ಎನ್ಇಪಿ ಜಾರಿಯಲ್ಲಿ ಬೋಧಕರ ಕೊಡುಗೆ ನಿರ್ಣಾಯಕ: ಬಸವರಾಜ ಬೊಮ್ಮಾಯಿ

4 years ago

ಬೆಂಗಳೂರು: ಮೂರು ವರ್ಷಗಳ ಪರಿಶ್ರಮದಿಂದ ರೂಪಿಸಿರುವ ಎನ್ಇಪಿ ಪಠ್ಯಕ್ರಮವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಲು ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ನಗರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕೇಂದ್ರ ಸರಕಾರ ಎನ್ಇಪಿ ಘೋಷಿಸುವುದಕ್ಕೂ ಮೊದಲೇ ಅದಕ್ಕೆ ಸಂಬಂಧಿಸಿದಂತೆ ಕಾರ್ಯಪಡೆ ರಚಿಸಿದ ಕೀರ್ತಿ ಕರ್ನಾಟಕದ್ದು. ಪರಿಣತರು, ವಿಷಯ ತಜ್ಞರು, ಉದ್ಯಮಿಗಳು ಒಂದೆಡೆ ಕೂತು ಪಠ್ಯಗಳನ್ನು ರೂಪಿಸಿದ್ದಾರೆ. ಇದರ ಜಾರಿಯಲ್ಲಿ ನಾವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಪಾತ್ರ ದೊಡ್ಡದಿದೆ ಎಂದರು.

ಇಂದು ತಂತ್ರಜ್ಞಾನ, ಜಗತ್ತನ್ನು ಆಳುತ್ತಿದ್ದು, ನಮ್ಮ ಮೌಲ್ಯಗಳು ಕೂಡ ಅದರಿಂದಲೇ ನಿರ್ದೇಶಿತವಾಗುತ್ತಿವೆ. ಬೋಧನೆಯನ್ನು ಬದುಕಿನ ಜತೆ ಬೆಸೆಯುವುದು ಅತ್ಯುತ್ತಮ ವಿಧಾನ. ಮನುಷ್ಯನಲ್ಲಿ ಚಿಂತನಾ ಪ್ರಕ್ರಿಯೆಗೆ ಶಿಸ್ತು ತರುವುದೇ ಶಿಕ್ಷಣ. ಇದರಲ್ಲಿ ಮಕ್ಕಳ ಮುಗ್ಧತೆ ಮತ್ತು ಕುತೂಹಲ ಉಳಿಸಿಕೊಳ್ಳುವುದೇ ಈಗಿರುವ ಸವಾಲು ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಾಜ್ಯ ಸರಕಾರ ಹೊಸ ಕಾಲೇಜುಗಳಿಗೆ ಅನುಮತಿ ಕೊಡುತ್ತಿಲ್ಲ. ಬದಲಿಗೆ ಇರುವ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುತ್ತಿದೆ. ಜತೆಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಕೇಂದ್ರೀಕರಣ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ತರಲು ಸದ್ಯದಲ್ಲೇ ಸೂಕ್ತ ಶಾಸನವನ್ನು ತರಲಾಗುತ್ತಿದೆ. ಈ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಇದ್ದ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಿ, ಪ್ರತಿಭೆಗೆ ಮನ್ನಣೆ ಕೊಡಲಾಗುತ್ತಿದೆ. ವಿ.ವಿ.ಗಳಲ್ಲಿ ಪಾರದರ್ಶಕತೆ ತಂದಿದ್ದು, ಎನ್ಇಪಿ ಮೂಲಕ ಸರ್ವಾಂಗೀಣ ಪ್ರಗತಿ ಸಾಧ್ಯವಾಗಲಿದೆ ಎಂದರು.

ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ನೀತಿ ಜಾರಿಗೊಳಿಸಲಾಗಿದೆ. ಸರ್ಕಾರಿ ಕಾಲೇಜುಗಳ ಹಾಗೆ ಅನುದಾನಿತ ಕಾಲೇಜುಗಳಿಗೂ ಸ್ಥಳೀಯವಾಗಿ ಶುಲ್ಕ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಆಯಾ ಕಾಲೇಜುಗಳಿಗೇ ಕೊಡಲಾಗುತ್ತಿದೆ. ಈ ಹಿಂದೆ ಅನುದಾನಿತ ಕಾಲೇಜುಗಳಿಗೆ ಶೇ.50ರಷ್ಟು ಹಣ ಮಾತ್ರ ಬಳಸಲು ಅವಕಾಶವಿತ್ತು ಎಂದರು.

ಶಿಕ್ಷಣದ ಅಂತಾರಾಷ್ಟ್ರೀಕರಣ, ಉದ್ಯಮಗಳ ಜತೆ ಸಕ್ರಿಯ ಸಂಬಂಧ, ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳಿಗೆ ಆದ್ಯತೆ ಕೊಡಲಾಗಿದೆ. ಜತೆಯಲ್ಲಿ ಪ್ರಾಧ್ಯಾಪಕರ ಬಡ್ತಿ ಪ್ರಕ್ರಿಯೆ ಶೀಘ್ರವೇ ಆರಂಭ ಆಗಲಿದೆ ಎಂದರು.

ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ ಮಹಾರಾಜ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ ತಿಮ್ಮೇಗೌಡ, ಬೆಂಗಳೂರು ನಗರ ವಿವಿ ಕುಲಪತಿ ಡಾ.ಲಿಂಗರಾಜ ಗಾಂಧಿ, ನೃಪತುಂಗ ವಿವಿ ಕುಲಪತಿ ಡಾ. ಶ್ರೀನಿವಾಸ ಬಳ್ಳಿ, ಮಹಾರಾಣಿ ವಿವಿ ಕುಲಪತಿ ಡಾ. ಗೋಮತಿದೇವಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಮಂಜುನಾಥ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಜರಿದ್ದರು.

Leave a Reply