ಮಹಾರಾಷ್ಟ್ರ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ರಾಜ್ಯ ಸರ್ಕಾರ

3 years ago

ಬೆಂಗಳೂರು: ಬೆಳಗಾವಿ, ಬೀದರ್ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ ರಾಜ್ಯದ 865 ಗ್ರಾಮಗಳ ನಿವಾಸಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿರುವ ಕ್ರಮದ ವಿರುದ್ಧ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ಸಲ್ಲಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ‌ ಇಂದು ಬೆಳಿಗ್ಗೆ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಚುನಾವಣೆ ಸಮಯದಲ್ಲಿ ಅನಗತ್ಯ ಗೊಂದಲಕ್ಕೆ ಅವಕಾಶ ನೀಡದಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಲಹೆ‌ ಮಾಡುವಂತೆ ಮನವಿ ಮಾಡಿದರು ಎಂದು ವರದಿಯಾಗಿದೆ.

ಸಂಸತ್ ಅಧಿವೇಶನದ ನಡುವೆ ಕೇಂದ್ರ ‌ಸಚಿವ‌ ಪ್ರಹ್ಲಾದ ಜೋಶಿ ಕೂಡ ಅಮಿತ್ ಶಾ ಜೊತೆಗೆ ಈ ವಿಷಯವಾಗಿ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರದ ನಡುವೆ ಚುನಾವಣೆ ಸಮಯದಲ್ಲಿ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಕೂಡಲೆ ಈ ಗೊಂದಲಗಳಿಗೆ ಆ ಸರ್ಕಾರವೇ ತೆರೆ ಎಳೆಯಲು ಸೂಚಿಸುವಂತೆ ಮನವಿ ಮಾಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಈ‌ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌
ಮಹಾರಾಷ್ಟ್ರ ಸರ್ಕಾರದ ನಡೆಗೆ ಕಿಡಿಕಾರಿದರು. ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ ಈ ಬಗ್ಗೆ ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ತೀರ್ಪು ಬರುವರೆಗೂ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಖುದ್ದು ಕೇಂದ್ರ ಗೃಹಸಚಿವ ಅಮಿತ್ ಷಾ ಅವರೇ ಸೂಚನೆ ಕೊಟ್ಟಿದ್ದರು. ಆದರೆ ಮಹಾರಾಷ್ಟ್ರದ ಸಚಿವ ಸಂಪುಟ ಗಡಿಭಾಗದ ಜನರಿಗೆ ಆರೋಗ್ಯ ವಿಮೆ ಮಾಡಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಸ್ತವವಾಗಿ ಗಡಿಭಾಗದ ಜನರಿಗೆ ಮೂಲಸೌಕರ್ಯಗಳನ್ನು ನಾವು ಕಲ್ಪಿಸಿಕೊಡಬೇಕು ಅಲ್ಲಿನ ಜನರೇ ಮೂಲ ಸೌಕರ್ಯಗಳಿಲ್ಲ ಎಂದು ನಮ್ಮ ಗಮನಕ್ಕೆ ತಂದಿದ್ದಾರೆ. ಪ್ರಕರಣ ಇತ್ಯರ್ಥವಾಗುವವರೆಗೂ ಈ ರೀತಿ ಮಾಡುವುದು ಸರಿಯಲ್ಲ . ಮಹಾರಾಷ್ಟ್ರದ ಸಚಿವ ಸಂಪುಟದ ನಿರ್ಣಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ. ತಕ್ಷಣವೇ ಸಚಿವ ಸಂಪುಟದ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿ ನಮ್ಮ ವಿರೋಧವನ್ನು ಸಹ ತಿಳಿಸಲಾಗುವುದು. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೂ ತರುತ್ತೇವೆ. ಯಾವುದೇ ಕಾರಣಕ್ಕೂ ನೆಲಜಲದ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply