ಬೆಂಗಳೂರು: ಸುಳ್ಳು ಮತ್ತು ತಿರುಚಿದ ವಿಷಯಗಳ ಹರಡುವಿಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಸಾಮಾಜಿಕ ಜಾಲ ತಾಣ ಟ್ವಿಟರ್ ಗೆ ರಾಜ್ಯ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ನಿಯಂತ್ರಿಸಲು ಹೊರಡಿಸಿದ್ದ ಸರ್ಕಾರದ ಹಲವು ನಿರ್ಬಂಧಗಳು ಮತ್ತು ಟೇಕ್ ಡೌನ್ ಆದೇಶಗಳನ್ನು ಪ್ರಶ್ನಿಸಿ, “ಟ್ವಿಟರ್ ಸಂಸ್ಥೆ” ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಂತೆಯೇ, ಟ್ವಿಟರ್ ಗೆ 50 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ತೀರ್ಪು ಪ್ರಕಟಿಸಿದ್ದು ಟ್ವಿಟರ್ ಗೆ ದಂಡ ವಿಧಿಸಿದ್ದಾರೆ
ದಂಡದ ಮೊತ್ತವನ್ನು 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಲಾಗಿದೆ. ಒಂದೊಮ್ಮೆ 45 ದಿನಗಳಲ್ಲಿ ದಂಡವನ್ನು ಪಾವತಿಸಲು ವಿಫಲವಾದರೆ ದಿನಕ್ಕೆ ರೂಪಾಯಿ 5 ಸಾವಿರದಂತೆ ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಹೇಳಿದೆ.
ಟ್ವೀಟ್‌ಗಳನ್ನು ಮತ್ತು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರಕ್ಕೆ ಅಧಿಕಾರವಿದೆ ಎಂಬುದು ಕೇಂದ್ರ ಸರ್ಕಾರದ ಪರ ವಕೀಲರ ವಾದ ಸಮರ್ಥನೆಯಿಂದ ಪೀಠಕ್ಕೆ ಮನವರಿಕೆಯಾಗಿದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.



