ಉದ್ಯೋಗದಾತರಿಂದ ಮತ್ತು ಆಕಾಂಕ್ಷಿಗಳಿಂದ ಉತ್ತಮ ಸ್ಪಂದನೆ
5,821 ಜನರ ಸಂದರ್ಶನ, 3,149 ಜನರಿಗೆ ಆಫರ್ ಲೇಟರ್
532 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ವಿತರಣೆ
ಧಾರವಾಡ: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಕೆಸಿಡಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ಉದ್ಯೋಗದಾತರಿಂದ ಮತ್ತು ಉದ್ಯೋಗ ಆಕಾಂಕ್ಚಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಜಿ.ಸಿಇಓ ಭುವನೇಶ ಪಾಟೀಲ ಅವರು ಕಳೆದ ಒಂದು ವಾರದಿಂದ ನೇರ ಉಸ್ತುವಾರಿಯಲ್ಲಿ ಉದ್ಯೋಗ ಮೇಳವನ್ನು ಶಿಸ್ತುಬದ್ಧವಾಗಿ ರೂಪಿಸಿದ್ದು ಸಾರ್ಥಕವೆನಿಸಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡದ ವಿವಿಧ ಕೈಗಾರಿಕಾ ವಲಯಗಳಿಂದ ಸಂದರ್ಶನ ತೆಗೆದುಕೊಳ್ಳಲು ಆಗಮಿಸಿದ ಇನ್ಪೊಸಿಸ್, ಟಾಟಾ ಮಾರ್ಕೊಪೋಲೊ, ಟಾಟಾ ಮೋಟಾರ್ಸ್, ಎಕಸ್, ಯುಪ್ಲೇಕ್ಸ್, ಎಚ್.ಸಿ.ಎಲ್ ಟೆಕ್, ಸಾಯಿ ಗಾಮೆರ್ಂಟ್ಸ್, ಮೈಕ್ರೊ ಪಿನಿಷವಾಲ್, ಎಕ್ಸಲ್ ಪುಡ್ ಪ್ರೈ.ಲಿ., ಕ್ಯಾನನ್ ಇಂಟರನ್ಯಾಶನಲ್ ಸೇರಿದಂತೆ 130 ಕ್ಕೂ ಹೆಚ್ಚು ಕೈಗಾರಿಕಾ ಕಂಪನಿಗಳಿಂದ ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿ ಯೋಜನಾಬದ್ಧವಾಗಿ ಮತ್ತು ಯಾವುದೇ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥಿತವಾಗಿ ಉದ್ಯೋಗಮೇಳವನ್ನು ಆಯೋಜಿಸಿದ್ದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
ವಿಕಲಚೇತನರಿಗೆ ಉದ್ಯೋಗದಲ್ಲಿ ಆದ್ಯತೆ ಸೀಗಬೇಕೆಂದು ಗೋಕಾಕ ಗ್ರಂಥಾಲಯದ 24/7 ಓದುವ ಕೊಠಡಿಯಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಸಂದರ್ಶನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಂಪನಿಗಳು 300 ಕ್ಕೂ ಹೆಚ್ವು ಜನರಿಗೆ ಸಂದರ್ಶನ ಮಾಡಿ, ದಾಖಲೆಗಳನ್ನು ಪಡೆದು, ಮುಂದಿನ ಹಂತಕ್ಕಾಗಿ ತಮ್ಮ ಕೈಗಾರಿಕಾ ಕಚೇರಿಗೆ ಬರಲು ಸುಮಾರು 80 ಜನ ವಿಕಲಚೇತನರಿಗೆ ಆಫರ್ ಲೇಟರ್ ನೀಡಿದರು.
ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನ ಕೊನೆಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಭವಿಷ್ಯದ ಉದ್ಯೋಗದ ಬಗ್ಗೆ, ಸಂದರ್ಶನ ಅನುಭವದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇಂದಿನ ಉದ್ಯೋಗಮೇಳದಲ್ಲಿ 98 ಕೈಗಾರಿಕೆಗಳು ಸೇರಿ ಸುಮಾರು 118 ಕ್ಕೂ ಹೆಚ್ಚು ಕಂಪನಿಗಳು, ಉದ್ಯೋಗದಾತರು ಭಾಗವಹಿಸಿದ್ದರು. ಧಾರವಾಡ, ಗದಗ, ಹಾವೇರಿ, ಬೆಳಗಾವಿಯಿಂದ ಆಗಮಿಸಿದ್ದ ಸುಮಾರು 5,821 ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳು ಸಂದರ್ಶನ ನೀಡಿದರು. ಕೆಲವರು ನೋಂದಣಿ ಮಾಡಿಯೂ, ಸಂದರ್ಶನ ನೀಡದೆ ಕೈಗಾರಿಕೆ, ಕಂಪನಿಗಳ ಮಾಹಿತಿ ಪಡೆದುಕೊಂಡರು.
ಒಟ್ಟಾರೆ ಸಂದರ್ಶನ ನೀಡಿದ್ದ 5,821 ಅಭ್ಯರ್ಥಿಗಳ ಪೈಕಿ 3,149 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳು ಶಾರ್ಟ ಲಿಸ್ಟ್ ಮಾಡಿಕೊಂಡು ಆಫರ್ ಲೇಟರ್ ನೀಡಿವೆ. ಮತ್ತು 532 ಉದ್ಯೋಗ ಆಕಾಂಕ್ಷಗಳಿಗೆ ವಿವಿಧ ಕಂಪನಿ, ಕೈಗಾರಿಕೆಗಳು ನೇಮಕಾತಿ ಪತ್ರ ನೀಡಿವೆ. ಒಟ್ಟಾರೆಯಾಗಿ ಉದ್ಯೋಗಕ್ಕಾಗಿ ಶಾರ್ಟ ಲಿಸ್ಟ್ ಆಗಿರುವ ಮತ್ತು ನೇಮಕಾತಿ ಆದೇಶ ಪಡೆದಿರುವವರು ಆಗಿದ್ದು, ಶೇ.64 ಪ್ರತಿ ಶತ ಸಾಧನೆ ಆಗಿದೆ. ಉದ್ಯೋಗ ಮೇಳಕ್ಕೆ ನೋಂದಾಯಿತರಾಗಿದ್ದ ಸುಮಾರು 3000 ಜನ ಉದ್ಯೋಗ ಆಕಾಂಕ್ಷಿಗಳು, ಸಂದರ್ಶನಕ್ಕೆ ಹಾಜರಾಗದೆ, ಅವರ ಪಾಲಕರೊಂದಿಗೆ ಉದ್ಯೋಗಮೇಳಕ್ಕೆ ಭೇಟಿ ನೀಡಿ, ವಿವಿಧ ಕೈಗಾರಿಕೆ, ಕಂಪನಿಗಳಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಉದ್ಯೋಗಮೇಳ ಕುರಿತು ಹಿರಿಯ ಅಧಿಕಾರಿಗಳ, ಸಂಘಟಕರ ಅಭಿಪ್ರಾಯಗಳು:
ಸರಕಾರದ ನಿರ್ದೇಶನದಂತೆ ಉದ್ಯೋಗ ಮೇಳ ಆಯೋಜಿಸಿ, ನಿರುದ್ಯೋಗಿ ಅರ್ಹ ಯುವಕ, ಯುವತಿಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸುವ ಮತ್ತು ಅವಳಿ ನಗರಕ್ಕೆ ಆಗಮಿಸಿರುವ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಉದ್ಯಮಿಗಳಿಗೆ ಕೌಶಲ್ಯಯುತ ಮತ್ತು ಅಗತ್ಯ ಮಾನವ ಸಂಪನ್ಮೂಲ ನಮ್ಮ ಜಿಲ್ಲೆಯಲ್ಲಿ ಲಭ್ಯವಿದೆ ಎಂಬುದನ್ನು ತೋರಿಸಲಾಗಿದೆ. ಅವರಿಗೆ ಬಂಡವಾಳ ಹೂಡಿ, ಉದ್ಯೋಗ ಸೃಷ್ಟಿಸಬಹುದು ಎಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಉದ್ಯೋಗಮೇಳದಲ್ಲಿ ಯಶಸ್ವಿಯಾಗಿದ್ದೇವೆ. ಜಿಲ್ಲಾಡಳಿತ ಆಯೋಜಿಸಿದ್ದ ಪ್ರಥಮ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದವರ ಪೈಕಿ ಸುಮಾರು ಶೇ.64 ರಷ್ಟು ಜನರಿಗೆ ಆಫರ್ ಲೇಟರ್, ನೇಮಕಾತಿ ಆದೇಶ ಸಿಕ್ಕಿರುವುದು ಸಂತಸ ತಂದಿದೆ. ಜಿಲ್ಲೆಯ ಯುವಕ, ಯುವತಿಯರಿಗೆ ಇನ್ನು ಹೆಚ್ಚುಹೆಚ್ಚು ಉದ್ಯೋಗ ದೊರಕಿಸುವಲ್ಲಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗುತ್ತದೆ.
– ದಿವ್ಯ ಪ್ರಭು, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ
ಕೌಶಲ್ಯಭರಿತ ಯುವ ಸಮೂಹವನ್ನು ತರಬೇತಿ ನೀಡಿ, ಸೃಷ್ಟಿಸುವ ಕೆಲಸ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕೊಡಿಸಲು ಮತ್ತು ಕೈಗಾರಿಕೆಗಳಿಗೆ ಸ್ಥಳೀಯವಾಗಿ ಮಾನವ ಸಂಪನ್ಮೂಲ ಪೂರೈಸಲು ಈ ಉದ್ಯೋಗಮೇಳ ಒಂದು ಉತ್ತಮ ಪ್ಲಾಟಪಾರ್ಮ ಆಯಿತು. ಉದ್ಯೋಗಮೇಳಕೆ ಬಂದಿದ್ದ ಉದ್ಯೋಗದಾತರು ಮತ್ತು ಉದ್ಯೋಗ ಬಯಸಿದವರು ತಮ್ಮ ಆಸೆ ಈಡೆರಿಸಿಕೊಂಡು ಸಂತಸದಿಂದ ಹೋಗುವಂತೆ ಮಾಡುವಲ್ಲಿ ಯಶಸ್ವಿ ಆಗಿದ್ದೇವೆ. ಮುಂದಿನ ಉದ್ಯೋಗಮೇಳವನ್ನು ಸಂಪೂರ್ಣ ಯಶಸ್ವಿಗೊಳಿಸುತ್ತೇವೆ.
-ಭುವನೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉದ್ಯೋಗಮೇಳ ಯಾವ ಗೊಂದಲಗಳಿಲ್ಲದೆ ಯಶಸ್ವಿಯಶಗಿದ್ದು ಖುಷಿ ತಂದಿದೆ. ಕಂದಾಯ,ಆರ್.ಡಿ.ಪಿ.ಆರ್ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 750 ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳು ಉದ್ಯೋಗಮೇಳ ವ್ಯವಸ್ಥಿತವಾಗಿ ಸಂಘಟಿಸಲು ಶ್ರಮಿಸಿದ್ದಾರೆ. ಉದ್ಯೋಗಮೇಳದ ಮೋಡಲ್ ಅಧಿಕಾರೊಯಾಗಿ ಯಾವುದೇ ಕುಂದುಕೊರತೆ ಬರದಂತೆ ಚನ್ನಾಗಿ ಕರ್ತವ್ಯ ನಿರ್ವಹಿಸೊದ್ದೇನೆ
– ಶಾಲಂ ಹುಸೇನ್, ಉಪವಿಭಾಗಾಧಿಕಾರಿ
ಬೇಸಿಗೆ ದಿನಗಳಾದ್ದರಿಂದ ಉದ್ಯೋಗಮೇಳಕ್ಕೆ ಬರುವವರಿಗೆ ಅಗತ್ಯ ಕುಡಿಯುವ ನೀರು, ಉಪಾಹಾರ, ಊಟ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು. ಧ್ವನಿವರ್ಧಕದ ಮೂಲಕ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಯಾವ ಗೊಂದಲಗಳು ಆಗದಂತೆ ಕ್ರೌಡ್ ಮೇಂಟೇನ್ ಮಾಡಲಾಯಿತು.
– ರೇಖಾ ಡೊಳ್ಳಿನವರ, ಯೋಜನಾ ನಿರ್ದೇಶಕಿ, ಜಿ.ಪಂ.
ಉದ್ಯೋಗ ಮೇಳಕ್ಕೆ ಕೈಗಾರಿಕೆಗಳ ಆಹ್ವಾನ ಮತ್ತು ಅಭ್ಯರ್ಥಿಗಳಿಗೆ ಸಕಾಲಕ್ಕೆ ಮಾಹಿತಿ ನೀಡುವುದು ಮತ್ತು ಯಾವ ತೊಂದರೆ ಆಗದಂತೆ ಸುಸೂತ್ರವಾಗಿ ಮೇಳ ಆಯೋಜಿಸುವುದು ನಮಗೆ ಒಂದು ಬಿಗ್ಗ್ ಚಾಲೇಂಜ್ ಆಗಿತ್ತು. ಮಾನ್ಯ ಜಿಲ್ಲಾಧಿಕಾರಿಗಳ ಮತ್ತು ಸಿಇಓ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ಉದ್ಯೋಗ ಮೇಳ ಆಯೋಜಿಸಿರುವುದು ಹೊಸ ಅನುಭವ, ಸಂತಸ ತಂದಿದೆ.
– ರವೀಂದ್ರ ದ್ಯಾಬೇರಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ
ಉದ್ಯೋಗಮೇಳ ಕುರಿತು ಉದ್ಯೋಗ ಆಕಾಂಕ್ಷಿಗಳ ಅಭಿಪ್ರಾಯ:
ಬಿಕಾಂ ಓದಿದ್ದೇನೆ ಧಾರವಾಡದಿಂದ ಬಂದಿದ್ದೇನೆ ಬಿಕಾಂ ಮುಗಿಸಿದ ನಂತರ ಯಾವ ಯಾವ ರೀತಿ ಕೆಲಸಗಳು ಇರುತ್ತವೆ ಎಂದು ತಿಳಿಯಿತು.ಈ ರೀತಿ ಉದ್ಯೋಗ ಮೇಳ ಮಾಡುವುದರಿಂದ ಯಾವ ಉದ್ಯೋಗಗಳು ಇವೆ, ಕೆಲಸಗಳು ಹೇಗೆ ಇರುತ್ತವೆ, ಕಂಪನಿಗಳು ಯಾವುವು ಇದೆ, ಸಂಬಳ ಹೇಗೆ ಎಲ್ಲವೂ ಈ ಒಂದು ಉದ್ಯೋಗ ಮೇಳದಿಂದ ದೊರೆಯಿತು.
ಕೆಲವು ಸರಿ ಕಂಪನಿಗೆ ಹೋದಾಗ ಅಲ್ಲಿ ಸರಿಯಾದ ರೀತಿ ಸ್ಪಂದನೆ ಸಿಗುವುದಿಲ್ಲ ಆದರೆ ಇಲ್ಲಿ ಸರಿಯಾದ ರೀತಿ ಸ್ಪಂದನೆ ದೊರೆಯಿತು ಮತ್ತು ನಮ್ಮ ಒಂದು ಕೌಶಲ್ಯವೂ ಬೆಳೆಯಿತು ಸಂದರ್ಶನವನ್ನು ಯಾವ ರೀತಿ ಎದುರಿಸಬೇಕೆಂದು ಸಹ ಈ ಒಂದು ಉದ್ಯೋಗ ಮೇಳದಿಂದ ತಿಳಿಯಿತು.
-ಪೂಜಾ, ಮಾಳಾಪುರ ಧಾರವಾಡ
ನಾನು ಬಿಕಾಂ ಓದಿದ್ದೇನೆ ಹುಬ್ಬಳ್ಳಿಯಿಂದ ಬಂದಿದ್ದೇನೆ. ಈ ಉದ್ಯೋಗ ಮೇಳದಲ್ಲಿ ನಾನು ಅಕೌಂಟೆಂಟ್, ಕ್ಯಾಶಿಯರ್ ಈ ರೀತಿಯಾದಂತಹ ಉದ್ಯೋಗಗಳನ್ನು ಕೇಳಿಕೊಂಡು ಬಂದಿದ್ದೇನೆ.
– ಜ್ಯೋತಿ ಎಸ್ ಗೋಕಾಟಿ, ಮಾಳಾಪುರ ಧಾರವಾಡ
ಎಂ.ಎಸ್.ಸಿ ಬಯೋಟೆಕ್ ಓದಿದ್ದೇನೆ. ಹುಬ್ಬಳ್ಳಿಯಿಂದ ಬಂದಿದ್ದೇನೆ. ಬೇರೆ ಉದ್ಯೋಗ ಮೇಳಕ್ಕೆ ಹೋಲಿಸಿದರೆ ಈ ಒಂದು ಉದ್ಯೋಗ ಮೇಳವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸರ್ಕಾರದವರು ಕೆ ಸಿ ಡಿ ಕಾಲೇಜಿನಲ್ಲಿ ಇಷ್ಟೊಂದು ಸರಿಯಾದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಊಹೆಯನ್ನು ಮಾಡಿಕೊಂಡಿರಲಿಲ್ಲ. ಎಲ್ಲರೂ ಈ ಉದ್ಯೋಗ ಮೇಳಕ್ಕೆ ಬಂದರೆ ಹೊಸಬರಿಗೆ ಒಳ್ಳೆಯ ಉಪಯೋಗವಾಗುತ್ತದೆ ಎಂದು ಹೇಳಬಹುದು.
_ ಬಸನಗೌಡ ಪಾಟೀಲ, ಸಂದರ್ಶನ ಅಭ್ಯರ್ಥಿ, ಹುಬ್ಬಳ್ಳಿ
ಇಷ್ಟೊಂದು ಗದ್ದಲ ಇದ್ದರೂ ಎಲ್ಲರೂ ಅತ್ಯಂತ ತಾಳ್ಮೆಯಿಂದ ಒಬ್ಬರಾದ ನಂತರ ಒಬ್ಬರು ಸಂದರ್ಶನವನ್ನು ಮಾಡುತ್ತಿದ್ದಾರೆ. ಅದೇ ರೀತಿ ಪ್ರತಿಯೊಬ್ಬ ಅಧಿಕಾರಿಗಳು ಸಹ ನಮಗೆ ಸರಿಯಾದ ರೀತಿ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನನಗೆ ನಿಜವಾಗಲೂ ಅತ್ಯಂತ ಸಂತೋಷವಾಗಿದೆ.
– ಅಕ್ಷತಾ, ಸಂದರ್ಶನ ಅಭ್ಯರ್ಥಿ, ಧಾರವಾಡ
ನಾನು ಲೈಬ್ರರಿ ಸೈನ್ಸ್ ಮಾಡಿದ್ದೇನೆ. ನರಗುಂದ ತಾಲೂಕದಿಂದ ಬಂದಿದ್ದೇನೆ ನನಗೆ ಲೈಬ್ರರಿ ಸೈನ್ಸ್‍ನಲ್ಲಿ ಕೆಲಸ ಮಾಡಲು ಇಷ್ಟ. ಸರ್ಕಾರದಿಂದ ಬರುವ ಅಂಗವಿಕಲರ ಸೌಲಭ್ಯಗಳಿಗೆ ಸಹ ಅರ್ಜಿಯನ್ನು ಹಾಕುತ್ತೇನೆ.
-ವೀಣಾ, ವಿಕಲಚೇತನ ಸಂದರ್ಶನಾರ್ಥಿ, ಸಂಕದಾಳ ಗ್ರಾಮ, ನರಗುಂದ ತಾಲೂಕು ಗದಗ ಜಿಲ್ಲೆ
ಉದ್ಯೋಗಮೇಳ ಕುರಿತು ಉದ್ಯೋಗದಾತ ಕಂಪನಿ ಮುಖ್ಯಸ್ಥರ ಅಭಿಪ್ರಾಯಗಳು:
ವಾಯ್ಸ್ ಆಫ್ ನೀಡ್ ಫೌಂಡೇಶನ್ ವಿಕಲಚೇತನರಿಗೆ ಹುಬ್ಬಳ್ಳಿ ಧಾರವಾಡದಲ್ಲಿ ನಾವು ಕೆಲಸ ಕೊಡುತ್ತೇವೆ. ಈಗಾಗಲೇ 75 ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ನಮಗೆ 200 ಜನರ ಅಗತ್ಯವಿದೆ. ವಿಕಲಚೇತನರಿಗೂ ಉದ್ಯೋಗ ದೊರಕಿಸಿ ಕೊಡುವ ರೀತಿ ಈ ಉದ್ಯೋಗ ಮೇಳವನ್ನು ನಡೆಸಿರುವ ನಮ್ಮ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೂ ಹಾಗೂ ಜಿಲ್ಲಾಡಳಿತವರಿಗೂ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ವಿಕಲಚೇತನರಿಗೆ ಬರುವುದಕ್ಕೆ ಹೋಗುವುದಕ್ಕೆ ಸರಿಯಾದ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಜಿಲ್ಲಾಡಳಿತವೂ ಎಷ್ಟೋ ಜನ ಅಂಗವಿಕಲರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. ಇದೇ ರೀತಿ ಮುಂಬರುವ ದಿನಗಳಲ್ಲಿ ಈ ಒಂದು ಕಾರ್ಯ ಮುಂದುವರೆಯಲಿ.
– ಈರಪ್ಪ ಕಂಬಾರ, ವಾಯ್ಸ್ ಆಫ್ ನೀಡ್ ವಿಶೇಷಚೇತನರ ಫೌಂಡೇಶನ್, ಬೆಂಗಳೂರು
ಇವತ್ತು ಈ ಒಂದು ಉದ್ಯೋಗ ಮೇಳದಲ್ಲಿ ನಾವು ನಮ್ಮ ಜೊತೆ ಬೇಲೂರು ಇಂಡಸ್ಟ್ರಿಯಲ್, ಅನೇಕ ದೊಡ್ಡ ಮತ್ತು ಸಣ್ಣ ಉದ್ಯಮಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಸಂದರ್ಶನ ಮಾಡುವ ಕಾರ್ಯವನ್ನು ಮಾಡುತ್ತಿದ್ದೇವೆ.
ಈ ರೀತಿ ಉದ್ಯೋಗ ಮೇಳ ಮಾಡುವುದರಿಂದ ಉದ್ಯಮಗಾರರಿಗೆ ಬೇಕಾದ ವ್ಯಕ್ತಿಗಳು ಸಿಗುತ್ತಾರೆ, ನಮಗೆ ಬೇಕಾದ ರೀತಿಯಲ್ಲಿ ಇರುವ ಅಭ್ಯರ್ಥಿಗಳು ಸಿಗುತ್ತಾರೆ. ಮುಂಬರುವ ದಿನಗಳಲ್ಲಿ ಸಹ ಇದೇ ರೀತಿ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ.
-ಶ್ರೀಕಾಂತ್ ತಿಟೆ, ಅಧ್ಯಕ್ಷರು, ಧಾರವಾಡ ಗ್ರೋಥ್ ಸೆಂಟರ್, ಬೇಲೂರು ಕೈಗಾರಿಕಾ ಪ್ರದೇಶ
ಈ ಒಂದು ಉದ್ಯೋಗ ಮೇಳ ಕೇಳಿ ತಿಳಿದುಕೊಂಡು ಬರುವುದಕ್ಕಿಂತ ಮುಂಚೆ ಒಂದು ಆಲೋಚನೆ ಇತ್ತು. ಏನು ಆಗಬಹುದು ಹೇಗೆ ಆಗಬಹುದು ಎಂದು ಎರಡು ದಿನಗಳಿಂದ ಈ ಒಂದು ತಯಾರಿ ನೋಡಿ ಸಾಕಷ್ಟು ಅಚ್ಚರಿಯೂ ಆಯಿತು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡಬಹುದಾ ಎಂದು ಕುತೂಹಲವು ಆಗಿತ್ತು. ನೋಡಲೇಬೇಕು ಹೇಗೆ ಇದೆ ಎಂದು ಅನಿಸಿತು. ಉದ್ಯೋಗ ಮೇಳಕ್ಕೆ ಆಗಬಹುದು ಮತ್ತು ಕಂಪನಿಗಳಿಗೆ ಆಗಬಹುದು ನಿಜವಾಗಿಯೂ ಒಳ್ಳೆಯ ಒಂದು ವೇದಿಕೆ. ಕೌಶಲ್ಯ ಮತ್ತು ಉದ್ಯೋಗ ಎರಡನ್ನು ಜೋಡಿಸುವ ಒಂದು ವೇದಿಕೆಯಾಗಿದೆ. ಸಂತೋಷವಾಗುತ್ತಿದೆ. ಹೊಸ ಹೊಸ ರೀತಿಯ ಒಂದು ಪ್ರತಿಭೆಯನ್ನು ನೋಡಿದೆವು. ಹೊಸ ಪ್ರತಿಭೆಗಳು ಸಿಕ್ಕಿವೆ. ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇದೇ ರೀತಿ ಮುಂದೆ ಮತ್ತೆ ನಮ್ಮನ್ನು ಕರೆಯಿರಿ ಎಂದು ಹೇಳುತ್ತೇನೆ. ಎಲ್ಲ ವ್ಯವಸ್ಥೆಯನ್ನು ಕೂಡ ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ. ಎಲ್ಲಿ ಯಾರನ್ನು ಸಹ ಕೇಳುವ ಅವಶ್ಯಕತೆ ಇಲ್ಲ ಆ ರೀತಿಯಾಗಿ ವ್ಯವಸ್ಥೆ ಮಾಡಿದ್ದಾರೆ.
-ಆಸವಿಜ್, ಸಿಇಒ, ಅಟ್ಲಾಂಟಾ ಎಲಿವೇಟರ್ ಮತ್ತು ಎಸ್ಕಲೇಟರ್ ಕಂಪನಿ, ಬೆಂಗಳೂರು
ಉದ್ಯೋಗ ಮೇಳವನ್ನು ಸರಿಯಾದ ರೀತಿ ಎಲ್ಲಿ ಎಲ್ಲವೊಂದು ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಎಲ್ಲರಿಗೂ ಒಂದು ಮಾರ್ಗದರ್ಶನವಾಗಲಿ. ಮುಂದೆ ಉದ್ಯೋಗ ಮೇಳ ಮಾಡುವವರಿಗೆ ಒಂದು ಉದಾಹರಣೆ ಆಗುವ ರೀತಿಯಲ್ಲಿ ಈ ಉದ್ಯೋಗ ಮೇಳವನ್ನು ಮಾಡಿದ್ದಾರೆ.
– ಶಿರೀಸ ಉಪ್ಪಿನ, ಧಾರವಾಡ ಗ್ರೋಥ್ ಸೆಂಟರ್, ಬೇಲೂರು ಕೈಗಾರಿಕಾ ಪ್ರದೇಶ
ನಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಎಂ ಎಸ್ ಆಫೀಸ್, ಅಡ್ವಾನ್ಸ್ ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡುವುದಕ್ಕೆ ಆಯ್ಕೆ ಮಾಡುತ್ತಿದ್ದೇವೆ. ಈ ಒಂದು ಉದ್ಯೋಗ ಮೇಳದಿಂದ ನಮಗೆ ಬೇಕಾದ ರೀತಿಯಲ್ಲಿ ನಾವು ಅಂದುಕೊಂಡಂತೆ ಅಭ್ಯರ್ಥಿಗಳು ಸಿಕ್ಕಿದ್ದಾರೆ. ಅದೇ ರೀತಿ ಈ ಒಂದು ಉದ್ಯೋಗ ಮೇಳದಲ್ಲಿ ಎಲ್ಲ ರೀತಿ ಒಂದು ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೆ ಬೆಳಗ್ಗೆ ಉಪಹಾರದಿಂದ ಊಟದವರೆಗೂ ಕೂತ ಸ್ಥಳದಲ್ಲಿ ಎಲ್ಲವನ್ನು ತಂದು ನೀಡಿದ್ದಾರೆ.
– ಶ್ರದ್ಧಾ ಪೇಟನೆಕರ, ಎಂಐಟಿ ಕಂಪನಿ, ಧಾರವಾಡ
ನಮ್ಮ ಒಂದು ಉದ್ಯೋಗ ಸ್ಥಳ ಧಾರವಾಡ ಹುಬ್ಬಳ್ಳಿ ಬೆಳಗಾವಿ. ನಮಗೆ 60 ಜನ ಅಭ್ಯರ್ಥಿಗಳ ಅವಶ್ಯಕತೆ ಇದ್ದು ಈಗಾಗಲೇ 30 ಜನ ನಾವು ಪ್ರಮೋಟ್ ಮಾಡಿದ್ದೇವೆ ಅವರಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ಕಚೇರಿಯಲ್ಲಿ ಪಡೆಯುತ್ತೇವೆ. ಎಂಬಿಎ ಮತ್ತು ಬಿಬಿಎ ಮಾಡಿದವರಿಗೆ 3 ಲಕ್ಷ ಪ್ಯಾಕೇಜ್ ಅನ್ನು ಕೂಡ ಕೊಡುತ್ತಿದ್ದೇವೆ. ಅದೇ ರೀತಿ ಎಲ್ಲ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೆ. ಎಚ್ ಡಿ ಎಫ್ ಸಿ ಲೈಫ್ ಇನ್ಶುರೆನ್ಸ್ ಇಂದ ಸಹ ಜನರಿಗೆ ಅನುಕೂಲವಾಗುತ್ತದೆ.
– ಮೊಹಮ್ಮದ ಸಾಧಿಕ ಶೇಕ್, ಎಚ್‍ಡಿಎಫ್‍ಸಿ ಲೈಫ್ ಇನ್ಸೂರೆನ್ಸ್ ಎಕ್ಸಿಕ್ಯೂಟಿವ್ ಮ್ಯಾನೇಜರ್ ಹುಬ್ಬಳ್ಳಿ




