ಬೆಂಗಳೂರು: ಕಳೆದ ಕೆಲವಾರು ದಿನಗಳಿಂದ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದೀಗ ಆಯೋಗದ ವಿರುದ್ಧ ದೇಶಾದ್ಯಂತ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ ಅವರು, ಚುನಾವಣಾ ಆಯೋಗ ಬಿಜೆಪಿಯ ಕಾರ್ಯಕಾರಿ ಆಯೋಗವಾಗಿದೆ ಎಂದು ಆರೋಪಿಸಿದರು.
ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ್ದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಭಾಷಣ ಮಾಡಿದ ರಾಹುಲ್, ‘ಈ ದೇಶದ ಬಡವರು, ರೈತರು, ಕಾರ್ಮಿಕರಿಗೆ ಸಂವಿಧಾನ ರಕ್ಷಣೆಯನ್ನು ನೀಡುತ್ತದೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ದೇಶದ ಸಂವಿಧಾನದ ರಕ್ಷಣೆಗಾಗಿ ಹೋರಾಡಲಿದ್ದಾರೆ ಎಂದರು.
ಬಿಜೆಪಿ ನಡೆಸಿದ ಮತಗಳ ಪರಿಣಾಮವಾಗಿ ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ಬಂದಿದೆ. ಕಳೆದ 10 ವರ್ಷಗಳ ಮತದಾರರ ಪಟ್ಟಿ ಹಾಗೂ ವಿಡಿಯೊ ರೆಕಾರ್ಡಿಂಗ್ ಅನ್ನು ತಕ್ಷಣವೇ ಚುನಾವಣಾ ಆಯೋಗ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಎಲೆಕ್ಟ್ರಾನಿಕ್ ಅಂಕಿಅಂಶಗಳನ್ನು ಚುನಾವಣಾ ಆಯೋಗ ಏಕೆ ನೀಡುತ್ತಿಲ್ಲ ಎಂಬುದನ್ನು ಇಡೀ ದೇಶವೇ ಅರಿತುಕೊಳ್ಳಬೇಕು. ನಾನು ವಿಪಕ್ಷದ ನಾಯಕನಾಗಿರಬಹುದು. ಆದರೆ ನಾನು ಈ ಹೋರಾಟದಲ್ಲಿ ಒಬ್ಬಂಟಿಯಲ್ಲ. ವಿಪಕ್ಷಗಳ ಎಲ್ಲ ನಾಯಕರು ನನ್ನೊಂದಿಗೆ ಇದ್ದಾರೆ ಎಂದರು.
ಒಂದು ವೇಳೆ ನಮಗೆ ಮಾಹಿತಿಯನ್ನು ಕೊಡದಿದ್ದರೆ ಒಂದು ಕ್ಷೇತ್ರವಲ್ಲ 25 ಕ್ಷೇತ್ರಗಳ ಮಾಹಿತಿಯನ್ನು ಬಹಿರಂಗ ಮಾಡಲಿದ್ದೇವೆ. ನಮ್ಮ ಬಳಿ ದಾಖಲೆಗಳಿವೆ. ನೀವಿದನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ವಿಪಕ್ಷಗಳ ಸವಾಲನ್ನು ಎದರಿಸಲೇಬೇಕಾಗುತ್ತದೆ ಎಂದು ಸವಾಲೆಸೆದರು.
ಬಿಜೆಪಿ ನಾಯಕರು ಪವಿತ್ರ ಗ್ರಂಥದ ಮೇಲೆ ಪ್ರಹಾರ ಮಾಡಿದ್ದಾರೆ. ಸಂವಿಧಾನವನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಸಮೀಕ್ಷೆಯ ಪ್ರಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎನ್ನಲಾಗಿತ್ತು. ಆದರೆ ನಾವು ಗೆದ್ದಿದ್ದು 9 ಕ್ಷೇತ್ರಗಳಲ್ಲಿ ಮಾತ್ರ ಇದಕ್ಕೆ ಪ್ರಮುಖ ಕಾರಣ ಮತಗಳ್ಳತನ ಎಂದರು.
ಬೆಂಗಳೂರು ಕೇಂದ್ರದ ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಮೋಸ ಮಾಡಿದೆ. ಆರು ಮತಗಳಲ್ಲಿ ಒಂದು ಮತ ಕಳ್ಳತನ ಮಾಡಿದ್ದಾರೆ. ಭಾವಚಿತ್ರವಿಲ್ಲದ 4 ಸಾವಿರ ಪ್ರಕರಣಗಳು ದೊರೆತಿವೆ. ಒಬ್ಬನೇ ಮತದಾರನಿಂದ ಹಲವು ರಾಜ್ಯಗಳಲ್ಲಿ ಮತದಾನವಾಗಿದೆ ಎಂದರು.
ಈ ಕಳ್ಳತನ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ನಡೆದಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಒಂದು ಕ್ಷೇತ್ರದಲ್ಲಿ ನಡೆದ ಕಳ್ಳತನದ ಬಗ್ಗೆ ಪರಿಶೀಲನೆ ಮಾಡಿದ್ದೇವೆ, ರಾಜ್ಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎನ್ನುವುದನ್ನು ಸಾಬೀತು ಮಾಡಬಲ್ಲೆವು ಎಂದರು.
ನರೇಂದ್ರ ಮೋದಿ ಕೇವಲ 25 ಹೆಚ್ಚುವರಿ ಸೀಟುಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಸದ್ಯ ಒಂದು ಸೀಟಿನಲ್ಲಿ ಕಳ್ಳತನವಾಗಿದೆ ಎನ್ನುವುದನ್ನು ಸಾಬೀತು ಮಾಡಿದ್ದೇವೆ. ಎಲೆಕ್ಟ್ರಾನಿಕ್ ಮತಯಂತ್ರದ ಅಂಕಿಅಂಶ ಸಿಕ್ಕರೆ ಮೋದಿಯವರು ಮೋಸದಿಂದ ಪ್ರಧಾನಿಯಾದ ಬಗ್ಗೆ ಸಾಕ್ಷಿ ಸಮೇತ ತೋರಿಸುತ್ತೇವೆ ಎಂದರು.
ಈ ವೇಳೆ ಅವರು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆಗಳನ್ನು ಹಾಕಿದರು. ಮತದಾನ ಮಾಡಿರುವವರ ಡಿಜಿಟಲ್ ಪ್ರತಿಯನ್ನು ನೀಡದಿರುವುದೇಕೆ? ವಿಡಿಯೋ ಸಾಕ್ಷ್ಯಗಳನ್ನು ನಾಶ ಪಡಿಸಿರುವುದೇಕೆ? ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿಯ ಸಾಮೂಹಿಕ ವಂಚನೆಯಲ್ಲಿ ಭಾಗಿಯಾಗಿರುವುದೇಕೆ? ಕೇಂದ್ರ ಚುನಾವಣಾ ಆಯೋಗ ವಿರೋಧ ಪಕ್ಷದ ನಾಯಕರನ್ನು ಬೆದರಿಸುತ್ತಿರುವುದೇಕೆ? ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌ನಂತೆ ವರ್ತಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯ ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಹೆಚ್ಚು ಮತಗಳನ್ನು ಪಡೆದಿತ್ತು. 4 ತಿಂಗಳ ಅಂತರದಲ್ಲೇ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ಹಿಂದೆ ಪಡೆದಷ್ಟೇ ಮತಗಳನ್ನೇ ಪಡೆದಿದ್ದವು. ಆದರೆ 4 ತಿಂಗಳ ಅಂತರದಲ್ಲಿ 1 ಕೋಟಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಆ ಮತಗಳು ಬಿಜೆಪಿಗೆ ಚಲಾವಣೆಯಾಗಿವೆ ಎಂದರು.
ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಕಾಂಗ್ರಸ್‍ನ ಆಂತರಿಕ ಸಮೀಕ್ಷೆ ಹೇಳಿತ್ತು. ಆದರೆ 9ರಲ್ಲಿ ಮಾತ್ರ ಗೆದ್ದಿದ್ದೇವೆ. ಅಲ್ಲಿಂದ ಅನುಮಾನಗಳು ಆರಂಭಗೊಂಡು ಪ್ರಶ್ನೆ ಕೇಳಲಾರಂಭಿಸಿದೆವು. ತಕ್ಷಣವೇ ಕಾನೂನು ತಿದ್ದುಪಡಿ ಮಾಡಿ 45 ದಿನಗಳಲ್ಲೇ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ಅಳಸಿಹಾಕಲಾಗಿವೆ ಎಂದರು.
ಮಹದೇವಪುರ ಕ್ಷೇತ್ರದ ಅಧ್ಯಯನದ ಪ್ರಕಾರ 6 ಮತಗಳಲ್ಲಿ 1 ಮತ ಕಳ್ಳತನವಾಗಿದೆ. 5 ಮಾದರಿಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ. ಆರೂವರೆ ಲಕ್ಷ ಮತಗಳ ಪೈಕಿ ಒಂದೂವರೆ ಲಕ್ಷ ಮತ ನಕಲಿಯಾಗಿವೆ. ತಾವು ಈ ಆರೋಪ ಮಾಡಿದ್ದಕ್ಕೆ ಆಯೋಗ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳುತ್ತಿದೆ. ನಾನು ಸಂಸದನಾಗಿ ಸಂಸತ್ ಒಳಗೆ ಸಂವಿಧಾನ ಹಿಡಿದು ಪ್ರಮಾಣ ಮಾಡಿದ್ದೇನೆ. ಹೇಳುವುದೆಲ್ಲವೂ ಸತ್ಯವಾಗಿದೆ ಎಂದರು.
ಇದಾದ ಬಳಿಕ ಕೆಐಸಿಐ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯದ ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಿದರು.
ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ ರಾಹುಲ್‌ಗಾಂಧಿ, ತಮ್ಮ ಆರೋಪಕ್ಕೆ ಪೂರ್ವಕವಾಗಿ ದಾಖಲಾತಿಗಳನ್ನು ನೀಡಿದ್ದಲ್ಲದೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಇದೇ ವೇಳೆ ಆಯೋಗದ ಅಧಿಕಾರಿಗಳು ರಾಹುಲ್‌ಗಾಂಧಿ ಅವರಿಗೆ ತಮ್ಮ ಆರೋಪಗಳನ್ನು ಪ್ರಮಾಣ ಪತ್ರದ ಮಾದರಿಯಲ್ಲಿ ನೀಡುವಂತೆ ಕೇಳಿದ್ದಾರೆ. ಆದರೆ ಅದಕ್ಕೆ ರಾಹುಲ್‌ಗಾಂಧಿ ನಿರಾಕರಿಸಿದರು.




