ಬೆಂಗಳೂರು: ಲೋಕಸಭಾ ಚುನಾವಣೆ ಮುನ್ನವೇ ರಾಜ್ಯದ ಜನರಿಗೆ ಸರ್ಕಾರದಿಂದ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆಗಳಿವೆ. ದರ ಪರಿಷ್ಕರಣೆಗೆ ವಿದ್ಯುತ್ ಸರಬರಾಜು ನಿಗಮಗಳು ಮುಂದಾಗಿದ್ದು, ಮಾಸಾಂತ್ಯಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ)ಗೆ ದರ ಪರಿಷ್ಕರಣೆ ಕೋರಿ ಮನವಿ ಸಲ್ಲಿಸಲು ನಿರ್ಧರಿಸಿವೆ ಎಂದು ಗೊತ್ತಾಗಿದೆ.
ಕೆಇಆರ್ ಸಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ದರ ಪರಿಷ್ಕರಣೆ ಮಾಡುತ್ತಿತ್ತು. ಆದರೆ ಈ ಬಾರಿ ಅದಕ್ಕಿಂತ ಮೊದಲು ಮಾಡುವಂತೆ ಕೋರಿಕೆ ಸಲ್ಲಿಸಲಿವೆ. ಲೋಕಸಭಾ ಚುನಾವಣೆ ಮಾರ್ಚ್-ಏಪ್ರಿಲ್ ಅಥವಾ ಮೇ ತಿಂಗಳ ಅವಧಿಯಲ್ಲಿ ನಡೆಯಲಿದೆ. ಒಂದು ವೇಳೆ ದಿನಾಂಕ ಘೋಷಣೆಯಾದರೆ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಹೊಸ ದರ ಪರಿಷ್ಕರಣೆಯಾಗುವ ಸಂಭವವಿದೆ.
ಎಸ್ಕಾಂಗಳು 1 ರೂ.ನಿಂದ 1.65 ಪೈಸೆ ಏರಿಕೆ ಮಾಡಿ ಸಂಸ್ಥೆಗಳ ನಷ್ಟ ಭರಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಿವೆ. ಕಂಪನಿಗಳ ನಿರ್ವಹಣೆ ವೆಚ್ಚ ಹಾಗೂ ವಿದ್ಯುತ್ ಖರೀದಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಕೋರಲಾಗಿದೆ.
ಪ್ರಸ್ತಾವನೆಯ ಪ್ರಕಾರ, ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆ ಕುರಿತಂತೆ ವಿಚಾರಣೆ ನಡೆಸಲು ಕೆಇಆರ್ ಸಿ ಮುಂದಾಗಿದೆ.




