ಕಲಬುರಗಿ: ಹಣ ನೀಡುವಂತೆ ತಂದೆಯನ್ನು ಒತ್ತಾಯಿಸಿದ್ದ ಮಗ ಹಣ ನೀಡದ ಕಾರಣಕ್ಕೆ ತನ್ನ ತಂದೆಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ. ನಗರದ ಆಳಂದ ಚೆಕ್ಪೋಸ್ಟ್ ಬಳಿಯ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್ ರಾಠೋಡ್ ಎಂಬುವವರ ಹಿರಿಯ ಮಗ ಸುರೇಶ ರಾಠೋಡ್ ಈ ಕೃತ್ಯ ಎಸಗಿ ಪಲಾಯನಗೈದಿದ್ದಾನೆ.
ತರಕಾರಿ ವ್ಯಾಪಾರಿ ದಿಲೀಪ್ ರಾಠೋಡ್ ಗೆ 15 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ವೇಳೆ ಆಕ್ರೋಶಗೊಂಡ ಸುರೇಶ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಸುರೇಶ್ ರಾಠೋಡ್ ಮತ್ತು ಕೃತ್ಯಕ್ಕೆ ಪ್ರಚೋದನೆ ನೀಡಿದ ರವಿ ರಾಠೋಡ್ ವಿರುದ್ಧ ದಿಲೀಪ್ ರಾಠೋಡ್ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.




