ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮದ ಪಾಠ ಕಲಿಸಬೇಕು: ವೆಂಕಟ ನಾಗಪ್ಪ ಶೆಟ್ಟಿ

4 years ago

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮದ ಪಾಠ ಕಲಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಕರೆ ನೀಡಿದರು.

ಭಾರತ ಸೇವಾದಳ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಯಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಉಪಾಧ್ಯಾಯ ಪುನಶ್ಚೇತನ ಶಿಬಿರ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತು ಸಂಯಮ ಧೈರ್ಯಗಳನ್ನು ಕಲಿಸಬೇಕು. ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಜಾಗೃತಗೊಳಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಯಟ್ ಉಪನಿರ್ದೇಶಕ ಪಾಂಡು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಶಿಸ್ತು ಸೇವಾ ಮನೋಭಾವನೆ ದೇಶಪ್ರೇಮದ ಶಿಕ್ಷಣ ಕೂಡ ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಗೌರವ ಮೂಡಿಸುವ ಕಾರ್ಯವನ್ನು ಭಾರತ ಸೇವಾದಳ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎಂದರು.

ಭಾರತ ಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ  ಪ್ರಜ್ಞೆ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ತುಂಬಿ ಅವರನ್ನು ಆದರ್ಶ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಭಾರತ ಸೇವಾದಳದ ಕಾರ್ಯ ಅನುಪಮ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಶೇಷಾಚಲ, ಜ್ಯೋತಿ, ಸಾಹಿತಿ ಪಳನಿಸ್ವಾಮಿ ಜಾಗೇರಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಅನ್ನಪೂರ್ಣಮ್ಮ, ಶಿಕ್ಷಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಶಭಕ್ತಿ ಗೀತೆ, ಸೇವಾದಳದ ಗೀತೆಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ಶಿಕ್ಷಕರು ಪ್ರದರ್ಶಿಸಿದರು.

Leave a Reply