ತೂಕದಲ್ಲಿ ಮೋಸ ಮಾಡಿದರೆ ಕಬ್ಬು ನುರಿಸುವ ಲೈಸೆನ್ಸ್ ರದ್ದು: ಶಿವಾನಂದ ಪಾಟೀಲ್

2 years ago

ಕಲಬುರಗಿ: ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಏರುಪೇರು ಮಾಡುವ ಮೂಲಕ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡುತ್ತಿವೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ಕಬ್ಬಿನ ತೂಕದಲ್ಲಿ ಮೋಸ ಮಾಡಿದ್ದು ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡುವ ಮುನ್ನ ಎಪಿಎಂಸಿಯಲ್ಲಿ ಮುಕ್ತವಾಗಿ ತೂಕ ಮಾಡಿಕೊಂಡು ರಸೀದಿ ಪಡೆಯಬೇಕು. ನಂತರ ಅದೇ ಕಬ್ಬನ್ನು ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ತೂಕ ಮಾಡಿಸಬೇಕು. ತೂಕದಲ್ಲಿ ಏನಾದರು ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ರೈತರಲ್ಲಿ ಮನವಿ ಮಾಡಿದರು.

ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸದ ಕುರಿತು ಲಿಖಿತ ದೂರು ನೀಡಿದರೆ, ಆ ಕಾರ್ಖಾನೆಯ ಕಬ್ಬು ನುರಿಸುವಿಕೆಯನ್ನು ರದ್ದು ಮಾಡುತ್ತೇವೆ. ಆದರೆ, ಬಹುತೇಕ ರೈತರು ಲಿಖಿತ ದೂರು ಕೊಡಲು ಮುಂದೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಪಿಎಂಸಿಗಳಲ್ಲಿನ ಪ್ರತಿ 100 ರೂಪಾಯಿ ವಹಿವಾಟಿಗೆ 60 ಪೈಸೆ ಸೆಸ್ ದುರ್ಬಳಕೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳೀಯ ಏಜೆಂಟರ್ಗಳೇ ಇದರಲ್ಲಿ ಭಾಗಿಯಾದ ಆರೋಪಗಳಿವೆ.ಈ ಹಿನ್ನೆಲೆಯಲ್ಲಿ ವಿಚಕ್ಷಣ ದಳ ರಚಿಸಿ ಸೆಸ್ ದುರ್ಬಳಕೆ ನಿಯಂತ್ರಿಸಲಾಗುವುದು. ಹೊಸ ಕಾಯ್ದೆ ಬಂದ ಬಳಿಕ ಎಪಿಎಂಸಿಯ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

Leave a Reply