ಬೆಂಗಳೂರು: ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲ ವಾರ್ಡ್ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಪಡೆದ 433 ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ವಸತಿ ಸಚಿವ ವಿ.ಸೋಮಣ್ಣ, ಮಾತನಾಡಿ ಮಹಿಳೆ ಎಲ್ಲರ ಜೀವನದಲ್ಲಿ ತಾಯಿಯಾಗಿ, ತಂಗಿ, ಅಕ್ಕ, ಮಡದಿಯಾಗಿ ಇಡಿ ಕುಟುಂಬವನ್ನು ಯಶ್ವಸಿಯಾಗಿ ನಿಭಾಯಿಸುವಳು. ಮಹಿಳೆ ಇಂದು ಅಬಲೆಯಲ್ಲ, ಸಬಲೆ ಹಾಗೂ ರಾಜಕೀಯ, ಚಲನಚಿತ್ರ, ರಂಗಭೂಮಿ, ವಿಜ್ಞಾನ, ತಂತ್ರಜ್ಞಾನ ಎಲ್ಲ ರಂಗದಲ್ಲಿ ಪುರುಷರ ಸರಿಸಮಾನವಾಗಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಮಹಿಳಾ ಕಲ್ಯಾಣ ಕಾರ್ಯಕ್ರಮವನ್ನು 1984ರಲ್ಲಿ ಮಹಾನಗರ ಪಾಲಿಕೆಯಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೆ ತಂದವನು ನಾನು. ಬಡತನ ರೇಖೆಯಲ್ಲಿರುವ ಮಹಿಳೆಯರಿಗೆ ಟೈಲರಿಂಗ್ ಯಂತ್ರ ದುಡಿಮೆಗೆ ಆಸರೆಯಾಗಿದೆ. ಮಹಿಳೆಯರಿಗೆ ಟೈಲರಿಂಗ್ ಯಂತ್ರ ವಿತರಣಾ ಯೋಜನೆ ಜಾರಿಗೆ ಬಂದು 30 ವರ್ಷಗಳಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ 10000 ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದರು.
ಇದೇ ತಿಂಗಳು 23ನೇ ತಾರೀಖು ಸಂಜೆ ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಲೋಕರ್ಪಣೆಯಾಗಲಿದೆ. ಚಂದ್ರಾ ಲೇಔಟ್ ನಲ್ಲಿ 20ನೇ ತಾರೀಖು ಉನ್ನತ ವ್ಯಾಸಂಗಕ್ಕಾಗಿ ಐ.ಎ.ಎಸ್.ತರಬೇತಿ ಕೇಂದ್ರ, ಬೆಂಗಳೂರು ನಗರದ 9 ವಿಧಾನಸಭಾ ಕ್ಷೇತ್ರದಲ್ಲಿ 52 ಸಾವಿರ ಮನೆ ನಿರ್ಮಾಣ ಮತ್ತು ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಿಂದ 10 ಲಕ್ಷ ಮನೆ ನಿರ್ಮಾಣ ನಿರ್ಮಿಸಲಾಗಿದೆ ಎಂದರು.
ಬಾಲಕಿಯರಿಗೆ ಶಾಲೆಗಳಿಗೆ ಮುಟ್ಟಿನ ಸಮಸ್ಯೆಗೆ 1ವರ್ಷ ಉಚಿತವಾಗಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮಾಡಲಾಗುತ್ತಿದೆ. ನಿಟ್ಟಿಂಗ್, ಎಂಬ್ರಾಯಿಡರಿ, ಟೈಲರಿಂಗ್ ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ಖಾಸಗಿಯಲ್ಲಿ ಸುಲಭವಾಗಿ ಉದ್ಯೋಗ ಸಿಗುತ್ತದೆ ಎಂದರು.
ಬಡವ ಎತ್ತರಕ್ಕೆ ಬೆಳೆಯಬೇಕು ಸಾಮಾನ್ಯರಿಗೆ ಸಹಾಯ ಮಾಡುವಂತೆ ಆಗಬೇಕು. ಇಂದು ಹೊಲಿಗೆ ಯಂತ್ರವನ್ನು ತೆಗೆದುಕೊಂಡ ಮಹಿಳೆಯರು ಜೀವನದಲ್ಲಿ ಮುಂದೆ ಬಂದು ಹತ್ತಾರು ಜನರಿಗೆ ಉದ್ಯೋಗ ಕೊಡುವಂತೆ ಆಗಲಿ ಎಂದು ಶುಭ ಹಾರೈಸಿದರು.
ವಿಶೇಷ ಆಯುಕ್ತ ಶಂಕರ್ ರೆಡ್ಡಿ, ಜಂಟಿ ಆಯುಕ್ತ ಲೋಕನಾಥ್, ವಿಶ್ವನಾಥಗೌಡ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡ, ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ರಾಮಪ್ಪ. ಕೊಳಗೇರಿ ಅಭಿವೃದ್ದಿ ಮಂಡಳಿ ನಿರ್ದೇಶಕ ಕ್ರಾಂತಿರಾಜು, ಮುಖಂಡರುಗಳಾದ ರಾಜಪ್ಪ, ಶ್ರೀಧರ್ ಮೊದಲಾದವರು ಪಾಲ್ಗೊಂಡಿದ್ದರು.




