಸಿದರೆ ಅವರ ಹೆಣ ಬೀಳುತ್ತದೆ”ಎಂದು ಬೆದರಿಸಿದ. ಯಹೂದಿಗಳು ಒಬ್ಬೊಬ್ಬರಾಗಿ ಹೊರಗೆ ಬಂದು ಸಾಲಿನಲ್ಲಿ ನಿಂತರು. ಚರ್ಚ್ ನಲ್ಲಿ ನೆರೆದಿದ್ದ ಕ್ರಿಶ್ಚಿಯನ್ನರಿಗೆಲ್ಲ ಗಾಬರಿಯಾಗುವ ಒಂದು ಘಟನೆ ನಡೆಯಿತು. ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸಲಾಗಿದ್ದ ಯೇಸುವಿನ ಮೂರ್ತಿ ಕಾಣೆಯಾಗಿತ್ತು. ಅವನೂ ಸಹ ಯಹೂದಿಯೇ ಆಗಿದ್ದರಿಂದ ಅವನೂ ಹೊರಗೆ ಸಾಲುಗಟ್ಟಿದ್ದ ಜನರ ಮಧ್ಯೆ ನಿಂತಿದ್ದ.

ಪಶ್ಚಿಮದ ಧರ್ಮಗಳು ಶತಶತಮಾನಗಳಿಂದಲೂ ಅದೇಕೆ ಒಂದೇ ಸಮನೆ ಯುದ್ಧನಿರತವಾಗಿವೆ, ಹುಚ್ಚು ಹಿಡಿದವರಂತೆ ಒಬ್ಬರನ್ನೊಬ್ಬರು  ಕೊಲ್ಲುತ್ತಿದ್ದಾರೆ ಎಂಬುದು ಸುಲಭವಾಗಿ ಅರ್ಥವಾಗುವ ವಿಷಯವಲ್ಲ. ನಮ್ಮ ಪರಂಪರೆ ಜನ್ಮ ನೀಡುವ ಅತಿದೊಡ್ಡ ಅವತಾರ ಪುರುಷರೂ ಸಹ  ಕೆಲವೊಮ್ಮೆ ಬಹಳ ಬಾಲಿಶವಾಗಿ ವರ್ತಿಸುತ್ತಾರೆ. ಯೇಸುಕ್ರಿಸ್ತ ತಾನು ದೇವರ ಏಕಮಾತ್ರ ಪುತ್ರ ಎಂದು ಹೇಳಿಕೊಳ್ಳುತ್ತಿದ್ದ. ಸಹಜವಾಗಿಯೇ ಇಂತಹವನು ಬುದ್ಧ ಅಥವಾ ಮಹಾವೀರ ಅಥವಾ ಲಾವ್ತ್ಸು, ಬೋಧಿಧರ್ಮ ಮುಂತಾದವರನ್ನು ತನ್ನ ಒಡಹುಟ್ಟಿದವರೆಂದಾಗಲಿ, ತನ್ನ ದಾಯಾದಿ ಸಹೋದರರೆಂದಾಗಲಿ ಒಪ್ಪಿಕೊಳ್ಳಲು ಸಿದ್ಧನಿರುವುದಿಲ್ಲ. ಇವರ ಕುಟುಂಬ ಬಹಳ ಮಡಿವಂತಿಕೆಯ ಕುಟುಂಬ ಮಾತ್ರವಲ್ಲ, ಬಹಳ ವಿಚಿತ್ರವಾದ ಕುಟುಂಬ ಎನಿಸುತ್ತದೆ.

ಯೇಸುವಿನ ಕುಟುಂಬದಲ್ಲಿ ಮಹಿಳೆಯರೇ ಕಾಣಸಿಗುವುದಿಲ್ಲ. ಮಹಿಳೆಯೇ ಕುಟುಂಬದ ಕೇಂದ್ರವಾಗಿದ್ದಾಳೆ. ಹೆಂಗಸರಿಲ್ಲದ ಮನೆ ಒಂದು ಕಟ್ಟಡ ಎನಿಸಿಕೊಳ್ಳಬಹುದೇ ವಿನಃ ಕುಟುಂಬ ಎನಿಸುವುದಿಲ್ಲ. ಆದರೆ ಇವರ ಕುಟುಂಬದ ಮೂವರು ಸದಸ್ಯರು ಯಾರೆಂದರೆ ತಂದೆಯಾದ ದೇವರು, ಮಗನಾದ ಯೇಸುಕ್ರಿಸ್ತ ಮತ್ತು ಮೂರನೆಯ ಒಬ್ಬ ಆಸಾಮಿ ಅಂದರೆ ಪವಿತ್ರಾತ್ಮ, ಈ ಪವಿತ್ರಾತ್ಮ ಗಂಡೋ ಹೆಣ್ಣೋ ಒಂದೂ ಗೊತ್ತಾಗುವುದಿಲ್ಲ. ಈ ಮೂವರು, ಈ ತ್ರಿಮೂರ್ತಿಗಳು, ಸೇರಿಕೊಂಡು ಇಂದು ಇಡೀ ಜಗತ್ತನ್ನಾಳುತ್ತಿದ್ದಾರೆ. ಸ್ವಲ್ಪ ವಿವೇಚನೆಯುಳ್ಳ ಕ್ರಿಶ್ಚಿಯನ್ನರು ಈ ತ್ರಿಮೂರ್ತಿಗಳಲ್ಲಿ ಹೆಣ್ಣಿಗೆ ಸ್ಥಾನವೇ ಇಲ್ಲವಲ್ಲ ಎಂದು ಕೇಳುತ್ತಿದ್ದಾರೆ. ಆದರೆ ಪುರುಷ ದುರಭಿಮಾನದ ಹೆಣ್ಣಿಗೆ ಸ್ಥಾನ ನೀಡಲು ಒಪ್ಪುವುದಿಲ್ಲ. ಆ ಪವಿತ್ರ ಕುಟುಂಬದಲ್ಲಿ ಯೇಸುವಿಗೆ ಜನ್ಮ ನೀಡಿದ ತಾಯಿ ಮೇರಿಗೂ ಸಹ ಜಾಗವಿಲ್ಲ. ಇವರು ತಮ್ಮ ಬಳಗದವರನ್ನು ಬಿಟ್ಟರೆ ಅನ್ಯರಿಗೆ ದೈವೀಕವಾದ ಸ್ಥಾನ ನೀಡುವುದಿಲ್ಲ.

ಇವರ ಈ ಧೋರಣೆಯೇ ಇಂದು ಇಸ್ರೇಲಿನಲ್ಲಿ ಒಂದು ದೊಡ್ಡ ತಲೆನೋವಾಗಿ ಕೂತಿದೆ. ಇಂದು ಇಡೀ ಮಧ್ಯಪೂರ್ವ ಏಷ್ಯಾದಲ್ಲಿ ಇಸ್ಲಾಂನ ಪ್ರಭಾವವಿದೆ. ಆದರೆ ಇಸ್ಲಾಂ ಹುಟ್ಟಿದ್ದು ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ. ಕ್ರಿಶ್ಚಿಯಾನಿಟಿಗೆ ಅದಕ್ಕಿಂತಲೂ ಪ್ರಾಚೀನ ಇತಿಹಾಸವಿದೆ, ಕ್ರಿಶ್ಚಿಯಾನಿಟಿ ಎರಡು ಸಾವಿರ ವರ್ಷಗಳಷ್ಟು ಹಳೆಯದು. ಮಧ್ಯಪೂರ್ವ ಏಷ್ಯಾದ ಅರೆಬಿಕ್ ಪ್ರಪಂಚದಲ್ಲಿ ಮುಸಲ್ಮಾನರಿಗಿಂತಲೂ ಹಿಂದೆ ಯಹೂದಿಗಳು ನೆಲೆಸಿದ್ದರು. ಆಮೇಲೆ ಕ್ರಿಶ್ಚಿಯನ್ನರು ಬಂದು ನೆಲೆಸಲಾರಂಭಿಸಿದರು.

ಅಲ್ಲಿ ಒಂದು ಕಲ್ಲಿನ ಗುಮ್ಮಟವಿದೆ. ಅದನ್ನು ʼಡೂಮ್ ಆಫ್ ರಾಕ್ʼ ಎಂದು ಕರೆಯುತ್ತಾರೆ. ಅದು ಜೆರುಸಲೇಮ್ ನಲ್ಲಿ ಸೋಲೋಮಾನ್ ದೊರೆ ಕಟ್ಟಿಸಿದ ಪ್ರಧಾನ ಯಹೂದೀ ದೇವಾಲಯದ ಮುಖ್ಯಭಾಗ. ಈ ದೇವಸ್ಥಾನವನ್ನು ಯಹೂದ್ಯೇತರ ಶಕ್ತಿಗಳು ಬಹಳ ಹಿಂದೆಯೇ ಧ್ವಂಸ ಮಾಡಿದ್ದವಾದರೂ ಕಲ್ಲು ಬಂಡೆ ಮಾತ್ರ ಭಗ್ನಗೊಳ್ಳದೆ ಹಾಗೆಯೇ ಉಳಿಯಿತು. ಅದನ್ನೇ ಇಂದು ʼಡೂಮ್ ಆಫ್ ರಾಕ್ʼ ಎಂದು ಕರೆಯುವುದು. ಈಗ ಯಹೂದಿಗಳು ಅದು ತಮ್ಮ ಪವಿತ್ರ ಯಾತ್ರಾಸ್ಥಳವೆಂದು ಹೇಳುತ್ತಿದ್ದಾರೆ. ಏಕೆಂದರೆ ಜೆರುಸಲೇಮ್ ನ ಪ್ರಧಾನ ದೇವಾಲಯವಿದ್ದ ಜಾಗವದು.

ಇನ್ನು ಕ್ರಿಶ್ಚಿಯನ್ನರೂ ಯೇಸುವನ್ನು ಈ ಶಿಲೆಯ ಮೇಲೆಯೇ ಶಿಲುಬೆಗೇರಿಸಿದ್ದು, ಹಾಗಾಗಿ ಇದು ನಮಗೆ ಸೇರಿದ್ದು ಎನ್ನುತ್ತಾರೆ. ಇವರಿಬ್ಬರು ಸಾಲದೆಂದು ಮೂರನೆಯ ಒಬ್ಬ ಪ್ರತಿಸ್ಪರ್ಧಿಯೂ ಈ ಶಿಲೆ ತಮ್ಮ ಪೂಜಾಸ್ಥಳವೆಂದು ಹೇಳುತ್ತಾರೆ.

ಯೇಸು ತೀರಿಕೊಂಡು ಆರುನೂರು ವರ್ಷಗಳಾದ ಮೇಲೆ ಪೈಗಂಬರ್ ಅರಬ್ ಜಗತ್ತಿನಲ್ಲಿ ಹೊಸ ಧರ್ಮವನ್ನು ಸ್ಥಾಪಿಸಿದ. ಏಕೆಂದರೆ ಅಲ್ಲಿಯವರೆಗೆ ಅರಬ್ಬರಿಗೆ ಅವರದ್ದೇ ಆದ ಧರ್ಮವಿರಲಿಲ್ಲ. ಅರಬ್ಬರು ಅಲೆಮಾರಿ ಜನಾಂಗವಾಗಿದ್ದರು, ಪೈಗಂಬರ್ ಅರಬ್ಬರನ್ನೆಲ್ಲ ಒಗ್ಗೂಡಿಸಿ ಇಸ್ಲಾಂ ಎಂಬ ಹೊಸ ಧರ್ಮ ಸ್ಥಾಪಿಸಿದ. ಪೈಗಂಬರ್ ತಾನೇ ಸ್ವತಃ ಓರ್ವ ಅರಬ್ಬನಾಗಿದ್ದ. ಸಹಜವಾಗಿಯೇ ಅರಬ್ಬರು ಅವನಿಂದ ಪ್ರಭಾವಿತರಾದರು. ಪೈಗಂಬರ್ ತನ್ನ ಇಡೀ ಆಯುಷ್ಯವನ್ನು ಯುದ್ಧದಲ್ಲಿ ಕಳೆದುಬಿಟ್ಟ. ಅವನ ಬದುಕಿನಲ್ಲಿ ಯುದ್ಧವಿರದ ಒಂದೇ ಒಂದು ದಿನವಿರಲಿಲ್ಲ. ವಿಪರ್ಯಾಸವೆಂದರೆ ಅವನ ಖಡ್ಗದ ಮೇಲೆ ಶಾಂತಿಯೇ ನನ್ನ ಸಂದೇಶ ಎಂದು ಕೆತ್ತಲಾಗಿತ್ತು. ಆದರೆ ಪೈಗಂಬರನ ಶಾಂತಿಗೆ ಕೆಲವು ಷರತ್ತು ನಿಬಂಧನೆಗಳಿದ್ದವು. ಇಡೀ ಜಗತ್ತು ಇಸ್ಲಾಂಗೆ ಮತಾಂತರವಾದಾಗಲಷ್ಟೇ ಜಗತ್ತಿನಲ್ಲಿ ಶಾಂತಿಸ್ಥಾಪನೆ ಆಗುತ್ತದಂತೆ! ಶಾಂತಿ ಸ್ಥಾಪನೆಗಾಗಿ ಶಾಂತಿ ದೂತನು ತನ್ನ ಇಡೀ ಜೀವಿತವನ್ನು ಕೊಲೆ, ರಕ್ತಪಾತಗಳಿಗೆ ಮೀಸಲಿಡುವುದೇ!?

ಅವನು ಈ ಭೂಮಿಯ ಮೇಲಿನಿಂದ ನಿರ್ಗಮಿಸುವ ಮುನ್ನ ಒಂದು ದೊಡ್ಡ ತಲೆನೋವನ್ನು ಸೃಷ್ಟಿಸಿಯೇ ನಿರ್ಗಮಿಸಿದ. ಅವನಿಗೂ ಮುನ್ನ ಬೇಕಾದಷ್ಟು ಪ್ರವಾದಿಗಳು, ಮಸೀಹಾಗಳು, ದೇವದೂತರುಗಳು ಸತ್ತು ಮಣ್ಣಾಗಿ ಹೋಗಿದ್ದರು. ಆದರೆ ಅವನು ತನ್ನದೇ ವಿಶಿಷ್ಟ ರೀತಿಯಲ್ಲಿ ತನ್ನ ಸಾವನ್ನು ಆಯ್ಕೆ ಮಾಡಿಕೊಂಡ! ಪೈಗಂಬರ್ ಸಾಧಾರಣ ಹುಲುಮಾನವರಂತೆ ಸಾಯಲಿಲ್ಲ. ಅವನು ಸ್ವರ್ಗಲೋಕಕ್ಕೆ ಸಜೀವವಾಗಿಯೇ ಹೊರಟು ಹೋದ. ಅದೂ ಒಬ್ಬನೇ ಅಲ್ಲ, ತಾನು ಕುಳಿತಿದ್ದ ಕುದುರೆಯ ಸಮೇತ ಹಾರಿ ಸ್ವರ್ಗಲೋಕದೊಳಗೆ ಪ್ರವೇಶಿಸಿದ. ಹಾಗೆ ಗಗನಮಾರ್ಗದಲ್ಲಿ ತೆರಳುವ ಮುನ್ನ ಆ ಕಲ್ಲು ಬಂಡೆಯ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿದ್ದನಂತೆ. ಇವನಿಗೆ ವಿಶ್ರಾಂತಿ ಪಡೆಯಲು ಬೇರೆ ಯಾವ ಜಾಗವೂ ಸಿಗಲಿಲ್ಲವೇ? ಈ ರೀತಿ ಆ ಬಂಡೆ ಮೂರೂ ಧರ್ಮಗಳ ನಡುವಿನ ಘರ್ಷಣೆಯ ಕೇಂದ್ರವಾಗಿದೆ. ಯಹೂದಿಗಳು ಅದು ತಮ್ಮದೆಂದು ಹೇಳುತ್ತಾರೆ, ಅದಕ್ಕಾಗಿ ಅವರು ಪ್ರಾಣ ನೀಡಲು, ಪ್ರಾಣ ತೆಗೆಯಲೂ ಸಿದ್ಧ. ಆ ಬಂಡೆಯನ್ನು ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಲಕ್ಷಾಂತರ ಯಹೂದಿಗಳು ಪ್ರಾಣ ತೆತ್ತಿದ್ದಾರೆ. ಕ್ರಿಶ್ಚಿಯನ್ನರು ಶತಶತಮಾನಗಳಿಂದ ಅಲ್ಲಿಗೆ ಕ್ರೂಸೇಡ್ ಸೇನಾ ಪಡೆಯನ್ನು ಕಳುಹಿಸಿ ರಕ್ತಪಾತ ನಡೆಸುತ್ತಿದ್ದಾರೆ. ಆ ಇಡೀ ಪ್ರದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು ಅವರೂ ಸಹ ಅದು ತಮಗೆ ಸೇರಿದ ಬಂಡೆ ಎನ್ನುತ್ತಿದ್ದಾರೆ.

ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಆ ಬಂಡೆಗಾಗಿ ಈ ಮೂರೂ ಧರ್ಮೀಯರ ನಡುವೆ ಕೊಲೆ ಹಿಂಸಾಚಾರಗಳು ನಡೆಯುತ್ತಲೇ ಇವೆ. ಎರಡನೆಯ ಮಹಾಯುದ್ಧ ಮುಗಿದ ಮೇಲೆ ಬ್ರಿಟನ್ ಮತ್ತು ಅಮೆರಿಕಾ –ಎರಡೂ ಕ್ರಿಶ್ಚಿಯನ್ ದೇಶಗಳು- ಈ ವ್ಯಾಜ್ಯವನ್ನಿಟ್ಟುಕೊಂಡು ಯಹೂದಿಗಳ ವಿರುದ್ಧ ಕೆಟ್ಟ ರಾಜಕೀಯ ಮಾಡಿದವು. ಯಹೂದಿ ಜನಾಂಗ ಜಗತ್ತಿನಲ್ಲಿ ಅತಿ ಹೆಚ್ಚು ಯಾತನೆ ಅನುಭವಿಸಿದ ಜನಾಂಗವಾಗಿದೆ. ಆ ಯಾತನೆಗೆ ಅವರೂ ಸ್ವಲ್ಪಮಟ್ಟಿಗೆ ಕಾರಣಕರ್ತರೇ ಸರಿ. “ಈ ಜಗತ್ತನ್ನು ಆಳಲು ಭಗವಂತ ನಮ್ಮನ್ನು ಆಯ್ಕೆ ಮಾಡಿದ್ದಾನೆ, ನಾವು ಉಳಿದ ಜನಾಂಗಗಳಿಗಿಂತ ಶ್ರೇಷ್ಠರು, ಬೇರೆಯವರು ನಮಗಿಂತ ಕೆಳದರ್ಜೆಯವರು” ಎಂದು ಅವರು ಹೇಳಿಕೊಳ್ಳುತ್ತಿದ್ದರು. ಇದುವೆ ಅವರ ದುರಂತಕ್ಕೆ ಕಾರಣವಾಯಿತು. ಒಂದು ಜನಾಂಗ ಹೀಗೆ ಹೇಳಿಕೊಂಡಾಗ ಸಹಜವಾಗಿಯೇ ಅನ್ಯ ಜನಾಂಗಗಳು ಕೆರಳುತ್ತವೆ. ಆದ್ದರಿಂದ ಪ್ರತಿಯೊಂದು ಜನಾಂಗವೂ ಯಹೂದಿಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತ ಬಂದಿತು. ಅಡಾಲ್ಫ್ ಹಿಟ್ಲರ್ ಒಬ್ಬನೇ ಆರು ಮಿಲಿಯನ್ಗೂ ಅಧಿಕ ಸಂಖ್ಯೆಯ ಯಹೂದಿಗಳನ್ನು ಹತ್ಯೆ ಮಾಡಿದ. ಆದರೆ ಎರಡನೆಯ ಮಹಾಯುದ್ಧ ಕೊನೆಕೊನೆಗೆ ಬ್ರಿಟನ್ ಮತ್ತು ಅಮೆರಿಕಾ ಸೇರಿಕೊಂಡು ಹಿಟ್ಲರನಿಗಿಂತಲೂ ಹೀನಾಯವಾದ ಕೆಲಸ ಮಾಡಿತು. ಅವರು ಮಾಡಿದ ಕುತಂತ್ರ ಸ್ವತಃ ಯಹೂದಿಗಳಿಗೇ ಅರ್ಥವಾಗಲಿಲ್ಲ.

ಎರಡನೆಯ ಮಹಾಯುದ್ಧ ಮುಗಿದಮೇಲೆ ಬ್ರಿಟನ್ ಮತ್ತು ಅಮೆರಿಕಾ ಜೆರುಸಲೇಮ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡವು. ಪ್ಯಾಲೆಸ್ಟೇನ್ ಗೆ ಸೇರಿದ ಆ ಭಾಗ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದ ಪ್ರಾಂತ್ಯವಾಗಿತ್ತು. ಯುದ್ಧ ಮುಗಿದ ಕೂಡಲೆ ʼಡೂಮ್ ಆಫ್ ರಾಕ್ʼ ದೇವಾಲಯವಿದ್ದ ಪ್ರಾಂತ್ಯಕ್ಕೆ ಅಮೆರಿಕಾ ಶಸ್ತ್ರಸಜ್ಜಿತ ಮಿಲಿಟರಿ ಪಡೆಯನ್ನು ಕಳುಹಿಸಿ ಇಸ್ರೇಲನ್ನು ಯಹೂದಿಗಳಿಗೆಂದೇ ಮೀಸಲಾದ ಒಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿತು. ಯಹೂದಿಗಳಿಗೇ ಪ್ರತ್ಯೇಕವಾದ ಇಂಥದೊಂದು ರಾಷ್ಟ್ರ ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿರಲಿಲ್ಲ. ಹಿಂದೆಂದೋ ಮೋಸೆಸ್ ನ ಕಾಲದಲ್ಲಿ ಯಹೂದಿಗಳ ದೇಶವೊಂದಿತ್ತು ಆದರೆ ಮುಸಲ್ಮಾನರು ತಲೆಯೆತ್ತಿದ ಮೇಲೆ ಅವರು ತಮ್ಮ ತಾಯ್ನೆಲವನ್ನು ಕಳೆದುಕೊಂಡರು. ಮುಸಲ್ಮಾನರು ಆಕ್ರಮಿಸಿಕೊಂಡ ಪ್ರಾಂತ್ಯವನ್ನು ಮತ್ತೆ ವಶಕ್ಕೆ ಪಡೆಯಲು ಕ್ರಿಶ್ಚಿಯನ್ನರು ಮತ್ತು ಯಹೂದಿಗಳು ಇಬ್ಬರೂ ಸತತವಾಗಿ ಪ್ರಯತ್ನಿಸಿದರಾದರೂ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಏಕೆಂದರೆ ಮುಸ್ಲಿಮರು ಆಕ್ರಮಿಸಿಕೊಂಡಿದ್ದ ಪ್ರಾಂತ್ಯದಲ್ಲಿ ಶೇಕಡಾ ಆರರಷ್ಟು ಜನಸಂಖ್ಯೆ ಯಹೂದಿಗಳದ್ದಾಗಿತ್ತು, ಉಳಿದ ತೊಂಬತ್ತನಾಲ್ಕು ಪ್ರತಿಶತ ಜನಸಂಖ್ಯೆ ಮುಸ್ಲಿಮರದ್ದಾಗಿತ್ತು. ಇಷ್ಟು ಅಲ್ಪಸಂಖ್ಯಾತ ಜನಾಂಗಕ್ಕೆ ಸಹಜವಾಗಿಯೇ ಇಸ್ರೇಲನ್ನು ತನ್ನ ಸಾಮ್ರಾಜ್ಯವೆಂದು ಘೋಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ ಅಮೆರಿಕಾ ಶಸ್ತ್ರಾಸ್ತ್ರ ಬಲವನ್ನು ಉಪಯೋಗಿಸಿ ಬಲವಂತದಿಂದ ಇಸ್ರೇಲನ್ನು ಯಹೂದಿಗಳ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿತು. ಅಮೆರಿಕಾ ಹೀಗೆ ಮಾಡಿದ್ದು ಯಹೂದಿಗಳ ಮೇಲಿನ ಕರುಣೆಯಿಂದಲ್ಲ, ಯಹೂದಿಗಳನ್ನು ಧ್ವಂಸ ಮಾಡಲು ಇದು ಅಮೆರಿಕಾ ರೂಪಿಸಿಕೊಂಡ ಒಂದು ಯುದ್ಧತಂತ್ರವಾಗಿತ್ತು. ಅವರ ಈ ಕುಟಿಲ ತಂತ್ರ ಪ್ರಪಂಚದಲ್ಲಿ ಯಾರೊಬ್ಬರಿಗೂ ಪತ್ತೆಯಾಗಲಿಲ್ಲ. ಕುದಿವ ಎಣ್ಣೆಯ ಕೊಪ್ಪರಿಗೆಯಲ್ಲಿ ಯಹೂದಿಗಳು ಶಾಶ್ವತವಾಗಿ ಬೇಯುವಂತೆ ಮಾಡುವುದು ಅಮೆರಿಕಾ ಮತ್ತು ಬ್ರಿಟನ್ನಿನ ಗುಪ್ತ ಯೋಜನೆಯಾಗಿತ್ತು. ಇದು ಬಹಳ ಚಾಣಾಕ್ಷತನದ ರಾಜತಾಂತ್ರಿಕ ನಿರ್ಣಯವಾಗಿತ್ತು. ಏಕೆಂದರೆ ಅವರ ಈ ನಿರ್ಧಾರದಿಂದ ಯಹೂದಿಗಳಿಗೂ ಸಂತೋಷವಾಗಿತ್ತು, ಅಮೆರಿಕಾ ಮತ್ತು ಇಂಗ್ಲೆಂಡ್ ನಮಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ, ಎಷ್ಟೋ ಶತಮಾನಗಳಾದ ಮೇಲೆ ನಮ್ಮ ತಾಯ್ನೆಲವನ್ನು ನಾವು ಮರಳಿ ಪಡೆಯಲು ಅವರು ನೆರವಾಗುತ್ತಿದ್ದಾರೆ ಎಂದು ಯಹೂದಿಗಳು ಭಾವಿಸಿದರು. ಹೀಗೆ ಅಮೆರಿಕಾ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಕೊಂದಿತು.

ಅಮೆರಿಕಾದಲ್ಲಿ ಯಹೂದಿಗಳು ಅತ್ಯಂತ ಶ್ರೀಮಂತ ಪ್ರಜೆಗಳಾಗಿದ್ದು ಅಮೆರಿಕನ್ ಕಾಂಗ್ರೆಸ್ ಮೇಲೆ ಸಂಪೂರ್ಣ ಪ್ರಾಬಲ್ಯ ಹೊಂದಿದ್ದಾರೆ. ರಾಜಕಾರಣಿಗಳು ಶ್ರೀಮಂತರ ದೇಣಿಗೆಯನ್ನು ನಂಬಿಕೊಂಡು ಚುನಾವಣೆಗೆ ನಿಲ್ಲುವುದರಿಂದ ಅಮೆರಿಕಾದಲ್ಲಿ ಯಹೂದಿಗಳದ್ದೇ ಆದ ಒಂದು ದೊಡ್ಡ ಲಾಬಿಯೇ ನಡೆಯುತ್ತದೆ. ಹಾಗಾಗಿ ಶ್ರೀಮಂತ ಯಹೂದಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಮೆರಿಕನ್ನರು ಯಹೂದಿಗಳಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಿಸಿ ಕೊಟ್ಟಿದ್ದರಾದರೂ ಮುಸಲ್ಮಾನರನ್ನು ನಿಗ್ರಹಿಸಿ ಆ ರಾಷ್ಟ್ರವನ್ನು ನಿರ್ಮಾಣ ಮಾಡಲಾಗಿತ್ತು. ಈ ಬಗೆಯ ನಿಗ್ರಹವನ್ನು ಯಾವುದೇ ಜನಾಂಗ ಸಹಿಸುವುದಿಲ್ಲ. ಮುಸಲ್ಮಾನರಂತೂ ಮೊದಲೇ ಫ್ಯಾಸಿಸ್ಟ್ ಧೋರಣೆಯವರು. ಇದನ್ನು ಅವರು ತಮಗಾದ ಅವಮಾನವೆಂದೇ ಭಾವಿಸಿ ಯಹೂದಿಗಳ ಮೇಲೆ ಯುದ್ಧ ಘೋಷಿಸಿದರು. ಅಂದು ಪ್ರಾರಂಭವಾದ ಕದನ ಇಂದಿಗೂ ಮುಂದುವರಿದೇ ಇದೆ. ಈಗ ಇಸ್ರೇಲ್ ತನ್ನ ಉಳಿವಿಗಾಗಿ ಅಮೆರಿಕಾದಿಂದ ಯುದ್ಧಶಸ್ತ್ರಗಳನ್ನು ಖರೀದಿಸಬೇಕಾಗಿದೆ, ಅಮೆರಿಕಾದ ಯಹೂದಿಗಳು ಇಸ್ರೇಲಿನ ತಮ್ಮ ಬಾಂಧವರ ಉಳಿವಿಗಾಗಿ ಒಂದೇ ಸಮನ ಮಿಲಿಯಾಂತರ ಡಾಲರುಗಳನ್ನು ಅಮೆರಿಕನ್ ಸರ್ಕಾರಕ್ಕೆ ಸುರಿಯುತ್ತಿದ್ದಾರೆ. ಹೀಗೆ ಅಮೆರಿಕಾ ಅಡಾಲ್ಫ್ ಹಿಟ್ಲರ್ ಗಿಂತಲೂ ಹೆಚ್ಚಿನ ಸಂಖ್ಯೆಯ ಯಹೂದಿಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. ಹಿಟ್ಲರ್ ಆದರೂ ಒಂದೇ ಹೊಡೆತಕ್ಕೆ ಅವರನ್ನು ಕೊಂದ. ಆದರೆ ಅಮೆರಿಕಾ ಇಸ್ರೇಲಿನಲ್ಲಿ ಒಬ್ಬನೇ ಒಬ್ಬ ಯಹೂದಿ ಉಳಿಯದ ಹಾಗೆ ಶತಶತಮಾನಗಳವರೆಗೂ ನಿರಂತರವಾಗಿ ಯುದ್ಧ ಮುಂದುವರಿಯುವ ಹಾಗೆ ಒಂದು ಶಾಶ್ವತ ಕಾರ್ಯಯೋಜನೆಯನ್ನು ಯಶಸ್ವಿಯಾಗಿ ರೂಪಿಸಿದೆ.

ಅಮೆರಿಕಾದ ಧೂರ್ತ ರಾಜಕಾರಣಿಗಳು ಇಸ್ರೇಲಿಗೆ ನೀಡಿರುವ ಬೆಂಬಲವನ್ನು ಯಾವ ಕ್ಷಣದಲ್ಲಾದರೂ ಹಿಂಪಡೆಯಬಹುದು. ಈಗಾಗಲೇ ತೈವಾನ್ ನಲ್ಲಿ ಆ ಕೆಲಸ ಮಾಡಿದ್ದಾರೆ. ಚೀನಾದ ವಿರುದ್ಧ ಹೋರಾಡಲು ಇಷ್ಟು ಕಾಲ ಅಮೆರಿಕಾ ತೈವಾನ್ ಗೆ ನೆರವಾಗಿತ್ತು. ತೈವಾನ್ ಅಮೆರಿಕಾದ ಬೆಂಬಲದಿಂದ ಇಷ್ಟು ಕಾಲ ತನ್ನ ಹೋರಾಟ ನಡೆಸಿಕೊಂಡು ಬಂದಿತ್ತು. ಆದರೆ ಚೀನಾದಂತಹ ಪ್ರಬಲ ರಾಷ್ಟ್ರದೆದುರು ಎಷ್ಟು ಕಾಲ ಸೆಟೆದು ನಿಲ್ಲಲಾದೀತು? ತೈವಾನ್ ಒಂದು ಪುಟ್ಟ ದ್ವೀಪ. ಚೀನಾವನ್ನು ಮಾವೋತ್ಸೆ ತುಂಗ್ ಮತ್ತು ಕಮ್ಯೂನಿಸ್ಟರು ವಶಪಡಿಸಿಕೊಳ್ಳುವ ಮುನ್ನ ಚೀನಾ ಸರ್ವಾಧಿಕಾರಿಯಾದ ಚಿಯಾಂಗ್ ಕಾಯ್ ಶೆಕ್ ನ ಆಳ್ವಿಕೆಯಲ್ಲಿತ್ತು. ತೈವಾನ್ ಆತನ ಖಾಸಗಿ ಸ್ವತ್ತಾಗಿತ್ತು. ಅದೊಂದು ಪ್ರತ್ಯೇಕ ರಾಷ್ಟ್ರವಾಗುವ ಮುನ್ನ ಆ ದ್ವೀಪಕ್ಕೆ ಫೋರ್ಮೋಸಾ ಎಂಬ ಹೆಸರಿತ್ತು. ಚೀನಾವನ್ನು ಕಮ್ಯೂನಿಸ್ಟರು ಆಕ್ರಮಿಸಿಕೊಂಡ ಮೇಲೆ ಚಿಯಾಂಗ್ ಕಾಯ್ ಶೆಕ್ ತನ್ನ ಕುಟುಂಬ ಪರಿವಾರದ ಸಮೇತ ತನ್ನ ಖಾಸಗಿ ದ್ವೀಪವಾದ ಫೋರ್ಮೋಸಾಗೆ ಹೋಗಿ ಅದರ ಹೆಸರನ್ನು ತೈವಾನ್ ಎಂದು ಬದಲಾಯಿಸಿದ. ಕ್ರಮೇಣ ಅಮೆರಿಕಾದ ಸಹಾಯದಿಂದ ಅದೊಂದು ಪ್ರತ್ಯೇಕ ರಾಷ್ಟ್ರವಾಯಿತು. ಅಮೆರಿಕಾ ಬಿಲಿಯನ್ ಗಟ್ಟಲೆ ಹೂಡಿಕೆ ಮಾಡಿ ತೈವಾನ್ ನಲ್ಲಿ ಹೊಸ ಕಾರ್ಖಾನೆಗಳನ್ನು ನಿರ್ಮಿಸಿತು.

ಆದರೆ ಚೀನ ಜಗತ್ತಿನ ಅತಿದೊಡ್ಡ ದೇಶ. ಇಂತಹ ದೇಶವನ್ನು ಎಷ್ಟು ಕಾಲ ಎದುರು ಹಾಕಿಕೊಳ್ಳಲು ಸಾಧ್ಯ? ಕೊನೆಗೆ ಚೀನಾದೊಂದಿಗೆ ಕೈಜೋಡಿಸುವ ಸಲುವಾಗಿ ಅಮೆರಿಕಾ ತೈವಾನ್ ಗೆ ಕೈಕೊಟ್ಟಿತು. “ನೀವು ತೈವಾನ್ ದೇಶವನ್ನು ಬೆಂಬಲಿಸುತ್ತಿರುವವರೆಗೂ ನಿಮಗೆ ನಮ್ಮ ಬೆಂಬಲ ಸಿಗುವುದಿಲ್ಲ”ಎಂದು ಚೀನಾ ಸ್ಪಷ್ಟವಾಗಿ ಹೇಳಿತ್ತು. ರಷ್ಯಾವನ್ನು ಬಗ್ಗುಬಡಿಯಲು ಅಮೆರಿಕಾಗೆ ಚೀನಾದ ನೆರವು ಬೇಕಿತ್ತು. ಹಾಗಾಗಿ ಅದು ಚೀನಾ ಹೇಳಿದಂತೆ ಕೇಳಬೇಕಾಯಿತು. ಈಗ ಚೀನಾ ತೈವಾನ್ ದೇಶವನ್ನು ತನ್ನೊಳಗೆ ವಿಲೀನಗೊಳಿಸಿಕೊಳ್ಳಲು ಹವಣಿಸುತ್ತಿದೆ. ತೈವಾನ್ ಗೆ ಚೀನಾದ ವಿರುದ್ಧ ಸೆಣೆಸುವ ಸಾಮರ್ಥ್ಯವಿಲ್ಲ. ಯಾವ ಕ್ಷಣದಲ್ಲಾದರೂ ಇಸ್ರೇಲ್ ಗೂ ತೈವಾನ್ ಗೆ ಆದ ಗತಿಯೇ ಆಗಬಹುದು. ಈಗಾಗಲೇ ಇರಾನ್ ಗೆ ಆ ಗತಿ ಒದಗಿದೆ. ಇರಾನ್ ನ ಶಾ ಅಮೆರಿಕಾದ ಬೆಂಬಲದೊಂದಿಗೆ ಇಷ್ಟು ಕಾಲ ಆಡಳಿತ ನಡೆಸಿಕೊಂಡು ಬಂದಿದ್ದ. ಅವನಿಗೆ ತನ್ನ ಪ್ರಜೆಗಳ ಮೇಲೆ ನಿಯಂತ್ರಣವಿರಲಿಲ್ಲ. ಅಯಾತೊಲ್ಲಾ ಖೊಮೇನಿಯ ಅಧೀನದಲ್ಲಿ ಇರಾನ್ ನ ಮುಸಲ್ಮಾನರು ಮೂಲಭೂತವಾದಿಗಳಾಗಿದ್ದರು. ಆದರೆ ಅಮೆರಿಕಾದ ಬೆಂಬಲದೊಂದಿಗೆ ಶಾ ಹೇಗೋ ಆಡಳಿತ  ನಡೆಸಿಕೊಂಡು ಹೋದ. ಆದರೆ ಎಷ್ಟುಕಾಲ ಹೀಗೆ ಮುಂದುವರಿದೀತು? ಅಯಾತೊಲ್ಲಾ ಖೊಮೇನಿ ಫ್ರಾನ್ಸ್ ನಲ್ಲಿ ಇದ್ದುಕೊಂಡೇ ಇರಾನ್ ನ ಮುಸಲ್ಮಾನರಿಗೆ ಮಾರ್ಗದರ್ಶನ ಮಾಡುತ್ತಿದ್ದ. ಶಾನನ್ನು ಬೆಂಬಲಿಸುವ ಸಲುವಾಗಿ ಖೊಮೇನಿಯನ್ನು ಎದುರು ಹಾಕಿಕೊಳ್ಳುವುದು ಜಾಣತನವಲ್ಲ ಎಂದು ಅಮೆರಿಕಾ ಯೋಚಿಸಿತು.

ಕೊನೆಗೊಂದು ದಿವಸ ಇದ್ದಕ್ಕಿದ್ದಂತೆ ಇರಾನ್ ಅಮೆರಿಕಾಗೆ ಒಂದು ಹೊರೆ ಎನಿಸಿತು. ಒಮ್ಮೆ ಬೆಂಬಲ ಹಿಂಪಡೆದ ಮೇಲೆ ಇರಾನ್ ನ ಶಾ ತಲೆಮರೆಸಿಕೊಂಡು ಓಡಿಹೋದ. ಅಯಾತೊಲ್ಲಾ ಖೊಮೇನಿ ಇರಾನ್ ಗೆ ಹಿಂದಿರುಗಿ ತನ್ನ ಧ್ವಜ ಹಾರಿಸಿದ. ಇಂದು ಇರಾನ್ ಮುಸಲ್ಮಾನರ ಪುರೋಹಿತನಾದ ಅಯಾತೊಲ್ಲಾ ಖೊಮೇನಿಯ ನಿಯಂತ್ರಣದಲ್ಲಿದೆ. ಇವರೆಲ್ಲ ಸೇರಿಕೊಂಡು ಇಸ್ರೇಲನ್ನು ಯಹೂದಿಗಳ ಪಾಲಿನ ನರಕವನ್ನಾಗಿ ಮಾಡಿದ್ದಾರೆ. ಅಮೆರಿಕಾದ ಈ ಕುಟಿಲ ಕಾರ್ಯತಂತ್ರದ ಬಗ್ಗೆ ಯಹೂದಿ ಜನಾಂಗದ ಪರಮ ಮೇಧಾವಿಯಾದ ಮಾರ್ಟಿನ್ ಬೂಬರ್ ಗೇ ಅನುಮಾನ ಮೂಡಲಿಲ್ಲವೆಂದರೆ ಇನ್ನೇನು ಹೇಳಬೇಕು?

ಇಂದು ನಾನೊಬ್ಬನೇ ಏಕಾಂಗಿಯಾಗಿ ನಿಂತು ಅಮೆರಿಕಾದ ಕುತಂತ್ರ ರಾಜಕಾರಣವನ್ನು ಇಡೀ ಜಗತ್ತಿನೆದುರು ಬಯಲು ಮಾಡುತ್ತಿದ್ದೇನೆ. ಅಮೆರಿಕಾ ಮತ್ತು ಇಂಗ್ಲೆಂಡ್ ಎಂದಿಗೂ ಯಹೂದಿಗಳ ಹಿತೈಷಿಗಳಾಗಲಾರವು. ಅದಕ್ಕೆ ವ್ಯಾಟಿಕನ್ ಸಿಟಿಯೇ ಪ್ರಮಾಣವಾಗಿದೆ. ಈಗಲೂ ಇಸ್ರೇಲ್ ಒಂದು ಸ್ವತಂತ್ರ ರಾಷ್ಟ್ರ ಎಂದು ವ್ಯಾಟಿಕನ್ ಅನುಮೋದಿಸಿಲ್ಲ. ಒಂದೆಡೆ ಕ್ರಿಶ್ಚಿಯಾನಿಟಿ ಅದಕ್ಕೆ ಅಧಿಕೃತವಾಗಿ ಒಂದು ರಾಷ್ಟ್ರದ ಸ್ಥಾನಮಾನ ನೀಡದೇ ಮಗುಮ್ಮಾಗಿದೆ, ಮತ್ತೊಂದೆಡೆ ಇದೇ ಕ್ರಿಶ್ಚಿಯಾನಿಟಿ ಶತ್ರುಗಳ ನೆಲದಲ್ಲಿ ಯಹೂದಿಗಳಿಗೆ ಒಂದು ಪ್ರತ್ಯೇಕ ರಾಷ್ಟ್ರ ನಿರ್ಮಿಸಿಕೊಟ್ಟು ಉಪಕಾರ ಮಾಡುವ ಸೋಗು ಹಾಕಿದೆ. ಇಸ್ರೇಲಿನಲ್ಲಿ ಬಹುಸಂಖ್ಯಾತರಾದ ಮುಸಲ್ಮಾನರ ಕೈಗೆ ಸಿಲುಕಿ ಬಡಪಾಯಿ ಯಹೂದಿಗಳು ಸತ್ತೇ ಸಾಯುತ್ತಾರೆ.

ಒಬ್ಬ ಮನುಷ್ಯನನ್ನು ಒಂದೇ ಒಂದು ಸಲ ಶಿಲುಬೆಗೇರಿಸಿದ ತಪ್ಪಿಗೆ ಎರಡು ಸಾವಿರ ವರ್ಷಗಳಿಂದ ಮುಗ್ಧ ಯಹೂದಿಗಳು ಶಿಲುಬೆ ಏರುತ್ತಲೇ ಇದ್ದಾರೆ. ಅಂದು ಅಮಾಯಕನಾದ ಯೇಸು ತನ್ನ ಸಮಕಾಲೀನರ ಕೈಲಿ ಸತ್ತ, ಇಂದು ಅಮಾಯಕರಾದ ಯಹೂದಿಗಳಿಗೂ ಅದೇ ಗತಿಯಾಗಿದೆ. ಬರೀ ಇಸ್ರೇಲಿನಲ್ಲಲ್ಲ ರಷ್ಯಾ, ಜರ್ಮನಿ ಇತ್ಯಾದಿ ಯಾವೆಲ್ಲ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಅವರು ನೆಲೆಸಿರುವರೋ ಆ ಎಲ್ಲ ಕಡೆಗಡೆಗಳಲ್ಲಿಯೂ ಅವರು ಕಿರುಕುಳ ಅನುಭವಿಸುತ್ತಲೇ ಇದ್ದಾರೆ. ಈಗ ಇಸ್ರೇಲ್ ಕಟ್ಟಕಡೆಯ ರಣತಂತ್ರವಾಗಿದೆ. ಇಸ್ರೇಲ್ ಎಂಬ ದೇಶ ಮತ್ತೊಮ್ಮೆ ಪೂರ್ತಿಯಾಗಿ ಇಲ್ಲವಾಗಿ ಹೋಗುವವರೆಗೂ ಈ ರಣತಂತ್ರ ಜಾರಿಯಲ್ಲಿರುತ್ತದೆ.

ಖ್ಯಾತ ಅಮೆರಿಕನ್ ಲೇಖಕ ಟಾಮ್ ರಾಬಿನ್ಸ್ ಈ ಸಂಬಂಧವಾಗಿ ಒಂದು ಪುಸ್ತಕ ರಚನೆಯಲ್ಲಿ ತೊಡಗಿದ್ದು ಅವರಿಗೆ ಈ ಎಲ್ಲ ವಿಷಯಗಳ ಕುರಿತ ನನ್ನ ಅಭಿಪ್ರಾಯ ಬೇಕಂತೆ. ಇಲ್ಲಿ ನಾನು ಅವರ ಪ್ರಶ್ನೆಗೆ ಉತ್ತರಿಸಿದ್ದೇನೆ. ಅವರಿಗೆ ನನ್ನ ಅಭಿಪ್ರಾಯ ಕೇಳಿ ಆಶ್ಚರ್ಯವಾಗಬಹುದು. ಏಕೆಂದರೆ, ಇಸ್ರೇಲಿನ ಜನನ ಅಸಲಿಗೆ ಯಹೂದಿಗಳನ್ನು ನಾಶಪಡಿಸಲು ಕ್ರಿಶ್ಚಿಯನ್ ರಾಜಕಾರಣಿಗಳು ಮಾಡಿದ ಒಂದು ಕುತಂತ್ರವೆಂದು ಅಮೆರಿಕಾದ ಯಾವ ರಾಜಕೀಯ ಚಿಂತಕನೂ ಈತನಕ ಯೋಚಿಸಿದಂತಿಲ್ಲ. ಅವರು ನೇರವಾಗಿ  ನಾಶ  ಮಾಡುವುದಿಲ್ಲ, ತಮ್ಮ ಉದ್ದೇಶವನ್ನು ಮುಸಲ್ಮಾನರ ಮೂಲಕ ಈಡೇರಿಸಿಕೊಂಡು ತಾವು ಮಾತ್ರ “ನೋಡಿ, ನಾವು ಶತ್ರುಗಳಿಗೂ ಉಪಕಾರ ಮಾಡಲು ಸಿದ್ಧರಿದ್ದೇವೆ”ಎಂದು ಹೊರಜಗತ್ತಿನೆದುರು ಮುಖವಾಡ ತೋರಿಸಲು ಈ  ಕುತಂತ್ರವನ್ನು ಹೆಣೆದಿದ್ದಾರೆ. ಒಂದರ್ಥದಲ್ಲಿ “ಶತ್ರುವನ್ನೂ ಪ್ರೀತಿಸಿ”ಎಂಬ ಯೇಸುವಿನ ಸಂದೇಶವನ್ನು ಪಾಲಿಸಿದ್ದಾರೆ. ಒಂದೆಡೆ ನಿರುಪಯುಕ್ತವಾದ ಕಳಪೆ ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯುವ ಬದಲು ಇಸ್ರೇಲಿಗೆ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಅಮೆರಿಕಾದ ರಾಜಕಾರಣಿಗಳು “ನಾವು ಇಸ್ರೇಲಿನಲ್ಲಿರುವ ನಿಮ್ಮ ಬಾಂಧವರಿಗೆ ಸಹಾಯ ಮಾಡುತ್ತಿದ್ದೇವೆ”ಅಮೆರಿಕಾದ ಶ್ರೀಮಂತ ಯಹೂದಿಗಳನ್ನು ನಂಬಿಸಿ ಅವರಿಂದ ಹಣ ಸಹಾಯ ಪಡೆಯುತ್ತಿದ್ದಾರೆ.

ಮೊನ್ನೆ ದಿನ ನಾನು ನನ್ನ ಸನ್ಯಾಸಿಗಳಿಗೆ ಇದನ್ನೆಲ್ಲ ವಿವರಿಸಿ ಟಾಮ್ ರಾಬಿನ್ಸ್ ಗೆ ಪತ್ರ ಬರೆಸುತ್ತಿದ್ದಾಗ ಒಂದು ಸುದ್ದಿ ಬಂದಿತು. ಓರೆಗಾನ್ ನ ಸರ್ವೋಚ್ಛ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಿತಂತೆ. ಓರೆಗಾನ್ ಸರ್ಕಾರ ನಮ್ಮ ಆಶ್ರಮವನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆದು ಅದನ್ನು ಸರ್ವನಾಶ ಮಾಡಿತೆಂದು ನಾವು ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೆವು. ಈಗ ಆ ಸಾವಿರಾರು ಎಕರೆ ಭೂಪ್ರದೇಶವನ್ನು ಮತ್ತು ಇತರೆ ಸ್ವತ್ತುಗಳನ್ನು ಆಶ್ರಮಕ್ಕೆ ಬಿಟ್ಟುಕೊಡಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ. ಈಗ ಆ ಭೂಮಿ ನಮ್ಮದಾಗಿದೆ. ನಾನು ಟಾಮ್ ರಾಬಿನ್ಸ್ ಗೆ ಬರೆಯಿಸಿದ ಪತ್ರದಲ್ಲಿ ನನ್ನ ಸಲಹೆಯನ್ನು ಈ ರೀತಿ ನೀಡಿದೆ:

“ನಿಮಗೆ ನಿಜವಾಗಿಯೂ ಇಸ್ರೇಲ್ ಗೆ ನೆರವು ನೀಡಬೇಕೆಂಬ ಬಯಕೆ ಇದ್ದರೆ ಓರೆಗಾನ್ ಸರ್ಕಾರವು ನಮ್ಮ ಆಶ್ರಮವನ್ನು ನಾಶ ಮಾಡದೇ ಆ ಸಾವಿರಾರು ಎಕರೆ ಭೂಮಿಯನ್ನು ಹೊಸ ಇಸ್ರೇಲ್ ಎಂದು ಘೋಷಿಸಿ ಇಸ್ರೇಲ್ ಗೆ ಕೊಟ್ಟುಬಿಡಿ. ಅಲ್ಲಿನ ಯಹೂದಿಗಳನ್ನೂ ಇಲ್ಲಿ ಕರೆಸಿಕೊಂಡು ಇಸ್ರೇಲನ್ನು ಮುಸ್ಲಿಮರಿಗೆ ಬಿಟ್ಟುಕೊಡಿ. ಆ ಭೂಮಿ ನ್ಯಾಯವಾಗಿ ಮುಸ್ಲಿಮರಿಗೆ ಸೇರಿದ್ದು. ನಾನು ಹಾಗು ನನ್ನ ಸನ್ಯಾಸಿಗಳು ನಮ್ಮ ಸಾವಿರಾರು ಎಕರೆ ಭೂಮಿಯನ್ನು ಜೊತೆಗೆ ಅಲ್ಲಿ ನಾವು ನಿರ್ಮಿಸಿರುವ ರಸ್ತೆಗಳು, ಹೋಟೆಲ್ ಗಳು, ಮನೆಗಳು, ಸೇತುವೆಗಳು, ಅಣೆಕಟ್ಟುಗಳು, ಹೊಲಗದ್ದೆಗಳು ಇವೆಲ್ಲದರ ಸಮೇತ ಸ್ನೇಹಪೂರ್ವಕವಾಗಿ ಇಸ್ರೇಲಿನ ಯಹೂದಿಗಳಿಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಹೀಗೆ ನಮ್ಮ ನೆಲ ಅವರ ಹೊಸ ರಾಜಧಾನಿಯಾಗಲಿ. ಓರೆಗಾನ್ ನ ಅರ್ಧ ಭೂಮಿ ನಮಗೆ ಸೇರಿದ್ದರೆ ಇನ್ನರ್ಧ ಭೂಮಿ ಫೆಡರಲ್ ಸರ್ಕಾರಕ್ಕೆ ಸೇರಿದೆ. ಸರ್ಕಾರಕ್ಕೆ ಇಸ್ರೇಲ್ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮ್ಮ ಜಾಗವನ್ನೂ ಬಿಟ್ಟುಕೊಡಲಿ. ಅದೇನೂ ಅಂತಹ ಜನನಿಬಿಡ ಪ್ರದೇಶವಲ್ಲ. ಈಗಲಾದರೂ ಅಮೆರಿಕಾ ತನ್ನ ನಿಜವಾದ ಬಣ್ಣ ತೋರಿಸಲಿ”

ಇಸ್ರೇಲಿನಲ್ಲಿ ಯಹೂದಿಗಳು ನಿಜಕ್ಕೂ ಸಂಕಟದಲ್ಲಿದ್ದಾರೆ. ಅಲ್ಲಿ ಕೆಲವು ಯಹೂದಿಗಳು ಅತ್ಯಂತ ಪ್ರಾಚೀನ  ಕಾಲದಿಂದ, ಮೋಸೆಸ್ ನ ಕಾಲದಿಂದಲೂ ನೆಲೆಸಿದ್ದಾರೆ. ಅವರು ಹೊರಜಗತ್ತನ್ನೇ ಇದುವರೆಗೂ ನೋಡಿಲ್ಲ. ಈಗಲೂ ನಾಲ್ಕು ಸಾವಿರ ವರ್ಷಗಳಷ್ಟು ಹಿಂದುಳಿದಿದ್ದಾರೆ. ಯಹೂದಿಗಳ ಮತ್ತೊಂದು ಗುಂಪು ಇಸ್ರೇಲಿನಿಂದ ಹೊರಗೆ ನೆಲೆಸಿದೆ. ಅವರು ಇಸ್ರೇಲಿನ ಆ ಕೆಲವು ಯಹೂದಿಗಳಷ್ಟು ಸಂಪ್ರದಾಯಸ್ಥರಲ್ಲ. ಇನ್ನು ಮೂರನೆಯದೊಂದು ಗುಂಪು ಅಮೆರಿಕಾದಲ್ಲಿ ನೆಲೆಸಿದೆ. ಅವರಿಗೆ ಯಹೂದಿ ಧರ್ಮವೆಂದರೆ ಏನೆಂದೇ ಗೊತ್ತಿಲ್ಲ. ಈ ಕಾರಣಗಳಿಂದ ಇಂದು ಯಹೂದಿಗಳು ತಮ್ಮ ತಮ್ಮಲ್ಲೇ ಕಿತ್ತಾಡುವಂತಾಗಿದೆ. ಮುಸ್ಲಿಮರಂತೂ ಹಿಂದಿನಿಂದಲೂ ಯಹೂದಿಗಳ ಕಗ್ಗೊಲೆ ಮಾಡಿಕೊಂಡೇ ಬಂದಿದ್ದಾರೆ. ಆದರೆ ಈಗ ಇಸ್ರೇಲಿನ ಸಂಪ್ರದಾಯಸ್ಥ ಯಹೂದಿಗಳೂ ಆಧುನಿಕ ಯಹೂದಿಗಳ ಹತ್ಯೆ ಮಾಡಲು ತೊಡಗಿದ್ದಾರೆ. ಐರೋಪ್ಯ ಹಾಗೂ ಅಮೆರಿಕನ್ ಯಹೂದಿಗಳಿಗೆ “ನೀವು ಯಹೂದಿಗಳಲ್ಲ, ನಿಮ್ಮ ಜಾಗಕ್ಕೆ ಹಿಂದಿರುಗಿ, ಮೊದಲು ಇಲ್ಲಿಂದ ತೊಲಗಿ”ಎಂದು ಆಗ್ರಹಿಸುತ್ತಿದ್ದಾರೆ. ಸಣ್ಣಪುಟ್ಟ ಕಾರಣಗಳಿಗೂ ಹಿಂಸಾಚಾರಕ್ಕಿಳಿಯುತ್ತಿದ್ದಾರೆ. ಉದಾಹರಣೆಗೆ, ಸಂಪ್ರದಾಯಸ್ಥ ಯಹೂದಿಗಳು ಸಬ್ಬತ್ ವಾರದಲ್ಲಿ ಕೆಲಸ ಮಾಡುವುದಿಲ್ಲ. ಶುಕ್ರವಾರ ಸಂಜೆಯ ನಂತರ ಅವರು ಮನೆ ಬಿಟ್ಟು ಹೊರಬರುವುದೂ ಇಲ್ಲ. ಈಗ ಈ ಹೊಸ ತಲೆಮಾರಿನ ಯಹೂದಿಗಳೂ ವಾರಾಂತ್ಯದಲ್ಲಿ ತಮ್ಮ ಡಿಸ್ಕೋಗಳು, ರೆಸ್ಟೋರೆಂಟುಗಳು, ಸಿನಿಮಾ ಹಾಲ್ ಗಳು ಇತ್ಯಾದಿಗಳನ್ನು ಮುಚ್ಚಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ.

ಆದ್ದರಿಂದ ನಾನು ಅಮೆರಿಕಾ ಮಾಡುತ್ತಿರುವ ಸಹಾಯವನ್ನು ಸುಮ್ಮನೆ ಲೇವಡಿ ಮಾಡುತ್ತಿಲ್ಲ. ನಿಜವಾಗಿಯೂ ಹೇಳುತ್ತಿದ್ದೇನೆ. ನಾನು ಇಸ್ರೇಲ್ ಗೆ ಈ ರೀತಿ ಸಂದೇಶ ಕಳುಹಿಸುತ್ತಿದ್ದೇನೆ: “ನೀವು ಧಾರಾಳವಾಗಿ ನಮ್ಮ ಆಶ್ರಮಕ್ಕೆ ಬನ್ನಿ, ಇಲ್ಲಿಂದಲೇ ನಿಮ್ಮ ಹೊಸ ಬದುಕು ಪ್ರಾರಂಭವಾಗಲಿ. ನಿಮ್ಮನ್ನು ಕರೆಸಿಕೊಳ್ಳಲು ಅಮೆರಿಕಾ ಸರ್ಕಾರಕ್ಕೆ ಆಜ್ಞಾಪಿಸಿ. ನಿಮಗೆ ಆಜ್ಞೆ ನೀಡುವ ಎಲ್ಲ ಅಧಿಕಾರವಿದೆ. ಏಕೆಂದರೆ ಅಮೆರಿಕಾದ ಎಲ್ಲ ರಾಜಕಾರಣಿಗಳೂ ಖರ್ಚು ಮಾಡುತ್ತಿರುವ ಹಣ ನೀವು ನೀಡಿರುವ ಹಣವಾಗಿದೆ. ಅವರು ನಿಮ್ಮ ಸಂಬಳದ ಆಳುಗಳಾಗಿದ್ದಾರೆ. ನಮಗೆ ಇಲ್ಲೇ ಹೊಸ ಇಸ್ರೇಲ್ ನಿರ್ಮಿಸಿಕೊಡಿ ಎಂದು ಕೇಳಿ. ಆ ಹಳೆಯಕಾಲದ ಬಂಡೆಯನ್ನು ನೆಚ್ಚಿಕೊಂಡು ಏಕೆ ಸುಮ್ಮನೆ ಸಾಯುವಿರಿ? ಇಲ್ಲೇ ಭವ್ಯವಾದ ಸೋಲೋಮಾನ್ ದೇವಾಲಯವನ್ನು ಮತ್ತೊಮ್ಮೆ ನಿರ್ಮಿಸಿದರಾಯಿತು. ಹಳೆಯದಕ್ಕಿಂತ ಹೊಸದೇ ಯಾವಾಗಲೂ ಉತ್ತಮವಾದುದು. ಜರುಸಲೇಮ್ ನ ಹಳೆಯ ಮಂದಿರ ಭಗ್ನಾವಶೇಷವಾಗಿದೆ ಎಂದು ಕೊರಗುವುದೇಕೆ? ಧರ್ಮವನ್ನೇನು ಹಳೆಯದಾದಷ್ಟೂ ಗುಣಮಟ್ಟ ಹೆಚ್ಚುವ ಮದಿರೆಯೆಂದು ಭಾವಿಸಿದಿರೇ? ಧರ್ಮವನ್ನು ಆ ರೀತಿ ಅವಹೇಳನ ಮಾಡಬಾರದು. ಅತ್ಯಾಧುನಿಕ ತಂತ್ರಜ್ಞಾನ  ಬಳಸಿಕೊಂಡು ಹಿಂದಿನಷ್ಟೇ ಭವ್ಯವಾದ  ಮಂದಿರವನ್ನು ನಿರ್ಮಿಸಿಕೊಳ್ಳಿ, ಇದೊಂದೇ ಈ ಪುರಾತನ ಸಮಸ್ಯೆಗೆ ಪರಿಹಾರವೆಂದು ಸದ್ಯಕ್ಕೆ ನನಗೆ ತೋರುತ್ತಿರುವುದು. ಆಗ ಅಮೆರಿಕಾದ ನಿಜವಾದ  ಬಣ್ಣ ಬಯಲಾಗುತ್ತದೆ. ಅವರಿಗೆ ಯಹೂದಿಗಳ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ನಿಮಗೆ ಅರ್ಥವಾಗುತ್ತದೆ. ಆಂತರ್ಯದಲ್ಲಿ ಅಮೆರಿಕಾದ ಎಲ್ಲ ರಾಜಕಾರಿಣಿಗಳೂ ಮೂಲಭೂತವಾದೀ ಕ್ರಿಶ್ಚಿಯನ್ನರಾಗಿದ್ದಾರೆ, ಇನ್ನು ರೊನಾಲ್ಡ್ ರೇಗನ್ ಒಬ್ಬ ಫ್ಯಾಸಿಸ್ಟ್ ಕ್ರಿಶ್ಚಿಯನ್ ಆಗಿದ್ದಾನೆ. ಅವರು ಖಂಡಿತವಾಗಿ ನಿಮ್ಮನ್ನು ಇಲ್ಲಿಗೆ ಬರಲು ಬಿಡುವುದಿಲ್ಲ. ಕೊನೆಯ ಪಕ್ಷ ಇದರಿಂದಲಾದರೂ ಅವರ ನಿಜವಾದ ಬಣ್ಣ ನಿಮಗೆ ತಿಳಿಯಲಿದೆ”

ನಾನಂತೂ ಎಲ್ಲ ಧರ್ಮಗಳನ್ನೂ ವಿರೋಧಿಸುತ್ತೇನೆ. ಅಂದ ಮಾತ್ರಕ್ಕೆ ಯಾರಾದರೂ ಧರ್ಮದ ಹೆಸರಿನಲ್ಲಿ ಅನ್ಯರಿಗೆ ಕಿರುಕುಳ ನೀಡಿದರೆ, ಅನ್ಯರ ಹತ್ಯೆಗಿಳಿದರೆ, ಅನ್ಯರಿಗೆ ಭಯದ ವಾತಾವರಣ ಸೃಷ್ಟಿಸಿದರೆ ಅದನ್ನು ಸಹಿಸಲಾರೆ. ಈಗಂತೂ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಯಹೂದಿಗಳು ತಮ್ಮ ತಮ್ಮಲ್ಲೇ ಕಿತ್ತಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಮುಸಲ್ಮಾನರು ಜಗತ್ತಿನ ಎಲ್ಲ ಭಾಗಗಳಲ್ಲೂ ಭಯೋತ್ಪಾದಕರಾಗಿ ತಯಾರಾಗುತ್ತಿದ್ದಾರೆ. ಯಹೂದೀ ರಾಜ್ಯದ ಅಡಿಪಾಯವನ್ನೇ ನಾಶಮಾಡಲು ನಿಂತಿದ್ದಾರೆ. ವ್ಯಾಟಿಕನ್ ಸಹ ಇಸ್ರೇಲ್ ಒಂದು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಇದು ಕ್ರಿಶ್ಚಿಯನ್ ಮನಸ್ಥಿತಿ ಎಂಥದೆಂದು ತೋರಿಸುತ್ತದೆ. ಧರ್ಮದ ಈ ಅಮಲನ್ನು ಏರಿಸಿಕೊಳ್ಳದ ಸಮುದಾಯ ಯಾವುದಾದರೂ ಇದ್ದರೆ ಅದು ಪ್ರಾಯಶಃ ನನ್ನ ಸನ್ಯಾಸಿಗಳ ಸಮುದಾಯ ಮಾತ್ರ. ನಾನು ಮತ್ತೇನನ್ನೂ ಹೇಳುತ್ತಿಲ್ಲ. ಮನುಷ್ಯ ಸ್ವಲ್ಪ ವಿವೇಚನೆ ಬೆಳೆಸಿಕೊಳ್ಳಬೇಕು, ಸಂವೇದನಾಶೀಲನಾಗಬೇಕು ಎಂದು ಕರೆ ನೀಡುತ್ತಿದ್ದೇನೆ. ಇಷ್ಟು ಮಾತ್ರಕ್ಕೆ ಪೋಪ್ ನನ್ನ ಮೇಲೆ ಸಿಟ್ಟಾಗಿದ್ದಾರೆ, ಶಂಕರ ಮಠದ ಪೀಠಾಧ್ಯಕ್ಷರು ನನ್ನ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇಮಾಮ್ ಗಳು ನನ್ನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪ್ರಪಂಚದ ಜನ ಮೂರ್ಖರಾಗೇ ಜೀವಿಸಬೇಕು ಎಂಬ ಬಯಕೆ ಅವರುಗಳಿಗೆ ಇದ್ದಂತಿದೆ.

ಮೂಲ: ಓಶೋ

ಅನುವಾದ: ಡಾ.ಟಿ.ಎನ್.ವಾಸುದೇವಮೂರ್ತಿ, ಕನ್ನಡ ಪ್ರಾಧ್ಯಪಕರು

Leave a Reply