ಉರಿಗೌಡ – ನಂಜೇಗೌಡ ಎಂಬ ಹೆಸರಿನ ಐತಿಹಾಸಿಕ ಚಲನಚಿತ್ರ ನಿರ್ಮಿಸುವ ಕುರಿತು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಲಾಗಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಈ ಚಿತ್ರದ ನಿರ್ಮಾಪಕರು ರಾಜ್ಯ ಸರ್ಕಾರದ ಹಾಲಿ ತೋಟಗಾರಿಕಾ ಸಚಿವರಾದ ಶ್ರೀ ಮುನಿರತ್ನ ಉರುಫ್ ಮುನಿರತ್ನಂ ನಾಯ್ಡು.

ಶ್ರೀಯುತರು ಬೆಂಗಳೂರಿನ ಬಿಬಿಎಂಪಿ ಗುತ್ತಿಗೆದಾರರಾಗಿದ್ದವರು, ಇವರು ಕಟ್ಟಿದ್ದ ಕಾಮಗಾರಿಯ ಕಾಂಪೌಂಡ್ ವಾಲ್ ಕುಸಿದು ಬಿದ್ದು ಸಂಜನಾ ಎಂಬ ವಿದ್ಯಾರ್ಥಿನಿ ಅಸು ನೀಗಿದ್ದರು. ಸದರಿ ವಿಚಾರ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರ ಕಾಲದಲ್ಲಿ ವಿಚಾರಣೆ ಆರಂಭವಾಗಿತ್ತು. ಇವರ ಸಹೋದರ ರೌಡಿ ಪಟ್ಟಿಯಲ್ಲಿದ್ದು ಖ್ಯಾತ ನಾಮರಾಗಿದ್ದರು.
ಇಷ್ಟೆಲ್ಲಾ ಅರ್ಹತೆಗಳು ಇರುವಾಗ ಕಾಂಗ್ರೆಸ್ ಪಕ್ಷ ಸುಮ್ಮನಿರಲು ಸಾಧ್ಯವೇ.. ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಕೆ.ಹರಿಪ್ರಸಾದ್ ಅವರು ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರು. ಚುನಾವಣೆಯಲ್ಲಿ ಜಯಿಸಿ, ಜನಸೇವೆಯಲ್ಲಿ ತೊಡಗಿ ಕೋಟ್ಯಾಂತರ ವೆಚ್ಚದ ಭಾರೀ ತಾರಾಗಣದ ಚಲನಚಿತ್ರ ನಿರ್ಮಾಪಕರಾಗಿ ಮತ್ತಷ್ಟು ಹೆಸರು ಕೀರ್ತಿ ಗಳಿಸಿದರು.
ಕಾಂಗ್ರೆಸ್ ಪಕ್ಷ ಶ್ರೀಯುತರಿಗೆ ಪದೋನ್ನತಿ ನೀಡಲು ತೀರ್ಮಾನಿಸಿ 2013 ವಿಧಾನಸಭೆ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಆಶೀರ್ವಾದ ಮಾಡಿ ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಡಿ ಕೆ ರವಿಯವರ ಮಾವ ಹನುಮಂತರಾಯಪ್ಪನವರಿಗೆ ಟಿಕೆಟ್ ತಪ್ಪಿಸಿ ಮುನಿರತ್ನ ಅವರಿಗೆ ವಿಧಾನಸಭಾ ಟಿಕೆಟ್ ನೀಡಿದರು. ಈ ಪರೀಕ್ಷೆಯಲ್ಲೂ ಯಶಸ್ವಿಯಾಗಿ ತೇರ್ಗಡೆಯಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಪರಮಾಪ್ತ SBM ಗ್ರೂಪಿನ ಸದಸ್ಯರಾದರು. SBM ಎಂದರೆ ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಮುನಿರತ್ನ ಎಂಬ ತ್ರಿಮೂರ್ತಿಗಳ ಗುಂಪು.
ಈ ಮಧ್ಯೆ 2018 ರಲ್ಲಿ ನಕಲಿ ವೋಟರ್ ಐ ಡಿ ಮತ್ತು ನಕಲಿ ಮತದಾರರ ಪಟ್ಟಿ ತಯಾರಿಸುತ್ತಿದ್ದಾರೆಂದು ಬಿಜೆಪಿ ಯವರು ಮುನಿರತ್ನ ವಿರುದ್ಧ ಆರೋಪ ಮಾಡಿ ಈ ಕುರಿತು ಹೋರಾಟ ನಡೆಸಿ ಚುನಾವಣೆ ಆಯೋಗ ಮತ್ತು ರಾಜ್ಯ ಹೈಕೋರ್ಟಿನಲ್ಲಿ ದೂರು ದಾಖಲಿಸಿದ್ದು ಅವುಗಳ ವಿಚಾರಣೆ ನಡೆಯುತ್ತಿದೆ.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗಿಂತ ನೂರಾರು ಪಟ್ಟು ಅಂದರೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡಿದರು. 2018 ರಲ್ಲಿ ಮತ್ತೊಮ್ಮೆ ಆಯ್ಕೆಯಾದರು, ಆದರೆ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಅವರ ಮೆಚ್ಚಿನ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿಲ್ಲವೆಂದು ಬೇಸರ ಮಾಡಿಕೊಂಡರು. ಕೊನೆಗೊಮ್ಮೆ ಸಿದ್ದರಾಮಯ್ಯನವರೇ 2019 ರ ಲೋಕಸಭಾ ಚುನಾವಣೆಯವರೆಗೆ ಮಾತ್ರ ಸಮ್ಮಿಶ್ರ ಸರ್ಕಾರವಿರುತ್ತದೆ ಎಂದು ಹೇಳಿ ಇವರಿಗೆ ಸಮಾಧಾನಪಡಿಸಿದ ಆಡಿಯೋ ಗಳು ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ಸಿದ್ದರಾಮಯ್ಯನವರ ಅಭೀಪ್ಸೆಯಂತೆ 2019 ರ ಲೋಕಸಭಾ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರ ಉರುಳಿತು. ಸಿದ್ದರಾಮಯ್ಯ ಪರಮಾಪ್ತ ಶಾಸಕರು ಮತ್ತು ಜನತಾ ದಳದ ಮೂರು ಮಂದಿ ಶಾಸಕರು ಸ್ವಯಂ ಪ್ರೇರಿತರಾಗಿ ಆಪರೇಷನ್ ಕಮಲಕ್ಕೆ ತುತ್ತಾಗಿ ಇಂದಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ.
ಮುನಿರತ್ನಂ ಅವರು, ನಂಜೇಗೌಡ ಉರಿಗೌಡ ಸಿನೆಮಾ ನಿರ್ಮಿಸುತ್ತಾರೆಂದು ಕಾಂಗ್ರೆಸ್ ಪಕ್ಷದ ಪರಗತಿಪರರು,ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುವುದನ್ನು ಬಿಡಿ. ಚುನಾವಣೆ ಘೋಷಣೆಯಾಗಲಿ ಬಾಂಬೆ ಬಾಯ್ಸ್ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ನೇತೃತ್ವವನ್ನು ಒಪ್ಪಿ ಹಿಂತಿರುಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
– ಜಿ.ಟಿ.ನರೇಂದ್ರ ಕುಮಾರ್, ವಕೀಲರು ಮತ್ತು ಕಾನೂನು ಸಲಹೆಗಾರರು




