ಐವರು ಉಗ್ರರು ವಿಧ್ವಂಸಕ ಕೃತ್ಯಕ್ಕೆ ನಡೆಸಿದ‌ ಮಾಸ್ಟರ್ ಪ್ಲಾನ್ ಬಹಿರಂಗ

3 years ago

#masterplan #terrorists #sabotage #revealed

ಬೆಂಗಳೂರು: ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಶಂಕಿತ ಐವರು ಉಗ್ರರು ವಿಧ್ವಂಸಕ ಕೃತ್ಯಕ್ಕೆ ನಡೆಸಿದ‌ ಮಾಸ್ಟರ್ ಪ್ಲಾನ್ ಬಹಿರಂಗಗೊಂಡಿದೆ. ಇದನ್ನು ಆಧರಿಸಿ ರಾಜ್ಯಾದ್ಯಂತ ಕಟ್ಟೆಚ್ಚರಕ್ಕೆ ಆದೇಶಿಸಿದ್ದು, ಕೋಮು ಸೂಕ್ಷ್ಮ ಪ್ರದೇಶದಲ್ಲಿ ವ್ಯಾಪಕ ನಿಗಾ ವಹಿಸಲಾಗಿದೆ.

ಬಂಧಿತ ಶಂಕಿತ ಉಗ್ರರು ಮಹಾನಗರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಅಂಶವನ್ನು  ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದಾರೆ.

ರಾಜ್ಯದ ಹಲವೆಡೆ ಹಿಂದೂ- ಮುಸ್ಲಿಂ ಗಲಭೆ ನಡೆಯುವ ತಾಣಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದು ಯಾವುದೇ ಅನುಮಾನ ಬಾರದಂತೆ ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಂಡು ಸ್ಫೋಟಗಳನ್ನು ನಡೆಸಲು ಶಂಕಿತ ಉಗ್ರರು ರಹಸ್ಯ ತಯಾರಿ ನಡೆಸುತ್ತಿದ್ದರು. ಸಾಕಷ್ಟು ಆಲೋಚನೆ ನಡೆಸಿ ರಾಜ್ಯದ  ಹಲವು ಭಾಗಗಳನ್ನು ಗುರಿಯಾಗಿಸಿಕೊಂಡು  ಕಳೆದ ಆರು ತಿಂಗಳಿಂದ ಸಾಧನಗಳನ್ನು ಶೇಖರಿಸಿಕೊಳ್ಳುತ್ತಿದ್ದರು.

ಸ್ಫೋಟ ಹಾಗೂ ಗನ್‌ ದಾಳಿಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಶಂಕಿತರಿಗೆ ಗನ್‌ ಬಳಕೆ, ಗ್ರೆನೇಡ್ ಬಳಕೆ ಬಗ್ಗೆಯೂ ಅಪರಿಚಿತನೊಬ್ಬನಿಂದ ತರಬೇತಿ ಕೊಡಿಸಲಾಗಿತ್ತು ಎಂಬ ಅಂಶಗಳನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯದ ಹಲವೆಡೆ ಹಿಂದೂ ಮುಸ್ಲಿಂ ಗಲಾಟೆ ಸಮಯದಲ್ಲಿ ಸ್ಫೋಟ ನಡೆಸುವುದು, ಗಲಭೆಯನ್ನು ಸೃಷ್ಟಿಸುವುದು ಶಂಕಿತರ ಮಾಸ್ಟರ್ ಪ್ಲಾನ್ ಆಗಿತ್ತು. ಇದಕ್ಕಾಗಿ ಹಿಂದೂ ಮುಸ್ಲಿಂ ಗಲಾಟೆ ನಡೆಯುವ ಸ್ಥಳಗಳನ್ನು ಇವರು ಗುರುತಿಸಿಕೊಂಡಿದ್ದರು. ಮುಸ್ಲಿಂ ಸಮುದಾಯ ಕಡಿಮೆ ಇರುವ ಪ್ರದೇಶದಲ್ಲಿ ವಿಧ್ವಂಸಕಕ್ಕೆ ತಯಾರಿ ಮಾಡಿಕೊಂಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಗುಲ್ಬರ್ಗಾ, ಹುಬ್ಬಳ್ಳಿಯ ಪ್ರದೇಶಗಳನ್ನು ಗುರುತಿಸಿಕೊಂಡಿದ್ದರು. ಹಿಂದೂ- ಮುಸ್ಲಿಂ ಗಲಾಟೆ ಆಗಬೇಕು, ಆದರೆ ಮುಸ್ಲಿಮರಿಗೆ ಹೆಚ್ಚು ಹಾನಿಯಾಗಬಾರದು ಎಂದು ಯೋಜಿಸಿದ್ದರು. ಹಬ್ಬ, ಹರಿದಿನಗಳಲ್ಲಿ ಸೇರುವ ಜನಗಳೇ ಇವರ ಮುಖ್ಯ ಗುರಿಯಾಗಿದ್ದರು ಎಂದು ಗೊತ್ತಾಗಿದೆ.
ಬೆಂಗಳೂರಿನಂತೆ ಬೇರೆ ಬೇರೆ ಜಿಲ್ಲೆಗಳ ಕಡೆಯೂ ತನಿಖಾ ತಂಡ ಇದೀಗ ಫೋಕಸ್ ಮಾಡಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವ ಶಂಕಿತರನ್ನೂ ತನಿಖೆಯ ವ್ಯಾಪ್ತಿಗೆ ತರಲಾಗುತ್ತಿದೆ.

ಶಂಕಿತ ಉಗ್ರರು ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಶೇಖರಣೆಗೆ ಮುಂದಾಗಿದ್ದು, ಒಬ್ಬೊಬ್ಬ ಶಂಕಿತನ ಮನೆಯಲ್ಲಿಯೂ ಭಾರಿ ಶಸ್ತ್ರಾಸ್ತ್ರ ಶೇಖರಣೆಗೆ ಪ್ಲಾನ್ ಮಾಡಿಕೊಂಡಿದ್ದು, ಬೇರೆ ಬೇರೆ ಕಡೆಯಿಂದ ಬೆಂಗಳೂರಿಗೆ ಶಸ್ತ್ರಾಸ್ತ್ರ ರವಾನೆ ಮಾಡಲಾಗುತ್ತಿತ್ತು. ಕರ್ನಾಟಕದ ಹಲವು ಭಾಗಗಳಿಗೂ ಬಳಕೆಯಾಗುವವಷ್ಟು ಬಾಂಬ್‌ಗಳು, ಪಿಸ್ತೂಲ್‌ಗಳು, ಬುಲೆಟ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಇವರು ಸಂಗ್ರಹ ಮಾಡುತ್ತಿದ್ದರು.

ಎಲ್ಲವನ್ನೂ ಸುರಕ್ಷಿತವಾಗಿ ಒಂದೆಡೆ ಬಚ್ಚಿಡುವ ಸಂಚು ಮಾಡಿಕೊಂಡಿದ್ದ ಇವರು ಇನ್ನೂ ಹಲವು ಕಡೆ ಶಸ್ತ್ರಾಸ್ತ್ರ ಶೇಖರಿಸಿರುವ ಶಂಕೆ ಇದೆ. ಈ ಬಗ್ಗೆ ಐವರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತರಿಸಿಕೊಂಡರು, ಅದು ಹೇಗೆ‌ ಬೆಂಗಳೂರು ಸೇರಿತು ಅನ್ನುವುದರ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.

ಎನ್.ಐ.ಎ.ಗೆ ಮಾಹಿತಿ: ಬಂಧನಕ್ಕೊಳಗಾಗಿರುವ ಐವರು ಶಂಕಿತ ಉಗ್ರರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ‌ಮಾಹಿತಿಯನ್ನು  ಸಂಗ್ರಹಿಸಿದ್ದಾರೆ.

ನಗರದ ಸಿಸಿಬಿ ಪೊಲೀಸ್ ವಶದಲ್ಲಿರುವ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫಾಜಿಲ್ ರನ್ನು ವಿಚಾರಣೆ ವೇಳೆ ನೀಡಿರುವ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳ ತಂಡ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳ ಸಂಚಿನ ಆರೋಪಿಗಳ ತನಿಖೆಯಲ್ಲಿ ‌ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರು ಸಂಪರ್ಕ ಹೊಂದಿರುವುದು ಕಂಡು ಬಂದರೆ ಇಡೀ ಪ್ರಕರಣ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ.

ಎನ್ ಐಎ ಪ್ರಕರಣವನ್ನು ತೆಗೆದುಕೊಳ್ಳದಿದ್ದರೆ, ರಾಜ್ಯ ಪ್ರಕರಣವನ್ನು ಎನ್ ಐಎ ವಹಿಸಲು ಸೂಚಿಸುವುದೆ ಎನ್ನುವುದರ ಮೇಲೆ ಎನ್‌ಐಎಗೆ ಹಸ್ತಾಂತರಿಸುವುದು ನಿರ್ಧರವಾಗಲಿದೆ.

ಇದನ್ನು ಈಗಲೇ ಹೇಳುವುದು ಕಷ್ಟ. ಶಂಕಿತರ ವಿಚಾರಣೆ ನಡೆಸಬೇಕಿದ್ದು, ಆವರಿಂದ ವಶಪಡಿಸಿಕೊಂಡ ವಸ್ತು, ಇತರೆ ಮಾಹಿತಿಗಳ ಆಧಾರದ ಮೇಲೆ ತನಿಖೆಯೂ ಅವಲಂಬಿತವಾಗಿರಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply