ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧಗಳಿಗೆ ಭಯವೇ ಇಲ್ಲದಂತಾಗಿದೆ ಎಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ಸದಸ್ಯರು ಆರೋಪಿಸುವ ಮೂಲಕ ಎರಡು ಸದನದ ಕಲಾಪದಲ್ಲಿ ಕೆಲ ಕಾಲ ಕಾವೇರಿದ ವಾತಾವರಣ ಸೃಷ್ಟಿಯಾಯಿತು.
ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ಈ ವಿಷಯ ಕುರಿತಾಗಿ ನಿಲುವಳಿ ಸೂಚನೆ ಅಡಿ ಚರ್ಚೆಗೆ ಪ್ರಸ್ತಾವನೆ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ಆಡಳಿತದ ಅವಧಿಯಲ್ಲಿ ಕಾನೂನು ವ್ಯವಸ್ಥೆಯನ್ನು ಪಾಲಿಸುವವರೇ ಇಲ್ಲವಾಗಿತ್ತು ಎಂದು ತಿರುಗೇಟು ನೀಡಿದರು.
ಈ ವೇಳೆ ಅಶೋಕ್ ಬೆಂಬಲಕ್ಕೆ ಧಾವಿಸಿದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಹಲವರು ಕಾಂಗ್ರೆಸ್ ಶಾಸಕರಿಗೆ ಪ್ರತ್ಯುತ್ತರ ನೀಡಲು ಆರಂಭಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಆಗ ಮಧ್ಯಪ್ರದೇಶಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವನ್ನು ನಿಯಮಾನುಸಾರ ನಿಲುವಳಿ ಸೂಚನೆಯಲ್ಲಿ ಚರ್ಚಿಸಲು ಅವಕಾಶವಿಲ್ಲ ಎಂದು ಆಕ್ಷೇಪಿಸಿದರು. ಅಲ್ಲದೆ ಬೇರೆ ರೂಪದಲ್ಲಿ ಚರ್ಚಿಸಲು ತಮ್ಮ ತಕರಾರು ಇಲ್ಲ ಎಂದರು.
ಅಶೋಕ್ ಅವರ ಬೆಂಬಲಕ್ಕೆ ನಿಂತ ಬಿಜೆಪಿಯ ಹಿರಿಯ ಸದಸ್ಯರಾದ ಸುರೇಶ್ ಕುಮಾರ್, ಸುನೀಲ್ ಕುಮಾರ್ ಹಾಗೂ ಸಿ.ಸಿ.ಪಾಟೀಲ್ ಅವರು ನಿಲುವಳಿ ಸೂಚನೆಯಡಿ ಹತ್ತಾರು ಬಾರಿ ಕಾನೂನು ಮತ್ತು ಸುವ್ಯವಸ್ಥೆ ವಿಚಾರ ಸದನದಲ್ಲಿ ಚರ್ಚೆಯಾಗಿದೆ. ನಮಗೂ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಎರಡೂ ಕಡೆಯ ಅಭಿಪ್ರಾಯವನ್ನು ಆಲಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ವಿಚಾರ ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.
ಈ ವಿಚಾರವನ್ನು ನಿಯಮ 69ರಡಿ ಚರ್ಚೆಗೆ ಅನುವು ಮಾಡಿಕೊಡಲಾಗುವುದು. ವಿರೋಧ ಪಕ್ಷದ ನಾಯಕರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಾತನಾಡಬಹುದು. ಸಮಯ ಅಭಾವವಿರುವುದರಿಂದ ಸಹಕರಿಸಬೇಕು ಎಂದರು. ಇದಕ್ಕೆ ಪ್ರತಿ ಪಕ್ಷ ನಾಯಕ ಅಶೋಕ್ ಸಮ್ಮತಿಸುವುದರೊಂದಿಗೆ ಚರ್ಚೆಗೆ ತೆರೆ ಬಿದ್ದಿತು.
ವಿಧಾನ ಪರಿಷತ್ ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಈ ವಿಷಯ ಪ್ರಸ್ತಾಪಿಸಿ ನಿಳುವಳಿ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರು. ಇಲ್ಲಿಯೂ ಕೂಡ ಈ ವಿಚಾರವಾಗಿ ಕೆಲ ಕಾಲ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಈ ವಿಷಯ ಕುರಿತಂತೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆಯುವ ಚರ್ಚೆಯಲ್ಲಿ ಮಾತನಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಪಕ್ಷ ಸದಸ್ಯರು ತಮ್ಮ ಪಟ್ಟು ಸಡಲಿಸಿದರು
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಮುಗಿಯುತಿದಂತೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ ಎಂದರು.
ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಬೆಂಗಳೂರು ಕ್ರೈಂ ರಾಜಧಾನಿಯಾಗುತ್ತಿದೆ. ಸೈಬರ್ ಕ್ರೈಂನಲ್ಲಿ ಮೊದಲ ಸ್ಥಾನದಲ್ಲಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ. ಸೈಬರ್ ಕ್ರೈಂ ಮೂಲಕ ಲೂಟಿಯಾಗಿದೆ. ಬೆಂಗಳೂರು ಸುರಕ್ಷತಾ ನಗರ ಹೋಗಿ ಕ್ರೈಂ ಸಿಟಿಯಾಗಿ ಮಾರ್ಪಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ಕೋಲಾರ ಮತ್ತು ಬೆಂಗಳೂರಿನ ಆಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣವನ್ನು ವಿವಿರಿಸಿದ ಅಶೋಕ್, ಇದಕ್ಕೆ ಸರ್ಕಾರದ ಆಡಳಿತ ವೈಫಲ್ಯ ಕಾರಣ ಎಂದರು.
ರಾಜ್ಯ ಗುಪ್ತಚರ ಇಲಾಖೆ ಸತ್ತಿದೆಯೋ? ಬದುಕಿದೆಯೋ ಅಥವಾ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆಯೋ ಗೊತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರತಿಭಟನೆ ಮಾಡುತ್ತಾರೆ. ಅದು ಪೊಲೀಸಿನವರಿಗೇ ಗೊತ್ತಾಗುವುದಿಲ್ಲ. ಪ್ರತಿಭಟನೆ ಮಾಡಿದವರ ಮೇಲೆ ಕ್ರಮವೂ ಆಗುವುದಿಲ್ಲ. ಪೊಲೀಸರು ನೈತಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದರು.
ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಕೆಎಫ್ಡಿ, ಪಿಎಫ್ಐ ಮೇಲಿನ 1600 ಕೇಸುಗಳನ್ನು ಸರ್ಕಾರ ವಾಪಸ್ಸು ಪಡೆದಿದೆ. ಇದರಿಂದ ಅಂತವರಿಗೆ ಧೈರ್ಯ ಬಂದಾಂತಾಗಿದೆ. ಕೋಲಾರದಲ್ಲಿ ಸ್ಟೀಲ್ನಿಂದ ನಿರ್ಮಿಸಿದ 30 ಅಡಿ ಅಗಲ, 40 ಅಡಿ ಎತ್ತರದ ಮಚ್ಚು, ಲಾಂಗಿನಿಂದ ಮಾಡಿದ ಕಟೌಟ್ ಹಾಕಲಾಗಿದೆ. ಕಾಂಗ್ರೆಸ್ ಸಕ್ರಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.




